ಮಂಗಳವಾರ, ಜೂನ್ 22, 2021
29 °C
ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ವಿಶ್ಲೇಷಣೆ

ಯಾವ ಪಕ್ಷಕ್ಕೂ ನಿಚ್ಚಳ ಬಹುಮತವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ವಿಚಿತ್ರವಾಗಿ ಹೊರ ಹೊಮ್ಮಲಿದ್ದು, ಯಾವುದೇ ಪಕ್ಷವೂ ನಿಚ್ಚಳ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ’ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅಭಿಪ್ರಾಯ ಪಟ್ಟರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಲೋಕಸಭಾ ಚುನಾವಣೆ ಕುರಿತು ಮಾಧ್ಯಮ ಪ್ರತಿನಿಧಿಗಳ ಜತೆ ನಡೆದ ಸಂವಾದದಲ್ಲಿ ಚುನಾವಣಾ ಫಲಿತಾಂಶ ಕುರಿತು ಅವರು ವಿಶ್ಲೇಷಿಸಿದರು.ಶೇ 60ರಲ್ಲಿ ಬಿಜೆಪಿ ಅಲೆ ಇಲ್ಲ: ‘ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿ, ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರವಿದೆ. ಈ ಏಳು ರಾಜ್ಯಗಳಲ್ಲಿ 112 ಲೋಕಸಭಾ ಕ್ಷೇತ್ರಗಳಿವೆ. ಇವುಗಳನ್ನು ಹೊರತುಪಡಿಸಿದರೆ ಉಳಿದ 373 ಲೋಕಸಭಾ ಕ್ಷೇತ್ರಗಳಿರುವ ಬಿಹಾರ್, ಪ.ಬಂಗಾಳ, ಒರಿಸ್ಸಾ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ರಾಜ್ಯಗಳಲ್ಲಿ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ಇವುಗಳಲ್ಲಿ 222 ಕ್ಷೇತ್ರಗಳಿರುವ ರಾಜ್ಯಗಳಲ್ಲಿ ತೃತೀಯ ರಂಗಕ್ಕೆ ಬೆಂಬಲ ನೀಡುತ್ತೇವೆಂದು ಹೇಳಿಕೊಂಡಿರುವ ಪಕ್ಷಗಳು ಅಧಿಕಾರದಲ್ಲಿವೆ. ಹಾಗಾದರೆ ದೇಶದಲ್ಲಿ ಮೋದಿ ಅಲೆ ಎಲ್ಲಿದೆ ?’ ಎಂದು ಹನುಮಂತಪ್ಪ ಪ್ರಶ್ನಿಸಿದರು.‘ಹತ್ತು ವರ್ಷಗಳಿಂದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. ಸಹಜವಾಗಿಯೇ ದೇಶದಲ್ಲಿ ಆಡಳಿತ ವಿರೋಧಿ ಅಲೆ ಇರುತ್ತದೆ. ಇದು

ಎನ್‌ಡಿಎ ಆಳ್ವಿಕೆಯಲ್ಲಿದ್ದಾಗ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಇದೇ ವಾತಾವರಣ ಇತ್ತು. ಹಾಗಾಗಿ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಬಹುಮತ ದೊರೆಯುವುದು ಅನುಮಾನ’ ಎಂದು ಅವರು ವಿಶ್ಲೇಷಿಸಿದರು.ಮೋದಿ ಏಕೆ ಉ.ಪ್ರ.ದಿಂದ  ಸ್ಪರ್ಧೆ?: ‘ಈ ಬಾರಿ ಮೋದಿ ಪ್ರಧಾನಿಯಾಗುತ್ತಾರೆಂದು ಬಿಜೆಪಿ ಬೀಗುತ್ತಿದೆ. ಆದರೆ ಕಳೆದ ವರ್ಷ ಬಿಹಾರದ ನಿತೀಶ್ ಕುಮಾರ್, ಒರಿಶಾದ ನವೀನ್ ಪಟ್ನಾಯಕ್ ಎಸ್‌ಡಿಎ ಸಖ್ಯ ತೊರೆದಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತಾ ತೃತೀಯ ರಂಗ ಬೆಂಬಲಿಸಿದ್ದಾರೆ. ಆಂಧ್ರದಲ್ಲಿ ಯಾವ ಪಕ್ಷದ ನಡೆ ಹೇಗಿದೆ ಎಂದು ಹೇಳುವುದೇ ಅನುಮಾನ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಈ ರಾಜ್ಯಗಳಲ್ಲಿ ಬಿಜೆಪಿಯ ಅಲೆಯೇ ಇಲ್ಲ. ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಸೃಷ್ಟಿಸುವುದಕ್ಕಾಗಿಯೇ ಬಿಜೆಪಿ ಮೋದಿ ಅವರನ್ನು ವಾರಾಣಸಿಯಿಂದ ಕಣಕ್ಕಿಳಿಸುತ್ತಿದೆ ಎಂದರು.‘1977ರಲ್ಲಿ ನಡೆದ ಜೆಪಿ ಆಂದೋಲನದ ರೀತಿಯಲ್ಲಿ ಸಾರಾಸಗಟಾಗಿ ಕಾಂಗ್ರೆಸ್ ಸೋಲಿಸುವುದಾಗಿ ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವೆ. ಅದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ, ಅಂದು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿತ್ತು. ಅದನ್ನು ಬಳಸಿಕೊಂಡೇ ಜೆಪಿ ಅವರು ‘ಮಹಾ ಮೈತ್ರಿಕೂಟ’ ರಚಿಸಿದ್ದರು. ಆಗ ಕಾಂಗ್ರೆಸ್ ಸೋಲು ಕಂಡಿತ್ತು. ಆದರೆ ಈಗಿನ ವಿರೋಧ ಪಕ್ಷಗಳೆಲ್ಲವೂ ವಿಭಿನ್ನ ನಿಲುವು ಹೊಂದಿವೆ. ಪ್ರತಿ ಚುನಾಣೆಗೂ ಮೈತ್ರಿ ಕೂಟವನ್ನು ಬದಲಾಯಿಸುತ್ತವೆ. ಹಾಗಾಗಿ ಜೆಪಿ ಆಂದೋಲನಕ್ಕೂ, ಮೋದಿ ಆಂದೋಲನಕ್ಕೂ ಬಹಳ ವ್ಯತ್ಯಾಸವಿದೆ’ ಎಂದು ವಿಚಾರಗಳನ್ನು ತುಲನೆ ಮಾಡಿದರು.ಪ್ರಚಾರದಿಂದ ಜಯ ಅಸಾಧ್ಯ: ‘ರಾಜಕಾರಣಿಗಳು ಯಾವುದೇ ರೀತಿಯ ಪ್ರಚಾರ ಮಾಡಿದರೂ, ಮತದಾರರು ತಮ್ಮದೇ ಆದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ವಿಧಾನಸಭೆಯಲ್ಲಿ ನಡೆಯುವಂತೆ ಹಣ, ಹೆಂಡದ ಆಮಿಷ ಹಾಗೂ ಜಾತಿಯ ಮೇಲೆ ಲೋಕಸಭೆ ಚುನಾವಣೆ ಫಲಿತಾಂಶ ನಿರ್ಧಾರವಾಗುವುದಿಲ್ಲ. ಹಳ್ಳಿಗಳಲ್ಲಿ ಹಿಂದೆ ಇದ್ದ ಗೌಡಿಕೆ ಸಂಸ್ಕೃತಿಯೂ ಇಲ್ಲದಿರುವುದರಿಂದ ಚುನಾವಣಾ ಫಲಿತಾಂಶವನ್ನು ನಿಖರವಾಗಿ ನಿರ್ಧರಿಸುವುದು ಅಸಾಧ್ಯ’ ಎಂದು ಹನುಮಂತಪ್ಪ ವಿಶ್ಷೇಷಿಸಿದರು.‘1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 408 ಸ್ಥಾನಗಳಲ್ಲಿ ಜಯಗಳಿಸಿತ್ತು. ಅಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ಅನುಕಂಪದ ರೀತಿಯಲ್ಲಿ ಮತಗಳಾಗಿ ಪರಿವರ್ತನೆಗೊಂಡಿದ್ದವು. ಆದರೆ ಈಗ ವಿರೋಧ ಪಕ್ಷಗಳು ಮಾಡುತ್ತಿರುವ ಮಸಾಲೆ ಭಾಷಣ ಕೇಳಲು ಲಕ್ಷಾಂತರ ಮಂದಿ ಸೇರಬಹುದು. ಆದರೆ ಅದು ಮತಗಳಾಗಿ ಪರಿವರ್ತನೆ ಆಗುತ್ತವೆಯೇ’ ಎಂದು ಹನುಮಂತಪ್ಪ ಸಂದೇಹ ವ್ಯಕ್ತಪಡಿಸಿದರು. ‘ಹಿಂದೆ ಇದೇ ಬಿಜೆಪಿ ನಾಯಕರು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಪ್ರಚಾರ ಮಾಡಿದ್ದಾಗ, ಅಂದು ಚಪ್ಪಾಳೆ ಹೊಡೆದ ಜನ ಆ ಪಕ್ಷವನ್ನು ಗೆಲ್ಲಿಸಲಿಲ್ಲ. ಈ ಬಾರಿಯೂ ಅಂಥ ತಂತ್ರಗಳು ನಡೆಯುತ್ತಿವೆ. ಅವುಗಳು ಮತಗಳಾಗಿ ಪರಿವರ್ತನೆಯಾಗುವ ಬಗ್ಗೆ ಅನುಮಾನವಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.