ಭಾನುವಾರ, ಜನವರಿ 17, 2021
28 °C
ರಂಗಭೂಮಿ

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’

ವೈ.ಕೆ.ಸಂಧ್ಯಾಶರ್ಮ Updated:

ಅಕ್ಷರ ಗಾತ್ರ : | |

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’

ಮನುಷ್ಯ ಸಮಾಜದ ಮೌಲ್ಯಪಲ್ಲಟಗಳನ್ನು ಮನೋಜ್ಞವಾಗಿ ಚಿತ್ರಿಸುವ ‘ಒರೆಸ್ತಿಸ್ ಪುರಾಣ’ ಗ್ರೀಕ್‌ ನಾಟಕವನ್ನು (ಕನ್ನಡಾನುವಾ:ದಡಾ.ವಿಜಯಾ ಗುತ್ತಲ) ಹೆಗ್ಗೋಡಿನ ನೀನಾಸಮ್‌ ಸ್ಥಳೀಯರ ತಂಡ ಇತ್ತೀಚೆಗೆ ರಂಗಶಂಕರದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿತು.  ಕ್ರಿ.ಪೂ. 456ರಷ್ಟು ಹಿಂದಿನ ಪ್ರಾಚೀನ ಗ್ರೀಕ್‌ ನಾಟಕಕಾರ ಏಸ್ಕೈಲಸ್‌ನ ‘ಒರೆಸ್ಟಿಯಾ’ ಎಂಬ ಪ್ರಸಿದ್ಧ ನಾಟಕ ತ್ರಿವಳಿ ಇದು. ಇದನ್ನು ಆಧರಿಸಿ ರಂಗವೇರಿದ ಈ ಶೈಲೀಕೃತ ನಾಟಕವನ್ನು ನಮ್ಮ ಭಾರತೀಯ ಪುರಾಣಗಳಷ್ಟೇ ಆಪ್ತವಾಗಿಸಿದ ಯಶಸ್ವೀ ನಿರ್ದೇಶಕರು ಬಿ.ಆರ್.ವೆಂಕಟರಮಣ ಐತಾಳರು.ಟ್ರಾಯ್ ಯುದ್ಧದಲ್ಲಿ ಹತ್ತು ವರ್ಷಗಳ ಕಾಲ ಕಾದಾಡಿ ಗೆದ್ದು ಬಂದ ದೊರೆ ಆಗಮೆಮ್ನಾನ್ ತನ್ನ ಹೆಂಡತಿ ಹಾಗೂ ಅವಳ ಪ್ರಿಯಕರನ ಸಂಚಿಗೆ ಬಲಿಯಾಗಿ ಸಾವನ್ನಪ್ಪುತ್ತಾನೆ. ಆಗ ಅವನ ಮಕ್ಕಳಾದ ಎಲೆಕ್ಟ್ರಾ ಮತ್ತು ಒರೆಸ್ಟಸ್ ತಂದೆಯ ಕೊಲೆಯ ಪ್ರತೀಕಾರಕ್ಕಾಗಿ ಹಾತೊರೆಯುವರು. ಸಮಯ ಕಾದು ಒರೆಸ್ಟಸ್ ತನ್ನ ತಾಯಿ ಮತ್ತವಳ ಪ್ರಿಯಕರನನ್ನು ಹತ್ಯೆ ಮಾಡುತ್ತಾನೆ. ಆಗ ಹೆತ್ತತಾಯಿಯನ್ನು ಕೊಂದ ಪಾತಕಿಯನ್ನು ನಿರ್ನಾಮ ಮಾಡಲು ‘ಎರೀನಿಯಾ’ ಉಗ್ರದೇವತೆಗಳು ಅವನ ಬೆನ್ನಟ್ಟಿದಾಗ ಅವನು ‘ಅಪೊಲೋ’ ದೇವತೆಯ ಮೊರೆಹೋಗುತ್ತಾನೆ.