ಭಾನುವಾರ, ಮೇ 16, 2021
23 °C

ರಂಗಾಸಕ್ತರಿಗೆ ನಾಟಕದ ಪಾಠ

ಆರ್.ವೀರೇಂದ್ರ ಪ್ರಸಾದ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕರ್ನಾಟಕ ನಾಟಕ ಅಕಾಡೆಮಿಯು ಗದುಗಿನ ರಂಗಚೇತನ ಸಂಸ್ಥೆಯ ಜೊತೆ ಸೇರಿಕೊಂಡು ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಯವರ ಸ್ಮರಣಾರ್ಥ ಮೂರು ದಿನಗಳ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.ತೋಂಟದಾರ್ಯ ಕಲ್ಯಾಣ ಕೇಂದ್ರ ಸಭಾಂಗಣದಲ್ಲಿ ಮೂರು ದಿನ ಸಂಜೆ ಸಮಯದಲ್ಲಿ ಮೂರು ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅಲ್ಲಿಗೆ ನಾಟಕೋತ್ಸವಕ್ಕೆ ತೆರೆ ಬೀಳುತ್ತದೆ. ಆದರೆ ಈ ಬಾರಿ ಅಕಾಡೆಮಿಯು ನಾಟಕೋತ್ಸವದಲ್ಲಿ ನಾಟಕಗಳನ್ನು ಕೇವಲ ಜಾತ್ರೆ ಸಮಯದಲ್ಲಿ ಬಂದು ಹೋದಂತೆ ಪ್ರದರ್ಶನ ಮಾಡದೇ, ಉತ್ಸವ ಇರುವಷ್ಟು ದಿನವಾದರೂ ಜನರಿಗೆ ರಂಗಭೂಮಿಯ ಕಡೆ ಆಸಕ್ತಿ ಉಂಟು ಮಾಡುವುದು, ಯುವ ಜನಾಂಗ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ಬರುವಂತೆ ಮಾಡುವ ಕೆಲಸಕ್ಕೆ ಸಣ್ಣದಾಗಿ ಕೈ ಹಚ್ಚಿದೆ. ನಾಟಕೋತ್ಸವದ ರಂಗಸಜ್ಜಿಕೆಯ ಅಡಿಯಲ್ಲಿಯೇ ವಿಶೇಷ ರಂಗ ತರಬೇತಿಯನ್ನು ಏರ್ಪಡಿಸಿದೆ.ಗದುಗಿನಲ್ಲಿ ನಡೆಯುತ್ತಿರುವ ರಂಗತರಬೇತಿ ಶಿಬಿರದ ಉಸ್ತುವಾರಿಯನ್ನು ನಾಟಕರಾರ ವಿನೋದ್ ಅಂಬೇಕರ್ ವಹಿಸಿಕೊಂಡಿದ್ದಾರೆ. ಬಿ.ವಿ.ಕಾರಂತರ ಒಡನಾಟ ಹೊಂದಿದ್ದ ಅಂಬೇಕರ್, ತಮ್ಮ ರಂಗಾನುಭಗಳನ್ನು ಶಿಬಿರಾರ್ಥಿಗಳಿಗೆ ಮೂರು ದಿನಗಳ ಕಾಲ ಧಾರೆ ಎರೆಯಲಿದ್ದಾರೆ. ಇವರೊಂದಿಗೆ ನಾಟಕ ಅಕಾಡೆಮಿ ಸದಸ್ಯ ಮಾಲತೇಶ ಬಡಿಗೇರ, ಹಿರಿಯ ನಾಟಕಕಾರ ಪ್ರಕಾಶ ಕಡಪಟ್ಟಿ ಸಹ ವಿಚಾರಧಾರೆಯನ್ನು ಹಂಚಿಕೊಳ್ಳುತ್ತಿದ್ದಾರೆ.ಶಿಬಿರದಲ್ಲಿ ರಂಗಭೂಮಿಯ ಪ್ರಾಥಮಿಕ ಅಂಶಗಳನ್ನು ಹೇಳಿಕೊಡಲಾಗುತ್ತಿದೆ. ರಂಗಸಜ್ಜಿಕೆ ಹೇಗಿರುತ್ತದೆ. ಪಾತ್ರಧಾರಿ ಪ್ರೇಕ್ಷಕರನ್ನು ಹೇಗೆ ಎದುರಿಸಬೇಕು. ಪಾತ್ರವನ್ನು ಯಾವ-ಯಾವ ಆಯಾಮದಲ್ಲಿ ನೋಡಬೇಕು. ಪಾತ್ರದ ಆಳ-ಅರಿವನ್ನು ಹೇಗೆ ಗುರುತಿಸಿಕೊಳ್ಳಬೇಕು. ಧ್ವನಿ ಏರಿಳಿತ ಯಾವ ರೀತಿ ಇರಬೇಕು.

