ಇವರ ಹೆಸರು ರಂಗನಾಯಕಮ್ಮ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಂಗದ ಮೇಲೆ ನಾಯಕಿಯಾಗಿ ಮೆರೆದ ಇವರಿಗೆ ಇದು ಅನ್ವರ್ಥನಾಮ. ಹುಟ್ಟಿದಾಗ ತಂದೆತಾಯಿ ಇಟ್ಟ ಹೆಸರಲ್ಲ. ಅವರು ನಿರ್ಮಲ ಎಂದು ಕರೆದಿದ್ದರು. ಎಂಟು ವರ್ಷದ ಬಾಲಕಿ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪೆನಿಯನ್ನು ಬಾಲನಟಿ(ಟ)ಯಾಗಿ ಸೇರಿದರು.

ಬಾಲಕಿಯ ಚುರುಕುತನ ಗಮನಿಸಿದ ಸುಬ್ಬಯ್ಯ ನಾಯ್ಡು, `ನೀನು ರಂಗದ ಮೇಲೆ ನಾಯಕಿ ಆಗು. ಇನ್ನು ಮುಂದೆ ನಿನ್ನ ಹೆಸರು ರಂಗನಾಯಕಿ~ ಎಂದು ಹರಸಿದರು.

ಅವರ ಹಾರೈಕೆ ಸುಳ್ಳಾಗಲಿಲ್ಲ. ಕನ್ನಡದ ಹಲವು ಹೆಸರಾಂತ ನಾಟಕ ಕಂಪೆನಿಗಳು ಹಾಗೂ ಗ್ರಾಮೀಣ ರಂಗಭೂಮಿಯಲ್ಲಿಅರ್ಧ ಶತಮಾನಕ್ಕೂ ಮಿಕ್ಕಿದ ಕಾಲ ಎಲ್ಲ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸಿ ನಿಜ ಅರ್ಥದ ರಂಗನಾಯಕಿಯೇ ಆದರು.

1940ರಲ್ಲಿ ಬೆಂಗಳೂರಿನಲ್ಲಿ ಟಿ.ಕೇಶವನ್- ಶಾರದಮ್ಮ ದಂಪತಿಗೆ ಜನಿಸಿದ ನಿರ್ಮಲ ರಂಗ ಪ್ರವೇಶಿಸಿದ್ದು ಸಂಗೀತದ ಮೂಲಕ. ತಂದೆಯೇ ಮೂಲ ಪ್ರೇರಣೆ. ಶಾಲೆಯಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಕೇಶವನ್ ತಮ್ಮ ಪತ್ನಿ ತೀರಿ ಹೋದಮೇಲೆ ಮೂವರು ಮಕ್ಕಳನ್ನು ಕಟ್ಟಿಕೊಂಡು ನಾಟಕ ಕಂಪೆನಿಗೆ ನಡೆದುಬಿಟ್ಟರು.

2-3 ವರ್ಷ ಕಳೆದ ಮೇಲೆ ಮಗನ ವಿದ್ಯಾಭ್ಯಾಸಕ್ಕೆ ಅನುವಾಗಲಿ ಎಂದು ಮತ್ತೆ ಬೆಂಗಳೂರಿಗೆ ವಾಪಸ್ ಬಂದರಾದರೂ, ರಂಗನಾಯಕಮ್ಮ ಮಾತ್ರ ಕಂಪೆನಿಯಲ್ಲೇ ಉಳಿದರು. ಮುಂದೆ ರಂಗನಾಯಕಮ್ಮನ ತಮ್ಮನೂ ನಾಟಕ ಕಂಪೆನಿಗೆ ಮರಳಿದರು. ಅವರು ಬೇರಾರೂ ಅಲ್ಲ, ಚಿತ್ರರಂಗದಲ್ಲಿ ಹೆಸರು ಮಾಡಿರುವ ಡಿಂಗ್ರಿ ನಾಗರಾಜ್.

ಸುಬ್ಬಯ್ಯ ನಾಯ್ಡು ಕಂಪೆನಿಯ ಬೇಡರ ಕಣ್ಣಪ್ಪ, ಕೃಷ್ಣಲೀಲೆ, ಭೂಕೈಲಾಸ, ಜಗಜ್ಯೋತಿ ಬಸವೇಶ್ವರ, ಭಕ್ತ ಅಂಬರೀಶ ಮುಂತಾದ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ಅಭಿನಯಿಸಿದ ರಂಗನಾಯಕಮ್ಮ ಒಂದು ವರ್ಷದ ನಂತರ ಆ ಕಂಪೆನಿ ತೊರೆದು ಗುಬ್ಬಿ ವೀರಣ್ಣ ನಾಟಕ ಕಂಪೆನಿ ಸೇರಿದರು.