ಆನಂತರ ಅವನ ಸಲಹೆಯಂತೆ ಒರೆಸ್ಟಸ್, ಅಥೆನಾ ದೇವತೆಗೆ ಶರಣಾಗಿ ಪ್ರಾಣಭಿಕ್ಷೆ ಬೇಡುತ್ತಾನೆ. ಅವನು ಎಸಗಿದ ಜೋಡಿ ಪಾತಕಗಳ ನ್ಯಾಯ ನಿರ್ಣಯಕ್ಕಾಗಿ ಆಕೆ ಹನ್ನೆರಡು ನ್ಯಾಯಾಧೀಶರನ್ನು ನೇಮಿಸಿದಾಗ ಹೊಸ ಮತ್ತು ಹಳೆಯ ಮಾನದಂಡಗಳು ಮುಖಾಮುಖಿಯಾಗುತ್ತವೆ. ಹಳೆ ಪೀಳಿಗೆಯನ್ನು ಪ್ರತಿನಿಧಿಸುವ ಉಗ್ರದೇವತೆಗಳು,  ರಕ್ತಸಂಬಂಧಿಯಲ್ಲದ ಗಂಡನನ್ನು ರಾಣಿ ಕೊಂದದ್ದು ಪಾಪವಲ್ಲ. ಆದರೆ ರಕ್ತ ಸಂಬಂಧಿಯಾದ ತಾಯಿಯನ್ನು ಒರೆಸ್ಟಿಸ್ ಕೊಂದದ್ದು ಮಹಾಪಾಪ, ಶಿಕ್ಷಾರ್ಹ ಅಪರಾಧವೆಂದು ವಾದಿಸುತ್ತವೆ. ಹೀಗಾಗಿ ಪರ ಮತ್ತು ವಿರೋಧದ ಅಭಿಪ್ರಾಯ ಸಂಗ್ರಹ ಹಾಗೂ ನ್ಯಾಯದಾನಕ್ಕಾಗಿ ಮತಪೆಟ್ಟಿಗೆಯನ್ನು ಇಡಲಾಗುತ್ತದೆ.ಕಡೆಗೆ ನ್ಯಾಯಾಧೀಶರು ನೀಡುವ ಮತಗಳು ಸಮ ಸಮವಾಗಿ ಗೊಂದಲ ಏರ್ಪಡುತ್ತದೆ. ಒರೆಸ್ಟಸ್‌ಗೆ ಶಿಕ್ಷೆಯಾಗಲೇಬೇಕೆಂದು ಉಗ್ರದೇವತೆಗಳು ಪಟ್ಟುಹಿಡಿದಾಗ ‘ಅಥೆನಾ’ ನ್ಯಾಯದಾನದಲ್ಲಿ ತನ್ನದೂ ಒಂದು ವಿಶೇಷಮತವಿದೆಯೆಂದು ತಿಳಿಸಿ ತನ್ನ ಮತವನ್ನು ಅವನ ಪರವಾಗಿ ಹಾಕಿ ಅವನನ್ನು ದೋಷವಿಮುಕ್ತನನ್ನಾಗಿಸಿ, ದೇವತೆಗಳನ್ನು ಸಮಾಧಾನಿಸುತ್ತಾಳೆ. ಹಳೇಕಾಲದ ದೇವತೆಗಳು ಮತ್ತು ಹೊಸಕಾಲದ ಯುವದೇವತೆಗಳ ನಿಲುವು, ಅಭಿಪ್ರಾಯಗಳ ಮಂಡನೆಯಲ್ಲಿ ಬಿಸಿ ವಾಗ್ವಾದ-ಚರ್ಚೆ ನಡೆಯುತ್ತದೆ.ಅವಳ ಈ ನ್ಯಾಯವನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಆ ಉಗ್ರದೇವತೆಗಳು ಮನುಕುಲದ ಕೇಡು-ಸೇಡುಗಳ ಕೊನೆಗಾಗಿ ಅಥೆನಾಳ ನ್ಯಾಯ ಒಪ್ಪಿಕೊಳ್ಳುವುದಾಗಿ ತಿಳಿಸುತ್ತ, ‘ನೆಲ ಮಣ್ಣಿನ ಸತ್ಯದ ಮೇಲೆ ಗಂಡುದರ್ಪದ ನ್ಯಾಯವು ನೆಲೆಗೊಂಡ ಕಥೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ತಮ್ಮ ಅಸಂತೃಪ್ತಿಯನ್ನು ಹೊರಸೂಸುತ್ತವೆ. ಈ ಬಗೆಯಲ್ಲಿ ನಾಟಕವು ಮಾತೃಪ್ರಧಾನ, ಪಿತೃಪ್ರಧಾನ ವ್ಯವಸ್ಥೆಗಳ, ರಕ್ತ-ಕುಟುಂಬ ಸಂಬಂಧಗಳ, ಕುಲ-ರಾಜ್ಯಗಳ ನಡುವೆ ಹೊಂದಾಣಿಕೆಯೊಂದು ಸಾಧ್ಯವೆಂಬ ಆಶಯವನ್ನು ಮುಂದಿಡುತ್ತದೆ.ಈ ಗ್ರೀಕ್‌ ಪುರಾಣವು, ಹಳೆಯ ಮತ್ತು ಹೊಸ ನಂಬಿಕೆ-ಮೌಲ್ಯಗಳ ಸಂಘರ್ಷದ ಹೊರಳುದಾರಿಯ ಸಾಮಾಜಿಕ ಕಾಲಘಟ್ಟದ ಚಿತ್ರಣವನ್ನು ನೀಡುತ್ತದೆ. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಸೈದ್ಧಾಂತಿಕ ನಂಬಿಕೆಗಳಲ್ಲಿ ವ್ಯತ್ಯಾಸವಿದ್ದರೂ, ಮನುಷ್ಯ ನೆಲೆಯ ನಂಬಿಕೆಗಳೆಲ್ಲ ಒಂದೇ ಎಂಬ ವಿಷಯದಲ್ಲಿ ಇದು ನಮ್ಮ ಭಾರತೀಯ ಪುರಾಣಗಳಿಗೆ ಸಮೀಪವಿರುವುದನ್ನು ಅನುಭವಕ್ಕೆ ತರುತ್ತದೆ. ಸಾಮಾನ್ಯವಾಗಿ ಎಲ್ಲಾ ಗ್ರೀಕ್ ಟ್ರಾಜಿಡಿ ನಾಟಕಗಳಲ್ಲೂ ಈ ಎರಡೂ ಮನೋಧರ್ಮಗಳ ಸಮನ್ವಯತೆಯ ಪ್ರಯತ್ನವಿದೆ. ಅಂತಿಮವಾಗಿ ಔಪಚಾರಿಕವಾಗಿಯಾದರೂ ರಾಜ್ಯಶಕ್ತಿಯ ಗೆಲುವನ್ನು ಎತ್ತಿ ಹಿಡಿಯುತ್ತದೆ.ಶಾಸ್ತ್ರೀಯ (ಕ್ಲಾಸಿಕ್ಸ್) ನಾಟಕಗಳಿಗೆ ಅನೇಕ ಧ್ವನ್ಯಾರ್ಥಗಳನ್ನೂ ಹೊಮ್ಮಿಸುವ ಸಾಮರ್ಥ್ಯವಿರುವುದರಿಂದ ಇಂಥ ನಾಟಕಗಳಲ್ಲಿ ಸಾರ್ವಕಾಲಿಕ ಮೌಲ್ಯ ಅಡಕಗೊಡಿರುತ್ತದೆ. ಈ ನಾಟಕದಲ್ಲಿ ಸಂಭವಿಸುವ ಅನೇಕ ಸಂಗತಿ-ಘಟನೆಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಇಂದಿಗೂ ಉಳಿದು ಬಂದಿರುವ ತಾತ್ವಿಕ ಭಿನ್ನಾಭಿಪ್ರಾಯಗಳ ಸಂಘರ್ಷ, ಪರ-ವಿರೋಧಗಳ, ನ್ಯಾಯಾನ್ಯಾಯಗಳ ಜಗಳ, ಕಿತಾಪತಿ, ಮತದಾನಗಳ ವ್ಯವಸ್ಥೆ, ಅದರಿಂದುಂಟಾಗುವ ಅನೇಕ ಸಮಸ್ಯೆಗಳು, ಅತೃಪ್ತಿಯ ಕಾದಾಟ, ಸಾಮಾಜಿಕ ಕುದಿತಗಳ ಸಂಗತಿಗಳು ತೀರಾ ಭಿನ್ನವೇನಲ್ಲ.