ಶುಕ್ರವಾರ, ಏಪ್ರಿಲ್ 23, 2021
28 °C

ಯೋಜನೆ, ಕಾರ್ಯಕ್ರಮ ಅನುಷ್ಠಾನಕ್ಕೆ ಮೂರು ತಂಡ:ಡಿಸಿಎಂಗಳಿಗೂ ಪರಿಶೀಲನೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಆದ್ಯತೆಗಳ ಆಧಾರದಲ್ಲಿ ರೂಪಿಸಿರುವ ಕ್ರಿಯಾಯೋಜನೆಯ ಅನುಷ್ಠಾನ ವಿವಿಧ ಇಲಾಖೆಗಳಲ್ಲಿ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಅಧಿಕಾರವನ್ನು ಉಪ ಮುಖ್ಯಮಂತ್ರಿಗಳಿಗೂ ನೀಡಲಾಗಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ತಮ್ಮ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಬೆಂಗಳೂರು ಪ್ರೆಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸರ್ಕಾರದ ಆದ್ಯತೆಗಳನ್ನು ಪಟ್ಟಿ ಮಾಡಿ, ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಅದರ ಸರಿಯಾದ ಅನುಷ್ಠಾನ ಆಗುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುವುದು. ಇದಕ್ಕಾಗಿಯೇ ತಂಡಗಳನ್ನು ರಚನೆ ಮಾಡಲಾಗಿದೆ~ ಎಂದರು.`ನನ್ನ ನೇತೃತ್ವದ ತಂಡದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್ ಮತ್ತು ನನ್ನ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಇರುತ್ತಾರೆ. ಈ ತಂಡ ಸಾರ್ವಜನಿಕ ಸೇವೆಗಳು, ವಾಣಿಜ್ಯ ಮತ್ತು ಕೈಗಾರಿಕೆ, ಇಂಧನ, ಜಲಸಂಪನ್ಮೂಲ, ಮೂಲಸೌಕರ್ಯ ಅಭಿವೃದ್ಧಿ, ರಸ್ತೆಗಳು ಮತ್ತು ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಿದೆ~ ಎಂದು ವಿವರ ನೀಡಿದರು.ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆ.ವಿ.ರಾಜು ಇದ್ದಾರೆ. ಈ ತಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ನೀರಾವರಿ, ಕರಾವಳಿ ಪ್ರದೇಶ, ಪ್ರಾದೇಶಿಕ ಅಭಿವೃದ್ಧಿ, ಕುಡಿಯುವ ನೀರು, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕಾರ್ಯಕ್ರಮಗಳ ಪರಿಶೀಲನೆ ನಡೆಸುತ್ತದೆ ಎಂದರು.ಉಪ ಮುಖ್ಯಮಂತ್ರಿ ಆರ್.ಅಶೋಕ ನೇತೃತ್ವದ ತಂಡದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿ ಸಿಂಗ್ ಮತ್ತು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಇದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಸತಿ, ಉದ್ಯೋಗ ಮತ್ತು ತರಬೇತಿಗೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನೆ ನಡೆಸುವ ಅಧಿಕಾರವನ್ನು ಈ ತಂಡಕ್ಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿಯವರು ಮಾಹಿತಿ ನೀಡಿದರು.ಅಧಿಕಾರಿಗಳು ವಾರಕ್ಕೆ ಒಂದು ಬಾರಿ ಸಭೆ ನಡೆಸಿ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲಿಸುವರು. ತಂಡದ ನೇತೃತ್ವ ವಹಿಸಿರುವವರು ಪ್ರತಿ 15 ದಿನಗಳಿಗೆ ಒಮ್ಮೆ ಅಧಿಕಾರಿಗಳ ಜೊತೆಯಲ್ಲೇ ಸಭೆ ನಡೆಸಿ, ಪರಿಶೀಲನೆ ನಡೆಸುವರು. ತಿಂಗಳಿಗೆ ಒಂದು ಬಾರಿ ತಾವು ಹಾಗೂ ಉಪ ಮುಖ್ಯಮಂತ್ರಿಗಳು ಒಟ್ಟಾಗಿ ಸೇರಿ ಪ್ರಗತಿ ಪರಿಶೀಲಿಸುವ ಕಾರ್ಯಕ್ರಮ ಸಿದ್ಧಪಡಿಸಲಾಗಿದೆ ಎಂದರು.ಪರಿಣಾಮಕಾರಿ ಆಡಳಿತ ನೀಡುವ ಪ್ರಯತ್ನ ತಮ್ಮದು. ಇಬ್ಬರು ಉಪ ಮುಖ್ಯಮಂತ್ರಿಗಳು ಮತ್ತು ಸಂಪುಟದ ಎಲ್ಲ ಸದಸ್ಯರಿಗೂ ಈ ವಿಷಯದಲ್ಲಿ ಸಾಮೂಹಿಕ ಹೊಣೆಗಾರಿಕೆ ಇರುತ್ತದೆ. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ವಿಷಯದಲ್ಲಿ ಸಂಪುಟದ ಎಲ್ಲ ಸದಸ್ಯರ ಜೊತೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.`ಸಕಾಲ~ ವಿಸ್ತರಣೆ: ಪ್ರಸ್ತುತ 11 ಇಲಾಖೆಗಳ 151 ಸೇವೆಗಳು `ಸಕಾಲ~ ಕಾಯ್ದೆಯ ವ್ಯಾಪ್ತಿಯಲ್ಲಿವೆ. ಈ ಕಾಯ್ದೆಯ ಅಡಿಯಲ್ಲಿ ಈವರೆಗೆ 74.40 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದು, 71.21 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇದು ಒಂದು ಅತ್ಯುತ್ತಮ ಕಾಯ್ದೆ. ಇನ್ನೂ 72 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, `ನಾನು ಸಂಬಂಧಿಸಿದ ಶಾಸಕರ ಜೊತೆ ನೇರವಾಗಿ ಚರ್ಚೆ ನಡೆಸುತ್ತೇನೆ. ನಂತರವೇ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ~ ಎಂದರು.`ಕಾನೂನು, ಸುವ್ಯವಸ್ಥೆ ಹದಗೆಟ್ಟಿಲ್ಲ~:

`ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಯಾವುದೇ ರೀತಿಯ ಗಲಭೆ ನಡೆದಿಲ್ಲ. ಮಂಗಳೂರಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ಆರೋಪಿಗಳು ಎಷ್ಟೇ ಬಲಿಷ್ಠರಾಗಿದ್ದರೂ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂಬ ಮಾತನ್ನು ಸರ್ಕಾರ ಉಳಿಸಿಕೊಂಡಿದೆ. ಇಂತಹ ಘಟನೆಗಳನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಲೋಕಾಯುಕ್ತರ ನೇಮಕ ವಿಳಂಬ ಕುರಿತು ಕೇಳಿದಾಗ, `ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಲೋಕಾಯುಕ್ತರನ್ನು ನೇಮಕ ಮಾಡಬಾರದು ಎಂಬ ದುರುದ್ದೇಶ ಸರ್ಕಾರಕ್ಕೆ ಇಲ್ಲ. ಆದಷ್ಟು ಬೇಗ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು~ ಎಂದರು.ಮುಖ್ಯಾಂಶಗಳು


ಮೂರು ತಂಡಗಳಿಗೂ ಇಲಾಖೆಗಳ ಹಂಚಿಕೆ

ವಾರಕ್ಕೊಮ್ಮೆ ಸಭೆ

`ಸಕಾಲ~ ವಿಸ್ತರಣೆಗೆ ಒಲವು

ಕಾನೂನು, ಸುವ್ಯವಸ್ಥೆ ಉತ್ತಮವಾಗಿದೆ: ಸಿಎಂ
ಟ್ವೆಂಟಿ-ಟ್ವೆಂಟಿ ಪಂದ್ಯ

`ಅತ್ಯಂತ ಕಠಿಣ ಸವಾಲುಗಳು ಇರುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೇನೆ. ಕೇವಲ 10ರಿಂದ 11 ತಿಂಗಳ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಬೇಕಿದೆ. ಒಂದು ರೀತಿಯಲ್ಲಿ ಇದು ಟ್ವೆಂಟಿ-ಟ್ವೆಂಟಿ ಪಂದ್ಯ ಇದ್ದಂತೆ. ಒಂದು, ಎರಡು ರನ್ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಬೌಂಡರಿ ಅಥವಾ ಸಿಕ್ಸರ್ ಬಾರಿಸಬೇಕು. ಅಂಪೈರ್ ಪಂದ್ಯವನ್ನು ನಿಯಂತ್ರಿಸುತ್ತಾರೆ ಎಂಬ ಭಯವಿಲ್ಲ. ಬ್ಯಾಟ್ಸ್‌ಮನ್ ಸರಿಯಾಗಿ ಆಡಬೇಕು ಅಷ್ಟೆ~ರಾಜಕೀಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರಿಂದ ಎದುರಾದ ಪ್ರಶ್ನೆಗಳಿಗೆ ಜಗದೀಶ ಶೆಟ್ಟರ್ ನೀಡಿದ ಉತ್ತರ...ಪ್ರಶ್ನೆ: ನೀವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಗೊಂಬೆಯೇ?

ಜಗದೀಶ ಶೆಟ್ಟರ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ.ಪ್ರಶ್ನೆ: ಕೃಷಿ ಸಾಲ ಮನ್ನಾ ಮಾಡಲು ತಾವೇ ಕಾರಣ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲಾ?

ವಿಧಾನ ಮಂಡಲದಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶ ಇದೆ. ರೈತರ ಪರವಾಗಿ ಎಲ್ಲರೂ ಮಾತನಾಡುತ್ತಾರೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದು ಇಲ್ಲಿ ಮುಖ್ಯ ಆಗುವುದಿಲ್ಲ. ಪ್ರತಿಯೊಂದು ಹೇಳಿಕೆಗೂ ಪ್ರತಿಕ್ರಿಯೆ ಕೊಡಬಾರದು.ಪ್ರಶ್ನೆ: ತಮ್ಮಿಂದಾಗಿಯೇ ಶೆಟ್ಟರ್ ಮುಖ್ಯಮಂತ್ರಿ ಆದರು, ಇಲ್ಲವಾದರೆ ಅದು ಕನಸಿನಲ್ಲೂ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದು ನಿಜವೇ?

ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ಶಾಸಕನಾಗಿದ್ದು, ಸಚಿವನಾಗಿದ್ದು, ಸ್ಪೀಕರ್ ಆಗಿದ್ದು ಎಲ್ಲವೂ ಆಕಸ್ಮಿಕ.ಪ್ರಶ್ನೆ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು?

ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.ಪ್ರಶ್ನೆ: ನಿಮ್ಮ ಮತ್ತು ಸಚಿವರ ಆಸ್ತಿ ವಿವರ ಘೋಷಣೆ ಯಾವಾಗ?

ಶೀಘ್ರದಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.