ಸೋಮವಾರ, ಮಾರ್ಚ್ 8, 2021
26 °C
ಇಂದು ರಾಯಲ್‌ ಚಾಲೆಂಜರ್ಸ್‌- ಕಿಂಗ್ಸ್‌ ಇಲೆವೆನ್‌ ಪೈಪೋಟಿ; ಒತ್ತಡದಲ್ಲಿ ಕೊಹ್ಲಿ ಬಳಗ

ಮ್ಯಾಕ್ಸ್‌ವೆಲ್‌- ಗೇಲ್‌ ಬಲಾಬಲಕ್ಕೆ ವೇದಿಕೆ ಸಜ್ಜು

ಮಹಮ್ಮದ್‌ ನೂಮಾನ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾಕ್ಸ್‌ವೆಲ್‌- ಗೇಲ್‌ ಬಲಾಬಲಕ್ಕೆ ವೇದಿಕೆ ಸಜ್ಜು

ಬೆಂಗಳೂರು: ಗ್ಲೆನ್‌ ಮ್ಯಾಕ್ಸ್‌ವೆಲ್‌, ಡೇವಿಡ್‌ ಮಿಲ್ಲರ್‌, ವೀರೇಂದ್ರ ಸೆಹ್ವಾಗ್‌, ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ಸ್‌, ವಿರಾಟ್‌ ಕೊಹ್ಲಿ...

