ಮಂಗಳವಾರ, ಏಪ್ರಿಲ್ 13, 2021
23 °C

ಯುವತಿ ಮಾದರಿಯಾಗು...

ಮಾನಸ ಕೀಲಾರ Updated:

ಅಕ್ಷರ ಗಾತ್ರ : | |

ಇದೇನು ಸಭ್ಯತೆ .. ಇದೇನು ಸಂಸ್ಕೃತಿ

ಎಂದು ಕೇಳುತಿರುವಳು ನಮ್ಮ ತಾಯಿ ಭಾರತಿ... -ಮಣ್ಣಿನ ಮಗ ಸಿನಿಮಾದ ಹಾಡಿನ ಎಳೆ ಇದು. 

ಇದನ್ನು ನಮ್ಮ ಮೆಟ್ರೊ ನಗರಗಳ ಹೆಣ್ಣುಮಕ್ಕಳಿಗೆ ಕೇಳಬಹುದಾ?  ಕೈಯಲ್ಲಿ ಸಿಗರೇಟು, ಚಪ್ಪರಿಸಲು  ಬೀರು, ಕೂರಲು ಬಾರು, ತಡರಾತ್ರಿಯಾದರೂ ಪರಿಸರದ ಪರಿವೇ ಇಲ್ಲ, ಪಕ್ಕದಲ್ಲಿ ಬಾಯ್ ಫ್ರೆಂಡ್, ಬೇಕಾಬಿಟ್ಟಿ ಪೋಲಾಗುವ ಹಣ... ಕೇಳಿದಷ್ಟು ದುಡ್ಡು ಕೊಡದೆ ಇದ್ದರೆ ಮನೆಯಲ್ಲಿ  ರಾದ್ದಾಂತ, ಹೆತ್ತವರೇ ಶತ್ರುಗಳು. ‘ಒಬ್ಬಳು ಹುಡುಗಿ ಶಿಕ್ಷಣ ಕಲಿತರೆ ಊರೇ ಕಲಿತಂತೆ..’ ಅನ್ನುವ ನಾಣ್ಣುಡಿ ಈ ಕಲಿತ ಹೆಣ್ಮಕ್ಕಳಿಗೆ ಹೇಗೆ ಅನ್ವಯವಾಗುತ್ತದೆ.  ‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು... ಗುಲಾಮಳಿವಳಲ್ಲ.. ಸಲಾಮು ಹೊಡೆಯೋಲ್ಲ....’ ಎಂಬ ಮೂರು ದಶಕಗಳ ಹಿಂದಿನ ‘ಶುಭಮಂಗಳ’ಸಿನಿಮಾದ ಈ ಸುಂದರ ಹಾಡು ನಮ್ಮ ಸಿಟಿಲೈಫ್ ಲಲನೆಯರ ಮಧ್ಯೆ ನೆನಪಿಸಲು ಸಾಧ್ಯಾನಾ... ಸ್ವಾಭಿಮಾನ, ದಾಸ್ಯ ತೊಲಗಿಸಲು ಸಾಮಾಜಿಕವಾಗಿ ಮಹಿಳೆಯರು ಸಿಡಿದೆದ್ದದ್ದು ಇದಕ್ಕೇನಾ?...

ಎಂಜಾಯ್ ಮಾಡು..!

ನಮ್ಮ ಯುವ ಮಹಿಳಾ ಮನಗಳು ಎತ್ತ ಸರಿಯುತ್ತಿವೆ... ಅವರಲ್ಲಿನ ಸಾಂಸ್ಕೃತಿಕ ನೆಲೆಗಟ್ಟಿನ ಸ್ವಾಭಿಮಾನ ಎಲ್ಲಿ ಕರಗಿ ಹೋಯಿತು. ಪಾಶ್ಚಾತ್ಯರ ಅನುಕರಣೆ ತಪ್ಪಲ್ಲ. ಅವರಲ್ಲಿನ ಶಿಸ್ತು, ಅಧ್ಯಯನ ಗುಣ, ಆಧುನಿಕ ಚಿಂತನೆ, ಸಾಮಾಜಿಕ ಜವಾಬ್ದಾರಿ, ಸಾಮೂಹಿಕ ಪ್ರಗತಿಯ ಪ್ರಯತ್ನ, ಭಾವಿ ಪೀಳಿಗೆಯತ್ತ ಕಳಕಳಿ ಇವೆಲ್ಲ ಅನುಕರಣ ಯೋಗ್ಯ ವಿಷಯಗಳು. ಆದರೆ ನಾವು ಇಂದು ಮಾಡುತ್ತಿರುವುದೇನು?

