ಸೋಮವಾರ, ಜನವರಿ 20, 2020
26 °C

ಯಾರ ಪರವೂ ವಕಾಲತ್ತು ವಹಿಸಲು ದೆಹಲಿಗೆ ಹೋಗಿರಲಿಲ್ಲ - ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದು ಯಾರ ಪರವಾಗಿಯೂ ವಕಾಲತ್ತು ವಹಿಸಲು ಅಲ್ಲ~ ಎಂದು ಗೃಹ ಸಚಿವ ಆರ್.ಅಶೋಕ ಹೇಳಿದರು.ನಗರದಲ್ಲಿ ಶನಿವಾರ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, `ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ವರಿಷ್ಠರನ್ನು ಭೇಟಿ ಮಾಡಿದ್ದೆ. ವರಿಷ್ಠರ ಭೇಟಿ ವೇಳೆ ಯಾರ ಪರವಾಗಿ ಅಥವಾ ವಿರುದ್ಧವಾಗಿ ವಕಾಲತ್ತು ವಹಿಸಿಲ್ಲ~ ಎಂದರು.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಹಲವು ಮುಖಂಡರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳು ಹಾಗೂ ನಾಯಕತ್ವ ಗೊಂದಲ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಗೊಂದಲ ನಿವಾರಣೆಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡಲಾಯಿತು. ಪಕ್ಷವನ್ನು ಕಟ್ಟಿ ಬೆಳೆಸಿರುವ ಮಾಜಿ ಸಿ.ಎಂ.ಬಿ.ಎಸ್.ವೈ ಅವರಿಗೆ ಪಕ್ಷದಲ್ಲಿ ಕೆಲಸ ಮಾಡಲು ಸೂಕ್ತ ಅವಕಾಶ ಕಲ್ಪಿಸಿಕೊಡುವಂತೆ ವರಿಷ್ಠರಲ್ಲಿ ವಿನಂತಿ ಮಾಡಿದ್ದೇನೆ. ನಾಯಕತ್ವ ಸೇರಿದಂತೆ ಎಲ್ಲ ರೀತಿಯ ಗೊಂದಲಗಳನ್ನು ನಿವಾರಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದರು.ಯಡಿಯೂರಪ್ಪ ಪಕ್ಷದ ಶಿಸ್ತಿನ ಸಿಪಾಯಿ. ಅವರು ಪಕ್ಷ ಬಿಡುವುದಿಲ್ಲ ಮತ್ತು ಯಾವುದೇ ಹೊಸ ಪಕ್ಷವನ್ನು ಕಟ್ಟುವುದಿಲ್ಲ. ಆ ಸಂಬಂಧ ಅವರು ಯಾವುದೇ ಗಡುವು ಸಹ ನೀಡಿಲ್ಲ. ಅವರು ಬಿಜೆಪಿಯಲ್ಲೇ ಇದ್ದು, ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ.   ಪಕ್ಷದಲ್ಲಿನ ಗೊಂದಲಗಳನ್ನು ಆಂತರಿಕವಾಗಿ ನಾಲ್ಕು ಗೋಡೆಗಳ ಮಧ್ಯೆಯೇ ಪರಿಹರಿಸಿಕೊಳ್ಳಲಾಗುತ್ತದೆ ಎಂದು ಅಶೋಕ ತಿಳಿಸಿದರು.

ಪ್ರತಿಕ್ರಿಯಿಸಿ (+)