ಶನಿವಾರ, ಮೇ 15, 2021
24 °C

ಯಡಿಯೂರಪ್ಪ ಮನೆಯಲ್ಲಿ ನೀರವ ಮೌನ: ಆಪ್ತರಲ್ಲಿ ದುಗುಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಶಿಫಾರಸುಗಳ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಾಳಯದಲ್ಲಿ ಒಂದು ಬಗೆಯ ಆತಂಕ ಆವರಿಸಿದೆ. ಆಪ್ತರಾದ ಸಚಿವರು ಮತ್ತು ಶಾಸಕರು ಅವರನ್ನು ಭೇಟಿ ಮಾಡಿ ಮುಂದಿನ ಪರಿಣಾಮಗಳ ಬಗ್ಗೆ ಶುಕ್ರವಾರ ಸಮಾಲೋಚನೆ ನಡೆಸಿದರು.ಸಿಇಸಿ ಶಿಫಾರಸುಗಳ ವಿಷಯ ತಿಳಿದು ಸಚಿವರಾದ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ, ರೇವೂ ನಾಯಕ ಬೆಳಮಗಿ, ಶಾಸಕರಾದ ಲಕ್ಷ್ಮಣ ಸವದಿ, ಎಸ್.ಆರ್.ವಿಶ್ವನಾಥ್, ನಂದೀಶ ರೆಡ್ಡಿ, ಸಂಜಯ ಪಾಟೀಲ್, ಗೋಪಾಲಕೃಷ್ಣ ಬೇಳೂರು, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಹಲವರು ಯಡಿಯೂರಪ್ಪ ಅವರ ನಿವಾಸದತ್ತ ಧಾವಿಸಿ ಬಂದರು. ಭೇಟಿ ಮಾಡಲು ಬಂದವರ ಜತೆ ನಗುತ್ತಲೇ ಮಾತನಾಡಿದ ಯಡಿಯೂರಪ್ಪ ಅವರು, ಎಲ್ಲವನ್ನೂ ಧೈರ್ಯವಾಗಿ ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆ ಹೇಳುತ್ತಲೇ `ಈ ಎಲ್ಲದಕ್ಕೂ ನಮ್ಮ ಪಕ್ಷದವರೇ ಕಾರಣ~ ಎಂದು ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.`ತಾಯಿಯೇ ಮಕ್ಕಳಿಗೆ ವಿಷ ಕೊಟ್ಟರೆ ಹೇಗೆ? ಅಂತಹ ಪರಿಸ್ಥಿತಿ ನನಗೆ ಎದುರಾಗಿದೆ. ವಿರೋಧ ಪಕ್ಷದವರು ಎಷ್ಟೇ ಪಿತೂರಿ ಮಾಡಿದ್ದರೂ ಅದನ್ನು ಎದುರಿಸುತ್ತಿದ್ದೆ. ಆದರೆ, ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಆಪ್ತರು, `ದೇವರಿದ್ದಾನೆ. ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ಆ ಬಗ್ಗೆ ಚಿಂತೆ ಮಾಡಬೇಡಿ~ ಎಂದು ಸಮಾಧಾನಪಡಿಸಿದರು ಎಂದು ಗೊತ್ತಾಗಿದೆ. ಆದರೆ, ಆಪ್ತರ ಮುಖದಲ್ಲಿ ಎಂದಿನ ಮಂದಹಾಸ ಮರೆಯಾಗಿತ್ತು. ಎರಡು ಬಾರಿ ಪ್ರತ್ಯೇಕ ಸಭೆಗಳನ್ನು ನಡೆಸಿದ ಯಡಿಯೂರಪ್ಪ ಅವರು, `ಪಕ್ಷದಲ್ಲೇ ಇದ್ದು ಎಲ್ಲವನ್ನೂ ಎದುರಿಸುತ್ತೇನೆ. ಪಕ್ಷ ಬಿಟ್ಟು ಹೋಗುವುದಿಲ್ಲ~ ಎಂದೂ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.ನೀರವ ಮೌನ: ಸಿಇಸಿ ವರದಿಯಿಂದಾಗಿ ಮನೆಯಲ್ಲಿ ಒಂದು ರೀತಿ ನೀರವ ಮೌನ. ಮಗ, ಸಂಸದ ಬಿ.ವೈ.ರಾಘವೇಂದ್ರ ಬಂದು- ಹೋಗುವವರ ಜತೆ ಮಾತನಾಡುತ್ತಿದ್ದರು. ಯಡಿಯೂರಪ್ಪ ಪ್ರತ್ಯೇಕ ಕೊಠಡಿಯಲ್ಲಿ  ಆಪ್ತರೊಂದಿಗೆ ಮಾತುಕತೆಯಲ್ಲಿ ಮಗ್ನರಾಗಿದ್ದರು. ಮತ್ತೊಬ್ಬ ಪುತ್ರ ಬಿ.ವೈ.ವಿಜಯೇಂದ್ರ ದೆಹಲಿಯಿಂದ ಕ್ಷಣ ಕ್ಷಣಕ್ಕೂ ದೂರವಾಣಿ ಕರೆ ಮಾಡಿ ಎಲ್ಲವನ್ನೂ ವಿವರಿಸುತ್ತಿದ್ದರು.`ಸಿಇಸಿ ವರದಿ ಸಲ್ಲಿಕೆ ನಂತರ ಸುಪ್ರೀಂಕೋರ್ಟ್ ಅದನ್ನು ತಿರಸ್ಕರಿಸಿತು~ ಎಂದು ಯಡಿಯೂರಪ್ಪ ಪರ ವಕೀಲರು ದೂರವಾಣಿ ಮೂಲಕ ತಿಳಿಸಿದರು. ಇದು ಸ್ವಲ್ಪ ಹೊತ್ತು ಸಂಭ್ರಮದ ವಾತಾವರಣಕ್ಕೆ ಕಾರಣವಾಗಿತ್ತು.  ಕೆಲವರು ಸಿಹಿ ಹಂಚಲು ಸಿದ್ಧತೆ ಕೂಡ ನಡೆಸಿದರು. ಆದರೆ, ಆ ಕುರಿತು ಯಾವ ಟಿವಿ ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರಗೊಳ್ಳದ ಕಾರಣ ಅನುಮಾನಗಳು ಎದ್ದವು. ಈ ಕುರಿತು ಗುಸುಗುಸು ಶುರುವಾಯಿತು. ಇದೇ 23ಕ್ಕೆ  ಪ್ರಕರಣ ವಿಚಾರಣೆಗೆ ಬರಲಿದ್ದು, ಅದರ ನಂತರವೇ ಎಲ್ಲವೂ ನಿರ್ಧಾರ ಆಗಲಿದೆ~ ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.