ಹೀಗಾಗಿ ನೋಡುಗರಿಗೆ ಗ್ರೀಕ್‌ ಪುರಾಣದಲ್ಲಿನ ಸಾರ್ವತ್ರಿಕ ಅಂಶಗಳಿಂದಾಗಿ ನಾಟಕದ ಕಥಾವಸ್ತು ಅಷ್ಟಾಗಿ ಅಪರಿಚಿತವೆನಿಸದು. ನಮ್ಮಲ್ಲಿರುವಂತೆಯೇ ವರ, ಶಾಪ-ವಿಶಾಪ ಇತ್ಯಾದಿ ನಂಬಿಕೆಗಳ ಪ್ರತಿಮೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ವಿವಿಧ ವೃತ್ತಿಗಳಲ್ಲಿ ನಿರತರಾದ ಹೆಗ್ಗೋಡಿನ ಗ್ರಾಮಸ್ಥರೊಂದಿಗೆ ಗೃಹಿಣಿಯರೂ ಸೇರಿ ಅಭಿನಯಿಸಿದ ಈ ಹವ್ಯಾಸಿ ನಾಟಕತಂಡ ಅನುಭವಿ ನಟರ ನುರಿತ ಅಭಿನಯವನ್ನು ನೀಡಿತು. ಭಾರತೀಯ ಪ್ರೇಕ್ಷಕರಿಗೆ ನಿಲುಕುವಂಥ, ಆನಂದಿಸುವಂಥ, ಯಕ್ಷಗಾನ, ಕಳರಿ, ಕಥಕ್ಕಳಿ, ಕೊಡಿಯಾಟ್ಟಂ ಮತ್ತು ಮಣಿಪುರಿ ಹೆಜ್ಜೆಗಾರಿಕೆಯ ಸ್ವರೂಪಗಳನ್ನು ಒಗ್ಗೂಡಿಸಿ ಮಾಡಿದ, ಸಾಂಸ್ಕೃತಿಕ ಹೆಣಿಗೆಯ ಪ್ರಾಯೋಗಿಕ ನಾಟಕ ಇದಾಗಿತ್ತು.ನಾಟಕದ ಪ್ರಮುಖ ಆಕರ್ಷಣೆ ನಾಟಕದ ಚಲನೆಯ ವಿನ್ಯಾಸಗಳು, ನವೀನ ವೇಷಭೂಷಣ (ಎಲ್ಲ ಪಾತ್ರಗಳಿಗೂ ಒಂದೇ ಬಗೆಯ ಕಾಸ್ಟ್ಯೂಮ್ಸ್)ಗಳ ವೈಶಿಷ್ಟ್ಯ ಮತ್ತು ಪ್ರತಿಪಾತ್ರಗಳ ಸಂಭಾಷಣೆಯಲ್ಲಿದ್ದ ಖಾಚಿತ್ಯ, ಸ್ಪಷ್ಟಭಾಷೆಯ ಬಳಕೆ ಹಾಗೂ ಸ್ಫುಟತ್ವ. ಪೌರ್ವಾತ್ಯ ದೇಶಗಳ ಹಾಗೂ ಈಜಿಪ್ಟಿನ ಶೈಲಿಯಲ್ಲಿ ತಯಾರಿಸಿದ ಆಯಾ ಪಾತ್ರದ ಸ್ಥಾನ-ಮಾನಗಳನ್ನು ಸೂಚಿಸುವಂಥ ಶಿರೋಭೂಷಣ (ಹೆಡ್‍ಗೇರ್ಸ್)ಗಳ ವೈವಿಧ್ಯ ನಿಜಕ್ಕೂ ಆಕರ್ಷಣೀಯವಾಗಿದ್ದವು.