ಮುಂದಿನ 25 ವರ್ಷಗಳ ಕಾಲ ಗುಬ್ಬಿ ವೀರಣ್ಣ ಕಂಪೆನಿಯೇ ಅವರ ಅಖಾಡ. ಬಾಲ ಪಾತ್ರಗಳಿಂದ ನಾಯಕಿ, ಖಳನಾಯಕಿ, ತಾಯಿ ಪಾತ್ರದವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಹೆಸರು ಮಾಡಿದರು. ತಂದೆಯ ಗುರು ಸ್ಥಾನವನ್ನು ಇಲ್ಲಿ ಪಿಟೀಲು ಶಂಕರಯ್ಯ ತುಂಬಿದ್ದರು. ಈ ಮಧ್ಯೆ ನಟ ಹಾಗೂ ಸಂಘಟಕ ಕೆ.ನಂಜಪ್ಪ ಅವರನ್ನು ರಂಗನಾಯಕಮ್ಮ ವರಿಸಿದರು.

ನಟಿಯಾಗಿ ಅಥವಾ ನಟರಾಗಿ ಒಮ್ಮೆ ದೊಡ್ಡ ಹೆಸರು ಮಾಡಿದರೆಂದರೆ, ತೀರಿತು. ಅವರು ಸಾಮಾನ್ಯವಾಗಿ ಕನಸು ಕಾಣುವುದು ಸ್ವಂತ ನಾಟಕ ಕಂಪೆನಿ ಮಾಡಬೇಕೆಂಬುದು!

ರಂಗನಾಯಕಮ್ಮನವರಿಗೆ ಆಗ ಬಿದ್ದದ್ದು ಇಂತಹದೇ ಬಣ್ಣಬಣ್ಣದ ಭ್ರಮಾತ್ಮಕ ಕನಸು. ಕನಸನ್ನೇ ನೆಚ್ಚಿಕೊಂಡು ಗುಬ್ಬಿ ಕಂಪೆನಿ ತೊರೆದು ಬಂದ ರಂಗನಾಯಕಮ್ಮ ಪತಿಯೊಂದಿಗೆ `ಲೋಕನಾಥ ಮಿತ್ರ ಮಂಡಲಿ~ ಎಂಬ ನಾಟಕ ಕಂಪೆನಿ ಶುರು ಮಾಡೇಬಿಟ್ಟರು.

ಮದುವೆ ಮಾರ್ಕೆಟ್, ರಾಜಸೂಯ ಯಾಗ, ಬಿಡುಗಡೆ ಮುಂತಾದ ನಾಟಕಗಳ ಪ್ರದರ್ಶನದ ಮೂಲಕ ನಂಜನಗೂಡು, ಚಾಮರಾಜನಗರ, ಚನ್ನಪಟ್ಟಣ ಮುಂತಾದ ನಾಲ್ಕಾರು ಕಡೆ ಕ್ಯಾಂಪ್ ಮಾಡಿ ನಷ್ಟದೊಂದಿಗೆ ಎರಡೇ ವರ್ಷಕ್ಕೆ ಮುಚ್ಚಬೇಕಾಯಿತು.

ಆದರೆ `ನಾಯಕಿ~ `ರಂಗ~ ತೊರೆಯಲಿಲ್ಲ. ಪತಿ ನಂಜಪ್ಪ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೇನೇಜರ್ ಆಗಿ ಹೋದರೆ, ಬೆಂಗಳೂರಿನಲ್ಲಿ ನೆಲೆ ನಿಂತ ರಂಗನಾಯಕಮ್ಮ ಹೊನ್ನಪ್ಪ ಭಾಗವತರ್, ಸುಳ್ಳದ ದೇಸಾಯಿ, ಮಹಾಂತೇಶ ಶಾಸ್ತ್ರಿ, ಯೋಗನರಸಿಂಹ, ಮಹದೇವಸ್ವಾಮಿ, ಸ್ತ್ರೀ ನಾಟಕ ಮಂಡಳಿ, ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿ- ಹೀಗೆ ನಾಡಿನ ಹಲವು ಹೆಸರಾಂತ ನಾಟಕ ಕಂಪೆನಿಗಳಲ್ಲಿ ಅಭಿನಯಿಸುತ್ತಲೇ ಇದ್ದರು. ಈ ಮಧ್ಯೆ ಹಳ್ಳಿ ಪಟ್ಟಣಗಳ ಪೌರಾಣಿಕ ನಾಟಕಗಳಿಗೂ ಅವರಿಗೆ ಆಹ್ವಾನ ಇರುತ್ತಿತ್ತು. ಅವರ ಅಭಿನಯ ವೃತ್ತಿಗೆ ನಿವೃತ್ತಿಯೇ ಇಲ್ಲ. 72 ದಾಟಿದ ರಂಗನಾಯಕಮ್ಮ ಈಗಲೂ ಕರೆ ಬಂದರೆ ಮುಖಕ್ಕೆ ಬಣ್ಣ ಹಚ್ಚಲು ರೆಡಿ.

