ಮಂಗಳವಾರ, ಮಾರ್ಚ್ 9, 2021
18 °C
ಚಿಕ್ಕಬಳ್ಳಾಪುರ: ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಮೌಢ್ಯ ತೊಡೆದು ಹಾಕಿದ ಚೌಡಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಢ್ಯ ತೊಡೆದು ಹಾಕಿದ ಚೌಡಯ್ಯ

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಹಾಸುಹೊಕ್ಕಿರುವ ಮೌಢ್ಯ, ಅಂಧಶ್ರದ್ಧೆ ಮತ್ತು ಕಂದಾಚಾರ ತೊಡೆದು ಹಾಕಲು ಅಂಬಿಗರ ಚೌಡಯ್ಯನವರಂತಹ ಮಹನೀಯರು 800 ವರ್ಷಗಳ ಹಿಂದೆಯೇ ತಮ್ಮದೇ ಆದ ರೀತಿಯಲ್ಲಿ ಚಳವಳಿ ರೂಪಿಸಿದರು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಗರದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಅಂಕು–ಡೊಂಕು ತಿದ್ದುವಲ್ಲಿ ಮತ್ತು ಜನರಿಗೆ ಹೊಸ ವಿಚಾರ ತಿಳಿಸುವಲ್ಲಿ ಅಂಬಿಗರ ಚೌಡಯ್ಯ ಪ್ರಮುಖ ಪಾತ್ರವಹಿಸಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ–ದೋಷಗಳನ್ನು ಸರಳ ಬರಹದ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿಸಿದರು.ಏನನ್ನೂ ಮಾಡದೆ ಕಾಲ ವ್ಯಯ ಮಾಡುವುದಕ್ಕಿಂತ ಕಾಯಕವೇ ಕೈಲಾಸ ಎಂಬ ತತ್ವದಡಿ ಬದುಕಬೇಕು. ಶಿಕ್ಷಣ, ಮಾನವೀಯ ಮೌಲ್ಯ ಮತ್ತು ಕೌಶಲವನ್ನು ರೂಢಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂಬ ಸಂದೇಶ ನೀಡಿದರು. ಧನಿಕ ಆಗುವುದಕ್ಕಿಂತ ಜನಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬದುಕುವುದೇ ಚೆಂದವೆಂದು ಬೋಧಿಸಿದ ಚೌಡಯ್ಯ ಅವರು ಸರಳತೆ ಮೈಗೂಡಿಸಿಕೊಂಡಿದ್ದರು. ಇತರರಿಗೂ ಅದರ ಮಹತ್ವ ತಿಳಿಸಿದ್ದರು ಎಂದು ಹೇಳಿದರು.ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಮಾತನಾಡಿ, ಸಿರಿವಂತ ಮತ್ತು ಹಣವಂತ ಆಗುವುದಕ್ಕಿಂತ ಈಗಿನ ಕಾಲಘಟ್ಟದಲ್ಲಿ ಜ್ಞಾನವಂತ ಆಗುವುದು ತುಂಬಾ ಮುಖ್ಯವಾಗಿದೆ. ಯಾರ್‌್ಯಾರ ಮನೆಯಲ್ಲಿ ಎಷ್ಟು ಸೀರೆ, ಒಡವೆ ಮತ್ತು ಚಿನ್ನಾಭರಣಗಳಿವೆ ಎಂಬುದನ್ನು ತುಲನೆ ಮಾಡುವುದಕ್ಕಿಂತ ಯಾರೂ ಎಷ್ಟು ಜ್ಞಾನವಂತರು ಆಗಿದ್ದಾರೆ ಎಂಬುದನ್ನು ಗ್ರಹಿಸಬೇಕು. ಮೇಲು–ಕೀಳು ಭಾವ ಇಟ್ಟುಕೊಳ್ಳದೆ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ತತ್ವ ಬೋಧಿಸಿದರು ಎಂದರು.ಗಾಯಕರಾದ ಮಹಾಲಿಂಗಯ್ಯ ಮಠದ್ ಮತ್ತು ತಂಡದ ಸದಸ್ಯರು ಅಂಬಿಗರ ಚೌಡಯ್ಯ ಅವರ ವಚನಗಳ ಗಾಯನ ಮಾಡಿದರು. ಶೈಕ್ಷಣಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಬೆಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ನಗರದ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಕಾರ್ಯಕ್ರಮ ಸ್ಥಳ ಶ್ರೀದೇವಿ ಕಲ್ಯಾಣ ಮಂಟಪದವರೆಗೆ ಬೆಸ್ತ ಸಮುದಾಯದ ಮುಖಂಡರು ಸದಸ್ಯರು ಮೆರವಣಿಗೆ ಕೈಗೊಂಡರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಕೆ.ಜಯರಾಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ಉಪವಿಭಾಗಾಧಿಕಾರಿ ಎಚ್‌.ಅಮರೇಶ್‌, ತಹಶೀಲ್ದಾರ್‌ ಎನ್‌.ಸಿ.ಜಗದೀಶ್ ಇದ್ದರು.ಮಹಾನ್ ಸಂತ