ಉಗ್ರ ದೇವತೆಗಳು ಧರಿಸಿದ್ದ ಸರ್ಪಗಳ ಶಿರೋಭೂಷಣದ ಜೊತೆಗೆ ನ್ಯಾಯಾಧೀಶರು ಧರಿಸಿದ್ದ ಮೈಸೂರುಪೇಟ ಮತ್ತು ದಿರಿಸುಗಳು ಗಮನಾರ್ಹವಾಗಿದ್ದವು. ಹೊಸ ಅನುಭವವನ್ನು ಕಟ್ಟಿಕೊಡಲು ಸಹಕಾರಿಯಾಗಿದ್ದ ವಿಶೇಷ ರಂಗಸಜ್ಜಿಕೆ, ರಂಗಪರಿಕರಗಳ ಬಳಕೆ ಮತ್ತು ಪ್ರಸಾಧನದಲ್ಲಿ ಹೊಸತನ ಮೆರೆದದ್ದು ನೋಡುಗರನ್ನು ಸೆಳೆಯಿತು. ಹಿನ್ನೆಲೆಯ ಶಕ್ತಿಶಾಲಿ ಚೆಂಡೆಯ ನಾದದೊಂದಿಗೆ ಮೂಡಿಬಂದ ಜಪಾನೀಯ ಹಾಡುಗಳು, ಖುರಾನ್‌ ಪಠಣದ ಹಾಗೂ ಸಾಮವೇದದ ಭಾಸವನ್ನುಂಟು ಮಾಡಿದ ಸಂಗೀತದಲೆಗಳು ದೃಶ್ಯಗಳ ವೇಗವನ್ನು ಹುರಿಗಟ್ಟಿಸಿತು. ನಾಟಕದ ಪರಿಪೂರ್ಣತೆಯಲ್ಲಿ ಮೇಳದ ಮುಖ್ಯಪಾತ್ರವನ್ನು ಹೆಸರಿಸಲೇಬೇಕು. ಬೆಳಕು ಕರಾರುವಾಕ್ಕಾಗಿ ಕೆಲಸ ನಿರ್ವಹಿಸಿತ್ತು.ಪ್ರಾರಂಭಿಕ ದೃಶ್ಯದಿಂದ ಆಸಕ್ತಿ-ಕುತೂಹಲ ಮೂಡಿಸಿದ್ದ ನಾಟಕದ ಹೈಲೈಟ್ ಎಂದರೆ ನ್ಯಾಯತೀರ್ಮಾನದ ಅಂತಿಮ ದೃಶ್ಯ. ರಂಗದ ಮೇಲೆ ಎರಡೂ ಪಕ್ಷಗಳು ಮತ್ತು ಆಚೀಚೆ ಎತ್ತರದ ಜಾಗಗಳಲ್ಲಿ ದೇವತೆಗಳು ನಡುಮಧ್ಯೆ ಎಂಟುಮಂದಿ ನ್ಯಾಯಾಧೀಶರು ಕುಳಿತಿದ್ದ ದೃಶ್ಯಕಲ್ಪನೆಯಲ್ಲಿ ರೂಪಿಸಿದ್ದ ರಂಗಸಮನ್ವಯತೆ ಮೆಚ್ಚುವಂತಿತ್ತು. ಪ್ರಮುಖವಾಗಿ ನಿರ್ದೇಶಕ ವೆಂಕಟರಮಣ ಐತಾಳರ ಹೊಸಪರಿಕಲ್ಪನೆಯಲ್ಲಿ ಅರಳಿದ ನಾಟಕ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆಯಿತೆನ್ನುವುದರಲ್ಲಿ ಎರಡು ಮಾತಿಲ್ಲ. ಏಕಾಗ್ರತೆ ಮತ್ತು ಸಮಗ್ರತೆಯನ್ನು ಕಟ್ಟಿಕೊಟ್ಟ ಈ ನಾಟಕವನ್ನು ಮುಕ್ತಾಯ ಎನ್ನುವಂತಿಲ್ಲದ ಪ್ರಶ್ನಾರ್ಹ ಹಂತದಲ್ಲಿ ನಿಲ್ಲಿಸಿದ್ದು, ನೋಡುಗರನ್ನು ಚಿಂತನೆಗೆ ಹಚ್ಚುವುದರಲ್ಲಿ ಯಶಸ್ವಿಯಾಯಿತೆನ್ನಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.