 

ನಾಟಕಕ್ಕೆ ಸಂಗೀತ ಎಷ್ಟು ಮುಖ್ಯ, ಮೇಕಪ್ ಯಾವ ರೀತಿ ಒಂದು ಪಾತ್ರದ ಪೋಷಣೆಗೆ ಸಹಾಯಕಾರಿಯಾಗುತ್ತದೆ. ರಂಗಸಜ್ಜಿಕೆಯ ಮೇಲೆ ಬೀಳುವ ಪ್ರಖರ ಬೆಳಕಿನ ಜೊತೆ ಯಾವ ರೀತಿ ಅನುಸಂಧಾನ ನಡೆಸಬೇಕು... ಹೀಗೆ ಇನ್ನು ಹಲವು ವಿಷಯಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತಿದೆ.`ಮೂರು ದಿನಗಳಲ್ಲಿ ರಂಗಭೂಮಿಯ ವಿಷಯವನ್ನು ಪರಿಪೂರ್ಣವಾಗಿ ಹೇಳಿಕೊಡಲು ಆಗುವುದಿಲ್ಲ. ಆದರೂ ಆಸಕ್ತಿ ಇರುವವರಿಗೆ ಸ್ವಲ್ಪವಾದರೂ ಬೇಸಿಕ್ ಕಲಿಸುವುದು ನಮ್ಮ ಉದ್ದೇಶ. ವಿಶೇಷ ರಂಗ ತರಬೇತಿ ಶಿಬಿರದಲ್ಲಿ ಹೊರಹೊಮ್ಮುವ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಮುಂದಿನ ದಿನದಲ್ಲಿ ಗದುಗಿನಲ್ಲಿ ಸುಮಾರು 48 ದಿನಗಳ ಕಾಲ ರಂಗ ತರಬೇತಿ ನೀಡಿ, ಒಂದು ನಾಟಕವನ್ನು ಪ್ರದರ್ಶಿಸುವ ಯೋಜನೆ ಇದೆ~ ಎಂದು ನಾಟಕ ಅಕಾಡೆಮಿ ಸದಸ್ಯ ಮಾಲತೇಶ ಬಡಿಗೇರ `ಪ್ರಜಾವಾಣಿ~ಗೆ ತಿಳಿಸಿದರು.ರಂಗ ಶಿಬಿರದಲ್ಲಿ ಗದುಗಿನ ವಿವಿಧ ಕಾಲೇಜಿನ ಸುಮಾರು 20 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. `ನಾಟಕ ಎಂದರೆ ಕೇವಲ ಅಭಿನಯಿಸುವುದಷ್ಟೆ ಕೆಲಸ ಅಲ್ಲ. ರಂಗದ ಹಿಂದೆ ಯಾವ ರೀತಿ ಸಿದ್ಧಗೊಳ್ಳಬೇಕು. ಧ್ವನಿಯ ಏರಿಳಿತಹೇಗಿರಬೇಕು ಎನ್ನುವುದನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟಿದ್ದಾರೆ~ ಎಂದು ಬಸವೇಶ್ವರ ಕಾಲೇಜಿನಲ್ಲಿ ಅಂತಿಮ ಬಿ.ಎ. ಓದುತ್ತಿರುವ ಅನುಪಮ ಕಿರೇಸೂರು ಶಿಬಿರದ ಬಗ್ಗೆ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.