ಸೋಮವಾರ, ಜನವರಿ 20, 2020
29 °C

ಯಶಸ್ವಿನಿ ಯೋಜನೆ: 52,397 ಸದಸ್ಯರ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಯಶಸ್ವಿನಿ ಯೋಜನೆಯು ರಾಜ್ಯದ ಗ್ರಾಮೀಣ ಸಹಕಾರಿ ರೈತ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗಾಗಿಯೇ ರೂಪುಗೊಂಡಿರುವ ಒಂದು ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ.ಈ ಯೋಜನೆಯನ್ನು ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. 2003-04ನೇ ಸಾಲಿನಿಂದ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಕಳೆದ ಎಂಟು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ 6 ತಿಂಗಳ ನಂತರ ಮುಖ್ಯ ಸದಸ್ಯ ಮತ್ತು ಅವನ ಕುಟುಂಬದ ಅವಲಂಬಿತ ಎಲ್ಲ ಸದಸ್ಯರು ಅವರ ಸಹಕಾರ ಸಂಘಗಳಲ್ಲಿ ನಿಗದಿತ ವಂತಿಗೆಯನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು.ಈ ಯೋಜನೆಯಲ್ಲಿ ಸುಮಾರು 1,608 ವಿವಿಧ ಕಾಯಿಲೆಗಳಿಗೆ ರಾಜ್ಯದ ಸುಮಾರು 5,00 ಅಂಗೀಕೃತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯ ನೇರ ಜವಾಬ್ದಾರಿ ಬೆಂಗಳೂರಿನ ಯಶಸ್ವಿನಿ ಆರೋಗ್ಯ ಟ್ರಸ್ಟ್‌ಗೆ ಸೇರಿದೆ. ಈ ಯೋಜನೆಯಲ್ಲಿ ನೋಂದಣಿಯಾಗಲು ಗರಿಷ್ಠ ವಯೋಮಿತಿ 75 ವರ್ಷ. 50 ವರ್ಷ ಮೀರಿದ ಸ್ತ್ರೀಯರಿಗೆ ಗರ್ಭಕೋಶ ಚಿಕಿತ್ಸೆ ಪಡೆಯಲು ಅವಕಾಶವಿದೆ. ಕೊಡಗು ಜಿಲ್ಲೆಯಲ್ಲಿ ವೈವಸ್ ಆಸ್ಪತ್ರೆ, ಮಡಿಕೇರಿ, ಆತ್ರೇಯ ಆಸ್ಪತ್ರೆ, ವಿರಾಜಪೇಟೆ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ 2011-12ನೇ ಸಾಲಿನಿಂದ ಅಮ್ಮತ್ತಿಯ ಆರ್‌ಐಎಚ್‌ಪಿ ಆಸ್ಪತ್ರೆ, ಗೋಣಿಕೊಪ್ಪಲಿನ ಲೈಫ್ ಲೈನ್ ಆಸ್ಪತ್ರೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.2010-11ನೇ ಸಾಲಿಗೆ ರಾಜ್ಯದ ವಿವಿಧ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಕೊಡಗು ಜಿಲ್ಲೆಯ 5,55 ಜನ ಫಲಾನುಭವಿಗಳು ರೂ. 58.31 ಲಕ್ಷ ಮೊತ್ತದ ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ. 2011-12ನೇ ಸಾಲಿನಲ್ಲಿ ಒಟ್ಟು 313 ಫಲಾನುಭವಿಗಳು ಒಳರೋಗಿಗಳಾಗಿ ಒಟ್ಟು ರೂ. 34.59 ಲಕ್ಷ ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. 2011-12ನೇ ಸಾಲಿಗೆ ಈ ಯೋಜನೆಯಡಿಯಲ್ಲಿ ಒಟ್ಟು 52,397 ಜನ ಸದಸ್ಯರನ್ನು ನೋಂದಾಯಿಸಿದ್ದು, ರೂ. 78.15 ಲಕ್ಷ ವಂತಿಗೆ ಸಂಗ್ರಹಿಸಲಾಗಿದೆ. ಈ ಪೈಕಿ 1,536 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು, 2,653 ಅಲ್ಪಸಂಖ್ಯಾತರು ಇದ್ದಾರೆ.ಈ ಯೋಜನೆಯಲ್ಲಿ ನೋಂದಣಿಯಾದ ಅರ್ಹ ಸದಸ್ಯರು ಸಂಬಂಧಿಸಿದ ಸಂಘಗಳಲ್ಲಿ ನೋಂದಣಿಯಾಗಿ ಪಡೆದಿರುವ ದಾಖಲಾತಿಗಳೊಂದಿಗೆ ರಾಜ್ಯದ ಯಾವುದೇ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟಸ್ವಾಮಿ ಅಥವಾ ಕಚೇರಿಯಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.

ಪ್ರತಿಕ್ರಿಯಿಸಿ (+)