ಗುರುವಾರ , ಜೂನ್ 24, 2021
29 °C

ಯೂರೋಪ್‌ನ ತುತ್ತತುದಿ ಜುಂಗ್ ಫ್ರೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೂರೋಪ್‌ನ ತುತ್ತತುದಿ ಜುಂಗ್ ಫ್ರೂ

ಸ್ವಿಟ್ಜರ್ಲೆಂಡ್ ಇಲ್ಲದ ಯೂರೋಪ್ ಪ್ರವಾಸ ಪರಿಪೂರ್ಣವಲ್ಲ. ಮನಮೋಹಕ ಪ್ರವಾಸಿ ತಾಣಗಳನ್ನೊಳಗೊಂಡ ಸ್ವಿಟ್ಜರ್ಲೆಂಡ್ ನೋಡುವುದೇ ಒಂದು ಅನನ್ಯ ಅನುಭವ.ಬೆಟ್ಟಗುಡ್ಡಗಳ ನಡುವೆ ಹರಿವ ನದಿ-ಝರಿಗಳ ಸಾಲು ನೋಡುಗರನ್ನು  ಮಂತ್ರಮುಗ್ಧರನ್ನಾಗಿಸುತ್ತವೆ. ಸ್ವಿಸ್ ಚಾಕೋಲೇಟ್‌ಗಳು ಬಾಯಲ್ಲಿ ನೀರೂರಿಸುತ್ತವೆ.ಯೂರೋಪ್‌ನ ತುತ್ತತುದಿ ಎನ್ನುವ ಜುಂಗ್ ಫ್ರೂ ಸರಿಸುಮಾರು 12 ಸಾವಿರ ಅಡಿಗಳಷ್ಟು ಎತ್ತರದ ತಾಣ. ಜುಂಗ್ ಫ್ರೂ ತಲುಪಲು ಒಂದು ದಿನ ಮುಂಚಿತವಾಗಿ ಇಂಟರ್ಲೇಕನ್‌ನಲ್ಲಿ ಉಳಿದುಕೊಳ್ಳುವುದು ಅವಶ್ಯಕ. ಇಂಟರ್ಲೇಕನ್ ತಲುಪಲು ಲೂಜರ್ನ್, ಬರ್ನ್‌ಗಳಿಂದ ಉತ್ತಮ ರೈಲ್ವೇ ಸಂಪರ್ಕವಿದೆ.

 

