ಶುಕ್ರವಾರ, ಮೇ 14, 2021
31 °C

ಯುವಕರಿಗೆ ಕನ್ನಡದ ಲಸಿಕೆ ಹಾಕಬೇಕು: ಹಂಸಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: “ಜಿಟ್ಟಿಹುಳುಗಳೆದ್ದಾವ.. ಜಿಟ್ಟಿಹುಳುಗಳೆದ್ದಾವ ಅಲ್ಲಿ ನೋಡ..~

`ಸಂಗೀತ ದಿಗ್ಗಜ~ ಹಂಸಲೇಖರ ಕಂಠದಿಂದ ಸಂತ ಶಿಶುನಾಳ ಶರೀಫರ ಈ ತತ್ವಪದದ ಸಾಲು ಹೊರಹೊಮ್ಮಲು ಮೈಸೂರಿನ ರಂಗಾಯಣದ ವನರಂಗದಲ್ಲಿ ಶನಿವಾರ ಸಂಜೆಯ ಜಿಟ್ಟಿಹುಳುಗಳು ಕಾರಣವಾದವು. ಜೊತೆಗೆ ಕನ್ನಡ ಚಿತ್ರರಂಗದ ಭವಿಷ್ಯದ ಸಂಗೀತ, ಸಾಹಿತ್ಯದ ಕುರಿತು ಸಂದೇಶ ನೀಡಲೂ  ಪ್ರೇರಣೆಯಾದವು!`ಅಂದು ಬ್ರಿಟಿಷರ ಅವಸಾನವನ್ನು ಕಂಡ ಕಾಲಜ್ಞಾನಿ ಶರೀಫರು ಈ ರೀತಿ ಜಿಟ್ಟಿಹುಳುಗಳು ಎದ್ದಾವು ಎಂದು ಹೇಳುವ ಮೂಲಕ ಮುಂದಿನ ಕಾಲವನ್ನು ಊಹಿಸಿದ್ದರು. ಅದೇ ರೀತಿ ಇವತ್ತಿನ ಚಲನಚಿತ್ರ ಸಂಗೀತದ ಬಗ್ಗೆ ಮಾತನಾಡುವಾಗ ಹತಾಶೆಗಳಿವೆ. ಆದರೆ ಜಿಟ್ಟಿಹುಳುಗಳು ಎದ್ದಾವ ಈಗ. ಮತ್ತೆ ಕನ್ನಡಕ್ಕೆ ಸುಶ್ರಾವ್ಯ ಸಂಗೀತ, ಸಮೃದ್ಧ ಸಾಹಿತ್ಯ, ಸಿರಿಕಂಠದ ಗಾಯಕ, ಗಾಯಕಿಯರು ಬರುತ್ತಾರೆ~ ಎಂದು ಭರವಸೆ ವ್ಯಕ್ತಪಡಿಸಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯು ಆಯೋಜಿಸಿದ್ದ `ಬೆಳ್ಳಿಹೆಜ್ಜೆ~ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಅವರು ನಕ್ಕು ನಗಿಸುತ್ತಲೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.`ಕಳೆದ 75 ವರ್ಷಗಳ ಇತಿಹಾಸದಲ್ಲಿ ಐವತ್ತು ವರ್ಷ ಕನ್ನಡ ಚಿತ್ರರಂಗ ಚೆನ್ನೈನಲ್ಲಿಯೇ ಇತ್ತು. ಕಳೆದ 25 ವರ್ಷಗಳಿಂದ ಮಾತ್ರ ಚಂದನವನದಲ್ಲಿ (ಸ್ಯಾಂಡಲ್‌ವುಡ್)ಇದೆ. ಯುವ ತಂತ್ರಜ್ಞರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ತಂತ್ರಜ್ಞಾನದ ಅಬ್ಬರ ಈಗ ಕಾಣುತ್ತಿದೆ. ಮುಂದೊಂದು ದಿನ ಕನ್ನಡದ ಎಚ್ಚರಿಕೆ ಗಂಟೆ ಹೊಡೆಯುತ್ತದೆ~ ಎಂದರು.`ಒಬ್ಬ ಅನಕೃ ಮತ್ತು ಒಬ್ಬ ರಾಜಕುಮಾರ್ ದಶಕಗಳವರೆಗೆ ಕನ್ನಡವನ್ನು ಕಾಪಾಡಿದರು. ಡಾ. ರಾಜ್ ಎಂದಿಗೂ ಹೇಳಿಕೆಗಳ ಮೂಲಕ ಕನ್ನಡವನ್ನು ರಕ್ಷಿಸಲಿಲ್ಲ. ಕನ್ನಡವನ್ನು ನುಡಿದರು ಮತ್ತು ನಡೆದರು. ಕನ್ನಡವನ್ನು ಆರಾಧಿಸಿದರು. ತಾಯಂದಿರು ಮತ್ತು ಕಲೆಯಿಂದ ಮಾತ್ರ ಭಾಷೆಯ ಉಳಿವು ಸಾಧ್ಯ. ಯುವಸಮುದಾಯಕ್ಕೆ ಅಂತಹ ಕನ್ನಡ ಆರಾಧಿಸುವ ಲಸಿಕೆಯನ್ನು ಚುಚ್ಚುವ ಕೆಲಸ ಮಾಡಬೇಕಿದೆ. ಕಳೆದ ಆರು ತಿಂಗಳಿನಿಂದ ಸಂಗೀತ ಸಂಘವನ್ನು ಮತ್ತೆ ಕೈಗೆತ್ತಿಕೊಂಡಿದ್ದೇನೆ. ಅದರ ಮೂಲಕ ಕನ್ನಡ ಸಂಗೀತ, ಸೊಗಡನ್ನು ಉಳಿಸುವತ್ತ ಹೆಜ್ಜೆ ಹಾಕುತ್ತೇನೆ~ ಎಂದು ಹೇಳಿದರು.`ಇವತ್ತು ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಮಾತಾಡುತ್ತಿದೆ. ರೈತರು ಕೆಂಪು ಬಸ್ ಹತ್ತಿ ಪಟ್ಟಣದತ್ತ ವಲಸೆ ಬರುತ್ತಿದ್ದಾರೆ. ಮಕ್ಕಳಿಗೆ ಹಳದಿ ಬಸ್ ಹತ್ತುವ ಆಸೆ. ಆದರೆ ಗ್ರಾಮಗಳಲ್ಲಿರುವ ಕನ್ನಡ ಉಳಿಯಬೇಕು.

ಕವಿರತ್ನ ಕಾಳಿದಾಸ ಚಿತ್ರದಲ್ಲಿ ಸಂಸ್ಕೃತ ಶ್ಲೋಕ ಹೇಳಬೇಕು ಎಂದು ನಿರ್ದೇಶಕರು ಹೇಳಿದಾಗ. ರಾಜ್ ಅವರು ಅದನ್ನು ನಾನು ಹೇಳ್ತೇನೆ. ಆದರೆ ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ ಎನ್ನುವ ಹಳ್ಳಿಹಾಡೂ ಇರಲಿ ಎಂದಿದ್ದರು. ಅಂತಹ ಪ್ರೀತಿ ಅವರದ್ದು~ ಎಂದು ಹಂಸಲೇಖ ಭಾವಪರವಶರಾದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.