ಶನಿವಾರ, ಮೇ 21, 2022
25 °C

ಯುಪಿಸಿಎಲ್ ತೊಂದರೆ ತಾತ್ಕಾಲಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮಂಗಳೂರು: ‘ಯುಪಿಸಿಎಲ್ ವಿರುದ್ಧ ಈಗ ಕೇಳಿಬರುತ್ತಿರುವ ಟೀಕೆಗಳಲ್ಲಿ ಕೆಲಮಟ್ಟಿನ ಸತ್ಯಾಂಶ ಇರಬಹುದು. ಆದರೆ ವಿದ್ಯುತ್‌ನಂತಹ ಪ್ರಮುಖ ಮೂಲಸೌಕರ್ಯದ ಕೊರತೆ ನೀಗಿಸಲು ಈ ಯೋಜನೆ ಅನುಷ್ಠಾನ ಅನಿವಾರ್ಯ, ಕಂಪೆನಿಗೆ ಅದರದೇ ಆದ ಕೆಲ ತೊಂದರೆಗಳಿವೆಯಾದರೂ ಇವೆಲ್ಲ ತಾತ್ಕಾಲಿಕ’  ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಹೇಳಿದರು.ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಭಿವೃದ್ಧಿಗಾಗಿ ಯುಪಿಸಿಎಲ್ ಅನಿವಾರ್ಯ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರು. ರಾಯಚೂರಿನ ಆರ್‌ಟಿಪಿಎಸ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಎಫ್‌ಜಿಡಿ ತಂತ್ರಜ್ಞಾನ ಇರಲಿಲ್ಲ, ಹಾರುಬೂದಿ ಸಮಸ್ಯೆ ಅಲ್ಲಿಯೂ ಇತ್ತು. ಆದರೆ ಯುಪಿಸಿಎಲ್ ಕಂಪೆನಿ ಎಫ್‌ಜಿಡಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ಪರಿಸರಕ್ಕೆ ಹಾನಿಯಾಗದು ಎಂದರು.ಕಂಪೆನಿಯ 600 ಮೆಗಾವಾಟ್ 2ನೇ ಘಟಕ ಉತ್ಪಾದನೆಗೆ ಸಿದ್ಧವಾಗಿದ್ದು ಘಟಕಗಳನ್ನು ಸುಸ್ಥಿರಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ನದಿ ತಿರುಗಿಸುವುದಿಲ್ಲ: ನೇತ್ರಾವತಿ ನದಿ ತಿರುವು ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇತ್ರಾವತಿ ಉಗಮದ ಪಶ್ಚಿಮ ಘಟ್ಟದಲ್ಲಿ ಮಳೆಗಾಲದ ಕೊಯ್ಲು ನಡೆಸಿ ಆ ಮೂಲಕ ಪ್ರವಾಹದ ಹೆಚ್ಚುವರಿ ನೀರು ವ್ಯರ್ಥವಾಗುವುದನ್ನು ತಡೆಯಲು ಈ ಯೋಜನೆ ರೂಪಿಸಲಾಗಿದೆ ವಿನ: ಇದರಿಂದ ಕರಾವಳಿಗೆ ಯಾವುದೇ ತೊಂದರೆ ಇಲ್ಲ. ನೇತ್ರಾವತಿ ನದಿ ತಿರುಗಿಸುವ ಪ್ರಶ್ನೆಯೇ ಇಲ್ಲ.ಕುಮಾರಧಾರ ನದಿ ತೀರದ ಸೋಮವಾರಪೇಟೆ, ಸಕಲೇಶಪುರ ಭಾಗದಲ್ಲಿ ವ್ಯರ್ಥವಾಗುವ ನೀರನ್ನು ಸದ್ಬಳಕೆಮಾಡಿಕೊಳ್ಳಲಾಗುವುದು. ಇದರಿಂದ ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೂ  ನೀರು ಸಿಕ್ಕಂತಾಗುತ್ತದೆ ಎಂದರು. ಈ ಸಂಬಂಧ ನೀರಾವರಿ ತಜ್ಞ ಪರಮಶಿವಯ್ಯ ಅವರು ನೀಡಿರುವ ಸಲಹೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಆದರೆ ಅವರ ವರದಿಯೇ ಅಂತಿಮ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.