ರಂಗನಾಯಕಮ್ಮ ತಮ್ಮ ಸುದೀರ್ಘ ರಂಗಜೀವನದ ನಾಲ್ಕೈದು ಪ್ರಸಂಗಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರ ರಂಗವ್ಯಕ್ತಿತ್ವದ ವಿಶೇಷವೂ ಇದಾದ್ದರಿಂದ ಒಂದೆರಡು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಗುಬ್ಬಿಕಂಪೆನಿಯ ತೀರ್ಥಹಳ್ಳಿ ಕ್ಯಾಂಪ್: ದಶಾವತಾರ ನಾಟಕಕ್ಕೆ ಭರ್ಜರಿ ಕಲೆಕ್ಷನ್. ಉತ್ತರೆ, ಚಂಚಲಕುಮಾರಿ ಪಾತ್ರಗಳನ್ನು ಮಾಡಿಕೊಂಡಿದ್ದ ರಂಗನಾಯಕಮ್ಮನಿಗೆ ಒಂದು ದಿನ ಏಕಾಏಕಿ ಪ್ರಹ್ಲಾದನ ಪಾತ್ರ ಮಾಡುವ ಅನಿವಾರ್ಯತೆ. ಆ ಸಂದರ್ಭವನ್ನು ಅಮ್ಮ ಈಗಲೂ ಸ್ವಾರಸ್ಯಕರವಾಗಿ ವರ್ಣಿಸುತ್ತಾರೆ. `ಆ ಪಾತ್ರಕ್ಕೆ ನಾನು ದಪ್ಪ ಆಗ್ತೀನಿ~ ಎಂದೆ.

`ಕಯಾದು ಪಾತ್ರದ ಜಯಾನು ದಪ್ಪ, ಹಿರಣ್ಯಕಶಿಪುನೂ ದಪ್ಪ, ನೀನು ಮಾಡಿದರೆ ಏನು ತಪ್ಪು~ ಎಂದು ಅಪ್ಪಾವ್ರ (ಗುಬ್ಬಿ ವೀರಣ್ಣನವರನ್ನು ತಪ್ಪಿಯೂ ರಂಗನಾಯಕಮ್ಮ ಹೆಸರು ಹಿಡಿದು ಕರೆದವರಲ್ಲ) ಹುರಿದುಂಬಿಸಿದರು. `ಹರಿಯಲ್ಲದಿನ್ನುಂಟೆ ಬೇರೆ ಪರದೈವ...~ ಎಂದು ಹಾಡುತ್ತ ಪ್ರಹ್ಲಾದನಾಗಿ ಪ್ರವೇಶಿಸಿದೆ. ನಾಟಕ ಪೂರ್ತಿ ವೀಕ್ಷಿಸಿದ ವೀರಣ್ಣನವರು ನಾಟಕ ಮುಗಿದ ಮೇಲೆ ಭೇಷ್ ಮರಿ ಎಂದು ಪ್ರಶಂಸಿಸಿ ಜೇಬಿನಲ್ಲಿ ಎಷ್ಟಿತ್ತೋ ಅಷ್ಟು ದುಡ್ಡನ್ನು ತೆಗೆದು ಕೈಗೆ ಕೊಟ್ಟರು (ಅದು ವೀರಣ್ಣನವರ ಶೈಲಿ)...~