‘ಮಾಡರ್ನ್ ಗರ್ಲ್’ ಎಂಬ ‘ಹಣೆಪಟ್ಟಿ’ಯಡಿ ತುಂಡು ಬಟ್ಟೆ ತೊಟ್ಟು ಪ್ರದರ್ಶನ ಗೊಂಬೆಯಾಗುತ್ತಾ, ಬದುಕುವ ಮೊದಲು ಜೀವನವನ್ನು ಹಸಿಹಸಿಯಾಗಿ ಅರಿಯುತ್ತಿದ್ದೇವೆ ಎಂಬ ತಾತ್ವಿಕ ಮುಖವಾಡ ತೊಟ್ಟು ‘ಬಾಯ್ ಫ್ರೆಂಡ್’ ಹೆಸರಲ್ಲಿ ಮನಬಂದಂತೆ ಹುಡುಗರ ಜತೆಗಿನ ಬದುಕು- ‘ಲೈಫ್ ಎಂಜಾಯ್(!)’ ಮಾಡುವ ಇವರು ಮಾತ್ರ ಸಾಫಿಸ್ಟಿಕೇಟೆಡ್ (ಸುಧಾರಿತ) ಮಹಿಳೆ ಎಂದು ಹೇಳುವ ಮಂದಿಯೇ ನಮ್ಮ ಸುತ್ತ ಬೆಳೆಯುತ್ತಿದ್ದಾರೆ.  ಮೈ ತುಂಬ ಬಟ್ಟೆ ಹಾಕಿಕೊಂಡು, ಸಂಪ್ರದಾಯ ಬದ್ಧವಾಗಿ ಹಿರಿಯರ ಮಾತನ್ನು ಗೌರವಿಸುವ ಅನುಸರಿಸುವ ಯುವತಿಯರನ್ನು  ‘ದಡ್ಡಿ’,  ‘ಗೌರಮ್ಮ’,  ‘ಹಳ್ಳಿಗುಗ್ಗು’ ಎಂದು ಹೇಳುವುದಾದರೆ.. (ಇದು ಪುರುಷರಿಗೂ ಅನ್ವಯ), ಯಾವುದು ಮಹಿಳಾ ಸಬಲೀಕರಣ ಎಂಬ ನೋವು ಕಾಡುತ್ತದೆ.

ಹುಡುಗರಷ್ಟೇ ನಾವು ಸಬಲರು ಅನ್ನುವುದನ್ನು ತೋರಿಸಲು ಕ್ಲಬ್ಬು-ಪಬ್ಬು, ಧೂಮಪಾನ, ಮದ್ಯಪಾನ, ಮಾದಕ ದ್ರವ್ಯ ವ್ಯಸನ ಮತ್ತಿತರ ದುಶ್ಚಟಗಳಿಗೆ ಬಲಿಬೀಳುವುದು ‘ಮಾನಿನಿ’ ಪದಕ್ಕೆ ಶೋಭಿಸುತ್ತದೆಯೇ ಎಂದು ಚಿಂತಿಸಲು ಇದು ಸಕಾಲ.

ಹಿರಿಯಕ್ಕನ ಚಾಳಿ..

ಕ್ಲಬ್ಬು, ಪಬ್ಬು, ಬಾಯ್‌ಫ್ರೆಂಡ್,  ‘ವೆರೈಟಿ’ ಲೈಫ್‌ಸ್ಟೈಲ್ ಅನ್ನು ಅನುಸರಿಸುವುದು ಶ್ರೀಮಂತ ಮಹಿಳೆಯರು, ಹೆಣ್ಣು ಮಕ್ಕಳ ಚಾಳಿಯಾದರೆ, ಇದನ್ನೇ ಮಧ್ಯಮ ವರ್ಗ, ಕೆಳಮಧ್ಯಮ ವರ್ಗದ ಯುವತಿಯರೂ ಅನುಕರಿಸುತ್ತಿದ್ದಾರೆ. ತನ್ನ ಗೆಳತಿಯಂತೆ ನಡವಳಿಕೆ  ಅನುಸರಿಸುವುದು ವಿಚಿತ್ರವೆನಿಸುತ್ತದೆ.

