ಶನಿವಾರ, ಮೇ 15, 2021
26 °C

ಯುವತಿ ಸೇರಿ ಮೂರು ಮಂದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ, ಜಯನಗರ ಹಾಗೂ ಬಸವೇಶ್ವರ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿದಂತೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಯನಗರ ಒಂಬತ್ತನೇ ಹಂತದಲ್ಲಿ ನಡೆದಿದೆ. ಜೆ.ಪಿ.ನಗರ ಆರನೇ ಹಂತದ ನಿವಾಸಿ ಶರತ್ ಎಂಬುವರ ಪತ್ನಿ ಶಿಲ್ಪಾ (32) ಆತ್ಮಹತ್ಯೆ ಮಾಡಿಕೊಂಡವರು. ಅವರ ವಿವಾಹವಾಗಿ ನಾಲ್ಕು ವರ್ಷಗಳಾಗಿದ್ದವು.ಶರತ್ ದಂಪತಿ ನಡುವೆ ಭಾನುವಾರ (ಸೆ.18) ಜಗಳವಾಗಿತ್ತು. ಇದರಿಂದ ಬೇಸರಗೊಂಡ ಶಿಲ್ಪಾ ಅವರು ಮನೆ ಬಿಟ್ಟು ಬಂದು ಜಯನಗರದ ವಸತಿಗೃಹದಲ್ಲಿ ಕೊಠಡಿ ಬಾಡಿಗೆಗೆ ಪಡೆದು ನೆಲೆಸಿದ್ದರು. ಅದೇ ಕೊಠಡಿಯಲ್ಲಿ ಅವರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೊಠಡಿಯಿಂದ ಹೊರಗೆ ಬಾರದ ಕಾರಣ ಅನುಮಾನಗೊಂಡ ವಸತಿಗೃಹದ ಸಿಬ್ಬಂದಿ ಠಾಣೆಗೆ ಮಂಗಳವಾರ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಕೊಠಡಿಯ ಬಾಗಿಲು ಹೊಡೆದು ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸವೇಶ್ವರನಗರ: ಹಣ ಕಳೆದುಕೊಂಡು ಬಂದ ಕಾರಣಕ್ಕೆ ಪೋಷಕರು ನಿಂದಿಸಿದ್ದರಿಂದ ಬೇಸರಗೊಂಡ ಯುವತಿ ಇಲಿ ಪಾಷಾಣ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವೇಶ್ವರನಗರ ಬಳಿಯ ಪ್ರೇಮಾನಗರದಲ್ಲಿ ನಡೆದಿದೆ.  ಲಕ್ಷ್ಮಮ್ಮ ಎಂಬುವರ ಮಗಳು ಬೇಬಿ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಲಕ್ಷ್ಮಮ್ಮ ಅವರು ಮನೆ ಬಾಡಿಗೆ ಕಟ್ಟಲು ಇಟ್ಟುಕೊಂಡಿದ್ದ ಒಂದು ಸಾವಿರ ರೂಪಾಯಿ ಹಣವನ್ನು ಕೆಲ ದಿನಗಳ ಹಿಂದೆ ಮಗಳಿಗೆ ಕೊಟ್ಟಿದ್ದರು. ಮನೆಯಿಂದ ಹೊರಗೆ ಹೋಗಿದ್ದ ಬೇಬಿ ಅವರು ಹಣವನ್ನು ಕಳೆದುಕೊಂಡು ಬಂದಿದ್ದರು. ಇದರಿಂದ ಕೋಪಗೊಂಡ ಲಕ್ಷ್ಮಮ್ಮ ಅವರು ಮಗಳಿಗೆ ಬೈದಿದ್ದರು. ತಾಯಿ ನಿಂದಿಸಿದ್ದರಿಂದ ಮನನೊಂದ ಅವರು ಸೋಮವಾರ ಮಧ್ಯಾಹ್ನ ಇಲಿ ಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಕಾಮಾಕ್ಷಿಪಾಳ್ಯ ಸಮೀಪದ ಚೆನ್ನಿಗಪ್ಪ ಬಡಾವಣೆ ನಿವಾಸಿ ಸುರೇಶ್ ಎಂಬುವರ ಪತ್ನಿ ಮಮತಾ (22) ಅವರು ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಮದುವೆಯಾಗಿ ಮೂರು ವರ್ಷಗಳಾಗಿದ್ದವು. ಸುರೇಶ್ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಬೆಳಿಗ್ಗೆಯೂ ದಂಪತಿ ಮಧ್ಯೆ ಜಗಳವಾಗಿತ್ತು. ಇದರಿಂದ ಬೇಸರಗೊಂಡಿದ್ದ ಮಮತಾ ಅವರು ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.