ಭಾನುವಾರ, ಏಪ್ರಿಲ್ 18, 2021
33 °C

ಯಾರೂ ಸುಪ್ರೀಂ ಅಲ್ಲ: ಅಂಬರೀಷ್ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಟಿ ರಮ್ಯಾ ತೇಜೋವಧೆ ಮಾಡಿದ ನಿರ್ಮಾಪಕ ಗಣೇಶ್ ಇನ್ನು ಮುಂದೆ ನಿರ್ಮಿಸುವ ಯಾವ ಚಿತ್ರಗಳಲ್ಲೂ ಕನ್ನಡದ ಕಲಾವಿದರು ಅಭಿನಯಿಸಬಾರದು ಎಂದು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಪುನರುಚ್ಚರಿಸಿದರು. ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಟಿ ರಮ್ಯಾಗೆ ಸಂಬಂಧಿಸಿದ್ದು ಒಂದು ಸಣ್ಣ ವಿಷಯ. ಅದನ್ನು ನಿರ್ಮಾಪಕ ಎ.ಗಣೇಶ್ ಮಾಧ್ಯಮಗಳ ಮುಂದೆ ತೆಗೆದುಕೊಂಡು ಹೋಗಿ ಹಾದಿರಂಪ ಬೀದಿರಂಪ ಮಾಡಿದ್ದಾರೆ.ಇದರಿಂದಾಗಿ ಜನತೆ  ಚಿತ್ರರಂಗದ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ರಮ್ಯಾ ತಪ್ಪು ಮಾಡದೇ ಇದ್ದರೂ ಅಪಪ್ರಚಾರ ಮಾಡಲಾಗಿದೆ. ಆದ್ದರಿಂದ ಆಕೆಯನ್ನು ದಂಡಂ ದಶಗುಣಂ ಚಿತ್ರದ ಪ್ರಚಾರಕ್ಕೆ ಕಳುಹಿಸಿಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್‌ಕುಮಾರ ಪಾಟೀಲ್ ತಾವೇ ಸುಪ್ರೀಂ ಎಂದು ಹೇಳಿಕೆ ನೀಡಿರುವ ಕುರಿತು ಗಮನ ಸೆಳೆದಾಗ ‘ಕನ್ನಡ ಚಿತ್ರರಂಗ ಕುಟುಂಬ ಇದ್ದಂತೆ. ಇಲ್ಲಿ ಯಾರೂ ಸುಪ್ರೀಂ ಇಲ್ಲ. ಇಂತಹ ಭೇದಭಾವವನ್ನು ಬಿಡಬೇಕು. ಇವರು ಅಧ್ಯಕ್ಷರಾಗುವಾಗ ಸಮಸ್ಯೆ ಆಗಿತ್ತು. ಅದನ್ನು ಬಗೆಹರಿಸಿದ್ದೇ ನಾನು.ಇದನ್ನು ಬಸಂತ್‌ಕುಮಾರ ಪಾಟೀಲರು ಮರೆತಿದ್ದರೆ ನೆನಪು ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು. ರಮ್ಯಾ ತಾವು ಅಭಿನಯಿಸಿದ ಎಲ್ಲ ಚಿತ್ರಗಳ ನಿರ್ಮಾಪಕರಿಗೆ ಕಿರಿಕಿರಿ ಮಾಡಿದ್ದಾರೆ ಎಂದು ನಿರ್ಮಾಪಕ ಜೈಜಗದೀಶ್ ನೀಡಿರುವ ಹೇಳಿಕೆಗೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಂಬರೀಷ್, ‘ರಮ್ಯಾ ತಮಗೆ ಅವಕಾಶ ಕೊಡಿ ಎಂದು ಯಾವ ನಿರ್ಮಾಪಕರ ಮನೆ ಬಾಗಿಲಿಗೂ ಹೋಗಿಲ್ಲ. ಅವರೇ ಹೋಗಿದ್ದಾರೆ. ರಮ್ಯಾ ಕಿರಿಕಿರಿ ಮಾಡುತ್ತಾಳೆ ಎನ್ನುವುದಾದರೆ ನಿರ್ಮಾಪಕರು ಏಕೆ ಆಕೆಯ ಕಾಲ್‌ಶೀಟ್‌ಗಾಗಿ ಹೋಗಬೇಕು’ ಎಂದು ಪ್ರಶ್ನಿಸಿದರು.