ಮಾಯಾನಗರಿ ಸೆಳೆತ...

ಇಲ್ಲೊಂದು ಉದಾಹರಣೆ ಇದೆ ನೋಡಿ. ಆಕೆ ನಮಿತಾ, ಈಕೆ ಆಕಾಂಕ್ಷಾ.. ಜೀವನದ ಸಂಕಷ್ಟಗಳಿಗೆ ತತ್ತರಿಸಿ ಕೆಲಸದ ಅನಿವಾರ್ಯಕ್ಕಾಗಿ ಬೆಂಗಳೂರಿಗೆ ಬಂದ ನಮಿತಾ, ಬದುಕಿನಲ್ಲಿ ಯಾವುದಕ್ಕೂ ಕೊರತೆ, ಇಲ್ಲದಂತೆ ಬಡತನ ಎಂದರೇನು ಎಂದರಿಯದೆ ಬೆಳೆದಿರುವ ಆಕಾಂಕ್ಷಾ; ಮಾಯಾನಗರಿ  ಬೆಂಗಳೂರು ಇವರನ್ನು ಮುಖಾಮುಖಿಯಾಗಿಸುತ್ತದೆ. ಇವರ ಇಬ್ಬರ ಬದುಕಿನ ಘಟ್ಟಗಳು ಕೂಡ ವಿಭಿನ್ನ.

ನಮಿತಾ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಾಗ ಆಕೆಯ ಓರಗೆಯ ವಯಸ್ಸಿನ ಇತರೆ ಹುಡುಗಿಯರು ಕಾರು, ಫ್ಯಾಷನ್ ಬಟ್ಟೆಗಳನ್ನು ತೊಟ್ಟು, ಹೈ-ಟೆಕ್ ಇಂಗ್ಲಿಷ್ ಮಾತನಾಡುವಾಗ ಆಕೆಗೆ ಮುಜುಗರ. ಎಲ್ಲೋ ತಾನು ಹೊಸ ಪ್ರಪಂಚಕ್ಕೆ ಬಂದಂತಹ ಅನುಭವ.

ಇದು ಈಕೆಯದಷ್ಟೇ ವ್ಯಥೆ ಅಲ್ಲ. ಒಂದು ಕುಗ್ರಾಮದಿಂದ ಬೆಂಗಳೂರಿಗೆ ಬಂದಾಗ ಇಂತಹ ಹಲವಾರು ಸನ್ನಿವೇಶಗಳು ಮಧ್ಯಮ ವರ್ಗದ ಇತರ ಹೆಣ್ಣು ಮಕ್ಕಳನ್ನೂ  ಕಾಡುತ್ತವೆ.

ಮಧ್ಯಮ ವರ್ಗದ ಒಬ್ಬ ಹೆಣ್ಣು ಮಗಳು ಮನೆ, ಸಂಪ್ರದಾಯಕ್ಕೆ ಬೆಲೆ ಕೊಡುತ್ತಾಳೆ. ಶ್ರೀಮಂತ ಮನೆಯ ಹೆಣ್ಣುಮಕ್ಕಳು ದುಡ್ಡಿನ ವರಸೆಯಿಂದಲೇ ಎಲ್ಲವನ್ನೂ ಅಳೆಯುತ್ತಾರೆ, ತಮ್ಮ ದೋಷಗಳನ್ನು ಮುಚ್ಚಿಹಾಕುತ್ತಾರೆ. ಅವರ ಯೋಚನೆ, ಇತರ ಲಹರಿಗಳು ಕೂಡ ಭಿನ್ನ.

 

ಇದು ಮಾದರಿಯೇ?