ಬಾಗೇಪಲ್ಲಿ: 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಮೂಢನಂಬಿಕೆ ಹಾಗೂ ಬಾಲ್ಯ ವಿವಾಹಗಳ ವಿರುದ್ಧ ಹೋರಾಟ ಮಾಡಿದ ಮಹಾನ್ ಸಂತ ಅಂಬಿಗರ ಚೌಡಯ್ಯ ಎಂದು ತಹಶೀಲ್ದಾರ್ ಎಂ.ನಾಗರಾಜ್ ತಿಳಿಸಿದರು.ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಗುರುವಾರ  ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು.ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾ.ಪಂ. ಇಒ ರಾಜಣ್ಣ, ಜಿ.ಪಂ. ಸದಸ್ಯೆ ಸಾವಿತ್ರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆದಿಲಕ್ಷ್ಮಮ್ಮ, ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಪೆದ್ದನರಸಿಂಹಲು, ಸಿಡಿಪಿಒ ಆರ್.ಸತ್ಯನಾರಾಯಣ, ತಾಲ್ಲೂಕು  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರೆಡ್ಡಿ, ಅಬಕಾರಿ ಇಲಾಖೆ ನಿರೀಕ್ಷಕ ಕೃಷ್ಣಮೂರ್ತಿ, ಶಿಕ್ಷಣ ಸಂಯೋಜಕರಾದ ಜಿ.ಆರ್.ರಮೇಶ್, ಎನ್.ನಾಗರಾಜ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮೆಹಬೂಬ್ ಸಾಬ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಿ.ವೆಂಕಟರಾಯಪ್ಪ, ಪಂಚಾಯತ್ ರಾಜ್‌ ಇಲಾಖೆ ಕಿರಿಯ ಎಂಜಿನಿಯರ್‌ ವೆಂಕಟರವಣಪ್ಪ, ಕಂದಾಯ ನಿರೀಕ್ಷಕ ಸುಬ್ರಮಣ್ಯಂ ಮತ್ತಿತರರು ಭಾಗವಹಿಸಿದ್ದರು.ಜಾತೀಯತೆ ಇಂದಿಗೂ ಜೀವಂತ

ಚಿಂತಾಮಣಿ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತೀಯತೆ ತೊಲಗಿಸಲು ಹೋರಾಡಿದರೂ ಅದು ಇಂದಿಗೂ ಜೀವಂತವಾಗಿರುವುದು ವಿಷಾದನೀಯ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಬೆಸ್ತರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ‘ನಿಜಶರಣರ ಅಂಬಿಗರ ಚೌಡಯ್ಯ’ ಜಯಂತಿಯಲ್ಲಿ ಮಾತನಾಡಿದರು.ಪ್ರತಿವರ್ಷ ಅನೇಕ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತೇವೆ, ಒಬ್ಬೊಬ್ಬ ಮಹಾತ್ಮರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸಿ ಜಯಂತಿಗಳನ್ನು ಆಚರಿಸುವುದು ಸರಿಯಲ್ಲ. ಯಾವುದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಟ್ಟಿಗೆ ಸೇರಿ ಆಚರಣೆ ಮಾಡಿದಾಗ ಮಾತ್ರ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದರು.ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಸಮಾಜ ಸುಧಾರಕರು, ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಸರಳವಾದ ಭಾಷೆಯಲ್ಲಿ ವಚನಗಳ ಮೂಲಕ ಜನತೆಯ ಪರಿವರ್ತನೆಗೆ ಪ್ರಯತ್ನ ನಡೆಸಿದ್ದರು. ಶರಣರ ಸದ್ಗುಣಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು ಎಂದು ಆಸಕ್ತಿ ವಹಿಸಿದ್ದರು ಎಂದು ತಿಳಿಸಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಚಿಕ್ಕಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೌರಾಯುಕ್ತ ರಾಜಣ್ಣ ಮಾತನಾಡಿದರು. ನಗರಸಭೆ ಅಧ್ಯಕ್ಷ ಎ.ಆರ್‌.ಅನ್ವರ್‌, ಉಪಾಧ್ಯಕ್ಷೆ ತುಳಸಿ, ಸದಸ್ಯರಾದ ಆರ್‌.ಪ್ರಕಾಶ್‌, ಮಂಜುನಾಥ್‌, ಕೃಷ್ಣಪ್ಪ, ವೆಂಕಟರವಣಪ್ಪ, ನಟರಾಜ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶ್ವತ್ಥರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ದನರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್‌ ಖಲೀಲ್‌, ರೇಷ್ಮೆ ಇಲಾಖೆ ಕಾಳಪ್ಪ, ಮೀನುಗಾರಿಕೆ ಇಲಾಖೆ ನಾಗೇಂದ್ರಬಾಬು ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.