ಗುಬ್ಬಿ ವೀರಣ್ಣ ಕಂಪೆನಿಯಲ್ಲಿ ರಂಗನಾಯಕಮ್ಮ ಇನ್ನೂ ಸೀತೆ ಪಾತ್ರದಲ್ಲಿ ಅಭಿನಯಿಸಿರಲಿಲ್ಲ. ಕೊಟ್ಟೂರು ಕ್ಯಾಂಪ್ನಲ್ಲಿ ಸೀತೆ ಪಾತ್ರ ಮಾಡುವ ಅನಿವಾರ್ಯತೆ ಎದುರಾಯಿತು. ಆರಂಭದಲ್ಲಿ ಅವರು ಹಿಂದೇಟು ಹಾಕಿದರಂತೆ. ಆಗ, `ಮಾಡು ರಂಗ.. ಮಾಡು ರಂಗ..~ ಎಂದು ಸ್ವರ್ಣಮ್ಮ, ಅಚ್ಯುತರಾಯರು ಹುರಿದುಂಬಿಸಿದರು. `ತೊರೆದ ನನ್ನ ಪತಿ ನಿರ್ದಯದಿ, ಆದೆ ಅನಾಥೆ- ಆಶ್ರಯರಹಿತೆ...~ ಎಂದು ಹಾಡುವ ದೃಶ್ಯದಲ್ಲಿ ನನ್ನ ಪಾತ್ರಕ್ಕೆ ಮನಸೋತ ರಾಯರು, `ಸಾಕ್ಷಾತ್ ಮಾಲತಮ್ಮನವರನ್ನು ನೋಡಿದ ಹಾಗಾಯಿತು~ ಎಂದು ಬೆನ್ನುತಟ್ಟಿದರು.

ವೃತ್ತಿರಂಗಭೂಮಿಯಲ್ಲಿ ಕೆಲವು ಪಾತ್ರಗಳಿಗೆ ದಂತಕತೆಯಾದ ನಟ ನಟಿಯರೇ ಇದ್ದಾರೆ. ಕೆಲವರು ತಮಗೆ ಹೆಸರು ಕೊಟ್ಟ ಪಾತ್ರ ಬಿಟ್ಟು ಬೇರೆ ಪಾತ್ರ ಮಾಡಿದವರಲ್ಲ! ರಂಗನಾಯಕಮ್ಮ ಹಾಗಲ್ಲ, ಯಾವುದೇ ಪಾತ್ರಕ್ಕೆ ಸದಾಸಿದ್ಧ. ದೊರೆತ ಎಲ್ಲ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸುವವರೇ ನಿಜವಾದ ನಾಯಕರಲ್ಲವೇ?

ಗುಬ್ಬಿ ವೀರಣ್ಣ ಪ್ರಶಸ್ತಿ ಕನ್ನಡರಂಗಭೂಮಿಯ ಅತ್ಯುನ್ನತ ಪ್ರಶಸ್ತಿ. ಆ ಕಾಲದಲ್ಲೇ ದೊಡ್ಡ ಹೆಸರು ಮಾಡಿರುವ ಇನ್ನೂ ನಾಲ್ಕಾರು ಮಂದಿ ಈ ಪ್ರಶಸ್ತಿ ಪಡೆಯಲು ಅರ್ಹರಾದವರಿದ್ದಾರೆ. ಅವರ ಸಾಲಿನಲ್ಲಿ ರಂಗನಾಯಕಮ್ಮನೂ ಒಬ್ಬರು.

ಗುಬ್ಬಿ ವೀರಣ್ಣ ಪ್ರಶಸ್ತಿಗೆ ಇದುವರೆಗೂ ಭಾಜನರಾದವರೆಲ್ಲರೂ ಅರ್ಹರೇ. ಹಾಗಂತ ಅರ್ಹತೆ ಇರುವ ಎಲ್ಲರಿಗೂ ದೊರೆಯುತ್ತದೆ ಎಂದೂ ಹೇಳಲಾಗದು. ಅಂತಹ ಕೊರತೆಯನ್ನು ಕೆಲವು ಖಾಸಗಿ ಪ್ರಶಸ್ತಿಗಳು ತುಂಬಿಕೊಡುತ್ತವೆ. ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್ ಅವರ ತಮ್ಮ ವರದರಾಜು ಹೆಸರಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಗೆಳೆಯರು ಸ್ಥಾಪಿಸಿರುವ ಎಸ್.ಪಿ.ವರದರಾಜು ಪ್ರಶಸ್ತಿ ಕಳೆದ ಆರು ವರ್ಷಗಳಿಂದ ಅಂತಹ ಕೆಲಸ ಮಾಡುತ್ತ ಬಂದಿದೆ.

ಚಿತ್ರ ಹಾಗೂ ರಂಗದ ತಲಾ ಒಬ್ಬರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅರ್ಹರಿದ್ದೂ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಗುರುತಿಸುವುದೇ ಈ ಪ್ರಶಸ್ತಿಯ ವಿಶೇಷ. ಪ್ರಸಕ್ತವರ್ಷ ರಂಗನಾಯಕಮ್ಮನವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದೂ ಅಂತಹ ಒಂದು ಗುರುತಿಸುವಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.