ಇಂಟರ್ಲೇಕನ್ ಹೋಟೆಲ್‌ಗಳು ಸ್ವಲ್ಪ ದುಬಾರಿಯಾದರೂ ವಿಧಿಯಿಲ್ಲ. 120 ರಿಂದ 150 ಯುರೋಗಳಿಗೆ ಉತ್ತಮವೆನಿಸುವ ಹೋಟೆಲ್‌ಗಳು ಸಿಗುತ್ತವೆ. ನಿಮಗೆ ಪ್ರವಾಸ ತಾಣಗಳ ಬಗ್ಗೆ ಏನಾದರೂ ಅನುಮಾನವಿದ್ದರೆ ಹೋಟೆಲ್ ಸಿಬ್ಬಂದಿ ಉತ್ತಮ ಮಾರ್ಗದರ್ಶನ ನೀಡುತ್ತಾರೆ.ಜುಂಗ್ ಫ್ರೂನ ವಿಶೇಷವೆಂದರೆ ಬೆಟ್ಟದ ತುದಿಯವರೆಗೂ ಇರುವ ಸುಮಾರು ನೂರು ವರ್ಷಗಳಷ್ಟು ಇತಿಹಾಸವುಳ್ಳ ರೈಲ್ವೇ ಸಂಪರ್ಕ. ರೈಲಿನಲ್ಲಿ 1200 ಸಾವಿರ ಅಡಿಗಳನ್ನು ಪ್ರಯಾಣಿಸುವುದೇ ಒಂದು ವಿಚಿತ್ರ ಅನುಭವ. ಬೆಟ್ಟದ ತುದಿಯನ್ನು ತಲುಪುವ ಮಾರ್ಗವನ್ನು ಬಹುಪಾಲು ಸುರಂಗಮಾರ್ಗದಲ್ಲೇ ಕರೆದೊಯ್ಯುವ ಈ ರೈಲು ಪ್ರಯಾಣ ಪ್ರತಿಯೊಬ್ಬರ ಜೀವನದಲ್ಲಿ ಒಂದು ಮರೆಯಲಾಗದ ನೆನಪಾಗಿ ಉಳಿಯುತ್ತದೆ.ಜುಂಗ್ ಫ್ರೂ ತುದಿ ತಲುಪುವ ವೇಳೆಗೆ ತಾಪಮಾನ ಎರಡರಿಂದ ಮೂರು ಡಿಗ್ರಿ ಅಥವಾ ಕೆಲವೊಮ್ಮೆ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿರುತ್ತದೆ. ಆದುದರಿಂದ ನಮ್ಮ ಉಡುಗೆ ತೊಡುಗೆ ಈ ತಾಪಮಾನವನ್ನು ತಡೆದುಕೊಳ್ಳುವ ಹಾಗಿರಬೇಕು. ಶೂ, ಕೈಗವಸು, ತಂಪುಕನ್ನಡಕ ಹಿಮಗಾಳಿಯಿಂದ ಬಚಾವಾಗಲು ಸಹಾಯಕಾರಿ. ಬೆಟ್ಟದ ತುದಿಯನ್ನು ತಲುಪಿ ಸಾಗರೋಪಾದಿಯಾಗಿ ಬಿದ್ದಿರುವ ಮಂಜಿನ ರಾಶಿಯ ನಡುವೆ ಹೆಜ್ಜೆ ಹಾಕಿದರೆ ಜೀವನ ಸಾರ್ಥಕ ಎನಿಸುತ್ತದೆ.ಮಂಜಿನ ಗುಹೆ ಜುಂಗ್ ಫ್ರೂವಿನ ಮತ್ತೊಂದು ವಿಶೇಷ. ಇದನ್ನು ನಿರ್ಮಿಸಿರುವುದೇ ಒಂದು ವಿಸ್ಮಯವೆನಿಸುತ್ತದೆ. ಇಡೀ ಮಂಜಿನ ಬೆಟ್ಟವನ್ನೇ ಕೊರೆದು ಗುಹೆಯನ್ನು ನಿರ್ಮಿಸಲಾಗಿದೆ. ಇದರೊಳಗೆ ಪ್ರವೇಶಿಸಿದ ತಕ್ಷಣ ಯಾವುದೋ ಕಿನ್ನರ ಲೋಕಕ್ಕೆ ಹೋದ ಅನುಭವವಾಗುತ್ತದೆ.

 

ಹಿಮದ ಗಡ್ಡೆಯಲ್ಲೇ ನಿರ್ಮಿಸಿರುವ ವಿವಿಧ ಪ್ರಾಣಿ ಪಕ್ಷಿಗಳು ಅಚ್ಚರಿ ಉಂಟುಮಾಡುತ್ತವೆ. ಮೈಕೊರೆಯುವ ಚಳಿಯಲ್ಲಿ ನೆರಳು ಬೆಳಕಿನ ಕಣ್ಣಾಮುಚ್ಚಾಲೆಯಲ್ಲಿ ಮಂಜಿನ ಗುಹೆಯ ಸೊಬಗನ್ನು ಸವಿಯುವುದು ಅವಿಸ್ಮರಣೀಯ.ಸಾಹಸ ಮನೋಭಾವದ ಪ್ರವಾಸಿಗರಿಗೆ ಸ್ಕೇಟಿಂಗ್, ರೋಪ್ ವೇ, ಐಸ್ ಕಾರ್ ಡ್ರೈವ್ ಮುಂತಾದ ಸಾಹಸ ಆಟಗಳು ಇಲ್ಲಿವೆ. ಹಿಮದ ರಾಶಿಯ ನಡುವೆ ಕುಣಿದು ಕುಪ್ಪಳಿಸಿ ಪ್ರಕೃತಿಯ ಹಲವು ವಿಶೇಷಗಳನ್ನು ಸವಿಯಲು ಜುಂಗ್ ಫ್ರೂ ಒಂದು ಉತ್ತಮ ತಾಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.