ಅಬ್ಬರದ ಬ್ಯಾಟಿಂಗ್‌ನಲ್ಲಿ ಹೆಸರು ಮಾಡಿರುವ ಆಟಗಾರರು ಇವರು. ಒಬ್ಬರನ್ನು ಮೀರಿಸುವ ತಾಕತ್ತು ಇನ್ನೊಬ್ಬರ ಬಾಹುಗಳಲ್ಲಿ ಅಡಗಿದೆ.ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಬ್ಯಾಟಿಂಗ್‌ ವೈಭವ ತೋರಲು ಈ ಆಟಗಾರರು ಸಜ್ಜಾಗಿದ್ದು, ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಹೆಚ್ಚಿದೆ.ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡಗಳು ಪೈಪೋಟಿ ನಡೆಸಲಿದ್ದು, ಬ್ಯಾಟ್ಸ್‌ಮನ್‌ಗಳ ಮೇಲಾಟವನ್ನು ನಿರೀಕ್ಷಿಸಲಾಗಿದೆ.ಗೆಲುವಿನ ಓಟ ನಡೆಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕಿಂಗ್ಸ್‌ ಇಲೆವೆನ್‌ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕೈಯಲ್ಲಿ ಎದುರಾದ ಸೋಲಿನ ಕಹಿಯನ್ನು ಮರೆತು ಸಂಘಟಿತ ಹೋರಾಟ ತೋರುವ ಸವಾಲು ವಿರಾಟ್‌ ಕೊಹ್ಲಿ ಬಳಗದ ಮುಂದಿದೆ.ಒತ್ತಡದಲ್ಲಿ ಆರ್‌ಸಿಬಿ: ಏಳು ಪಂದ್ಯಗಳಿಂದ ಆರು ಪಾಯಿಂಟ್‌ ಹೊಂದಿರುವ ಆರ್‌ಸಿಬಿ ಅತಿಯಾದ ಒತ್ತಡದಲ್ಲೇ ಆಡಲಿದೆ. ‘ಪ್ಲೇ ಆಫ್‌’ ಹಂತದ ಸಾಧ್ಯತೆಯನ್ನು ಹೆಚ್ಚಿಸಲು ತಂಡಕ್ಕೆ ಇಂದು ಜಯ ಅನಿವಾರ್ಯ. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಂತಹ ಆಟಗಾರರನ್ನು ಹೊಂದಿರುವ ಎದುರಾಳಿ ಬಳಗವನ್ನು ಮಣಿಸುವುದು ಅಷ್ಟು ಸುಲಭವಲ್ಲ ಎಂಬದು ಆರ್‌ಸಿಬಿಗೆ ತಿಳಿದಿದೆ.ಸ್ಫೋಟಕ ಬ್ಯಾಟಿಂಗ್‌ ತೋರಬಲ್ಲ ಆಟಗಾರರು ಆರ್‌ಸಿಬಿಯಲ್ಲೂ ಇದ್ದಾರೆ. ಗೇಲ್‌, ಕೊಹ್ಲಿ, ಯುವರಾಜ್‌ ಸಿಂಗ್‌ ಮತ್ತು ಎಬಿ ಡಿವಿಲಿಯರ್ಸ್‌ ಭರ್ಜರಿ ಆಟ ತೋರಬಲ್ಲರು. ಆದರೆ ಯಾರೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ. ಇದು ಚಿಂತೆಗೆ ಕಾರಣವಾಗಿದೆ.ಗೇಲ್‌ ಇನ್ನೂ ಪೂರ್ಣ ದೈಹಿಕ ಸಾಮರ್ಥ್ಯ ಪಡೆದಿಲ್ಲ. ಬ್ಯಾಟಿಂಗ್‌ ಬಲ ಹೆಚ್ಚಿಸುವ ಉದ್ದೇಶದಿಂದ ತಂಡದ ಆಡಳಿತ ಅವರನ್ನು ಕಣಕ್ಕಿಳಿಸುತ್ತಿದೆ. ವೆಸ್ಟ್‌ ಇಂಡೀಸ್‌ನ ಈ ಬ್ಯಾಟ್ಸ್‌ಮನ್‌ ಹಳೆಯ ವೈಭವ ಮರಳಿ ಪಡೆದರೆ ಆರ್‌ಸಿಬಿ ಗೆಲುವಿನ ಹಾದಿಗೆ ಮರಳಬಹುದು.ಇದೇ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಬ್ಬರದ ಆಟ ತೋರಿದ್ದ ಎಬಿ ಡಿವಿಲಿಯರ್ಸ್‌ ಮತ್ತೊಮ್ಮೆ ಬ್ಯಾಟಿಂಗ್‌ ರಸದೌತಣ ಉಣಬಡಿಸುವರೇ ಎಂಬುದನ್ನು ನೋಡಬೇಕು.ಆತ್ಮವಿಶ್ವಾಸದಲ್ಲಿ ಕಿಂಗ್ಸ್‌ ಇಲೆವೆನ್‌: ಜಾರ್ಜ್‌ ಬೇಲಿ ನೇತೃತ್ವದ ಕಿಂಗ್ಸ್‌ ಇಲೆವೆನ್‌ ಟೂರ್ನಿಯಲ್ಲಿ ಇದುವರೆಗೆ ತೋರಿರುವ ಆಟ ಅದ್ಭುತ. ಈ ತಂಡದ ಬ್ಯಾಟಿಂಗ್‌ ಶಕ್ತಿ ಅಪಾರವಾಗಿದೆ.ಪಂಜಾಬ್‌ನ ತಂಡ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲೂ 190ಕ್ಕಿಂತ ಅಧಿಕ ರನ್‌ ಕಲೆಹಾಕಿದೆ. ಟೂರ್ನಿಯಲ್ಲಿ ಗರಿಷ್ಠ ಮೊತ್ತ ಪೇರಿಸಿದ ಗೌರವ ಕೂಡಾ ಕಿಂಗ್ಸ್‌ ಇಲೆವೆನ್‌ ಹೆಸರಿನಲ್ಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಈ ತಂಡ 4 ವಿಕೆಟ್‌ ಕಳೆದುಕೊಂಡು 231 ರನ್‌ ಪೇರಿಸಿತ್ತು.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾದ ಈ ಬ್ಯಾಟ್ಸ್‌ಮನ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮ್ಯಾಕ್ಸ್‌ವೆಲ್‌ ಅವರನ್ನು ಕಟ್ಟಿಹಾಕುವ ಯೋಜನೆ ರೂಪಿಸಿಕೊಂಡು ಆರ್‌ಸಿಬಿ ಕಣಕ್ಕಿಳಿಯಲಿದೆ. ಅದರ ಜೊತೆಗೆ ಮಿಲ್ಲರ್‌ ಮತ್ತು ಸೆಹ್ವಾಗ್‌ ಅಬ್ಬರಿಸದಂತೆ ನೋಡಿಕೊಳ್ಳುವ ಸವಾಲು ಕೂಡಾ ಆರ್‌ಸಿಬಿ ಬೌಲರ್‌ಗಳ ಮುಂದಿದೆ.ಆತಿಥೇಯ ತಂಡದ ಬೌಲರ್‌ಗಳಾದ ಮಿಷೆಲ್‌ ಸ್ಟಾರ್ಕ್‌, ವರುಣ್‌ ಆ್ಯರನ್‌, ಅಶೋಕ್‌ ದಿಂಡಾ ಮತ್ತು ಯಜುವೇಂದ್ರ ಚಾಹಲ್‌ಗೆ ಇಂದಿನ ಪಂದ್ಯ ನಿಜವಾಗಿಯೂ ಒಂದು ‘ಅಗ್ನಿಪರೀಕ್ಷೆ’.ಏಪ್ರಿಲ್‌ 28 ರಂದು ದುಬೈನಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ ಕಿಂಗ್ಸ್‌ ಇಲೆವೆನ್‌ ಐದು ವಿಕೆಟ್‌ಗಳ ಜಯ ಪಡೆದಿತ್ತು. ಅಂದಿನ ಸೋಲಿಗೆ ಮುಯ್ಯಿ ತೀರಿಸುವ ಲೆಕ್ಕಾಚಾರವನ್ನು ಕೊಹ್ಲಿ ಬಳಗ ಹೊಂದಿದೆ.ಮಳೆ ಸಾಧ್ಯತೆ: ಉದ್ಯಾನನಗರಿಯಲ್ಲಿ ಗುರುವಾರ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಜೊತೆಗೆ ಮಳೆಯೂ ಸುರಿದಿತ್ತು. ಹವಾಮಾನ ಇಲಾಖೆ ಪ್ರಕಾರ ಇನ್ನೆರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆಯಿದೆ. ಹಾಗಾದಲ್ಲಿ ಕ್ರಿಕೆಟ್‌ ಪ್ರಿಯರು ನಿರಾಸೆ ಅನುಭವಿಸಲಿದ್ದಾರೆ. ಮಳೆ ದೂರ ನಿಂತರೆ ರನ್‌ ಮಳೆ ಸುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.ಇಂದಿನ ಪಂದ್ಯ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು - ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಸ್ಥಳ: ಬೆಂಗಳೂರು

ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೋನಿ ಸಿಕ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.