‘ಮಂಗಳವಾರ ಅವರ ಸಭೆ ಇದೆ. ಆ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಿಕೊಂಡು ನಮ್ಮ ಮುಂದಿನ  ನಿರ್ಧಾರವನ್ನು ಪ್ರಕಟಿಸುತ್ತೇವೆ’ ಎಂದು ತಿಳಿಸಿದರು. ‘ಕನ್ನಡ ಚಲನಚಿತ್ರ ರಂಗ ಕುಟುಂಬವಿದ್ದಂತೆ. ಆದ್ದರಿಂದ ಇಲ್ಲಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುತ್ತೇವೆ’ ಎಂದೂ ಅಂಬರೀಷ್ ಹೇಳಿದರು.ಇಂದು ಅಂತಿಮ ತೀರ್ಪು 

 ಹುಬ್ಬಳ್ಳಿ: ನಟಿ ರಮ್ಯ ಹಾಗೂ ನಿರ್ಮಾಪಕರೊಬ್ಬರ ನಡುವೆ ಉದ್ಭವಿಸಿರುವ ವಿವಾದ ಇತ್ಯರ್ಥಕ್ಕೆ ಮಂಗಳವಾರ (ಇಂದು) ಸಂಜೆ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ ಪಾಟೀಲ ತಿಳಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಉನ್ನತ ಸಮಿತಿಯು ಮಂಗಳವಾರದ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಈ ತೀರ್ಮಾನವನ್ನು ಎಲ್ಲರೂ ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ ಎಂದೂ ಅವರು ಫರ್ಮಾನು ಹೊರಡಿಸಿದ್ದಾರೆ.‘ನಿರ್ಮಾಪಕ ಎ. ಗಣೇಶ ಅವರ ಚಿತ್ರಗಳಲ್ಲಿ ನಟಿಸಬಾರದು ಎಂಬ ನಿರ್ಧಾರವನ್ನು ಕನ್ನಡ ಚಲನಚಿತ್ರ ಕಲಾವಿದರ ಸಂಘವು ತೆಗೆದುಕೊಂಡಿದೆ ಎಂಬ ಸಂಗತಿ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ. ಈ ನಿರ್ಧಾರದ ಪ್ರತಿ ಕಳುಹಿಸಿಕೊಡುವಂತೆ ಕಲಾವಿದರ ಸಂಘಕ್ಕೆ ತಿಳಿಸಿದ್ದೇನೆ’ ಎಂದರು. ‘ದಂಡಂ ದಶಗುಣಂ’ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ನಟಿ ರಮ್ಯಾ ಅವರಿಗೆ ನಿರ್ಮಾಪಕ ಗಣೇಶ ಅವರು ಸಂಭಾವನೆಯನ್ನು ಪೂರ್ಣಪ್ರಮಾಣದಲ್ಲಿ ನೀಡಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ವಸತಿ ಹಾಗೂ ಓಡಾಟಕ್ಕಾಗಿ ಬೆಂಜ್ ಕಾರಿನ ಸೌಲಭ್ಯವನ್ನೂ ಒದಗಿಸಿದ್ದಾರೆ.ರಮ್ಯಾ ಅವರಿಂದ ಪಡೆದುಕೊಂಡಿರುವ ಮೂರುವರೆ ಲಕ್ಷ ರೂಪಾಯಿ ಸಾಲವು ಒಂದು ವ್ಯವಹಾರವಾಗಿದೆ. ರಮ್ಯಾ ಅವರು ಕೇಳಿದಾಗ ಬಡ್ಡಿ ಸಮೇತ ಈ ಸಾಲವನ್ನು ವಾಪಸು ನೀಡುವುದಾಗಿ ಗಣೇಶ ತಿಳಿಸಿದ್ದಾರೆ ಎಂದು ಬಸಂತಕುಮಾರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.