ಇಂದು ಶ್ರೀಮಂತ ಮನೆಯ ಮಹಿಳೆಯರನ್ನು ನೋಡಿ ತಾನು ಅವರಂತೆ ಆಗಬೇಕು, ಅವರ ರೀತಿಯಲ್ಲಿಯೇ ತಾನು ಜೀವನ ನಡೆಸಬೇಕು ಎಂದು ಹಲವಾರು ಬಾರಿ ಮಧ್ಯಮ ವರ್ಗದ ಹೆಣ್ಣುಮಕ್ಕಳು ಪ್ರಯತ್ನಿಸುವುದು,  ಅದುವೇ ಫ್ಯಾಷನ್ ಮಾದರಿ ಬದುಕು ಎಂದು ಭಾವಿಸುವುದು, ಅದನ್ನು ಪಡೆಯಲು ಒದ್ದಾಡುವುದು ವಿಪರ್ಯಾಸವೇ ಸರಿ.

 ಸಾಧನೆ, ಗುರಿ, ಇರಲಿ..

ಜೀವನದಲ್ಲಿ ಉನ್ನತವಾದ ಗುರಿ, ಉದಾತ್ತ ಗುಣಗಳನ್ನು ಇಟ್ಟುಕೊಂಡು ಸಾಧನೆ ಮಾಡುವುದರಲ್ಲಿ ಯುವತಿಯರು ಗಮನ ಕೇಂದ್ರಿಕರಿಸಬೇಕಿದೆ.

 ಯಾರೋ? ಏನೋ ಹೇಳುತ್ತಾರೆ ಎಂದು ಅಂದುಕೊಂಡು  ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಡಿ...  ಸರಿಯಾಗಿ ಚಿಂತನೆ ನಡೆಸಿ ಇದು ನಿಮ್ಮ ಜೀವನ. ಇದರಲ್ಲಿ ಏನೇ ಆದರೂ ನೀವೇ ಇದಕ್ಕೆ ಜವಾಬ್ದಾರರು ಅಲ್ಲವಾ?

ಸಬಲೀಕರಣ ಕಡತದಲ್ಲಿ?

ಕಾಲೇಜು, ಉನ್ನತ ಶಿಕ್ಷಣ, ನೌಕರಿ, ಸ್ವಂತ ಸಂಪಾದನೆ  ಇಷ್ಟು ಪಡೆಯುವುದಷ್ಟೇ  ಮಹಿಳಾ ಸಬಲೀಕರಣವೇ? ಮಹಿಳೆ ಸಬಲೀಕರಣ ಎಂಬ ಹೆಸರಲ್ಲಿ ಪುರುಷ ನಡೆದ ದಾರಿಯಲ್ಲಿ  ನಡೆದು, ಅದೇ ದೋಷ, ಸಾಮಾಜಿಕ ತಪ್ಪುಗಳು ಮಾಡುತ್ತಾ ಮುನ್ನಡೆದರೆ  ಅದರಿಂದ  ‘ಸಮಾನತೆ’ ಎಂಬ ಕಲ್ಪನೆಗೆ ಅರ್ಥ ಬರಲಾರದು.ಯುವತಿಯರು ನಿಜವಾದ ಅರ್ಥದಲ್ಲಿ ಸಬಲೀಕರಣದ ಕಡೆಗೆ ದಿಕ್ಕು ಬದಲಿಸಬೇಕಿದೆ. ಪುರುಷ ಪ್ರತಿಸ್ಪರ್ಧಿ-ವೈರಿ ಅಲ್ಲ, ಪೂರಕಶಕ್ತಿ ಎಂದು ತಿಳಿದುಕೊಂಡೇ  ಯುವತಿಯರು ತಮ್ಮ ಸ್ವಾಭಿಮಾನಕ್ಕೆ ಶ್ರಮಿಸಬೇಕಿದೆ.  ನಿಜವಾಗಲೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದರಲ್ಲಿ ಸಮರ್ಥರಾಗಬೇಕಿದೆ.ಹಾಗಾದಾಗ ಮಾತ್ರ ಲೈಂಗಿಕ ದೌರ್ಜನ್ಯ, ಶೋಷಣೆಯಂತಹ ಪಿಡುಗುಗಳು ನಿಜವಾದ ಅರ್ಥದಲ್ಲಿ  ಇಲ್ಲವಾಗಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.