ಶನಿವಾರ, ಜೂಲೈ 4, 2020
23 °C

ರಂಗ ಕಲಾವಿದೆಗೆ ಕಾರಿನ ಶೆಡ್ಡೇ ನಿವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗ ಕಲಾವಿದೆಗೆ ಕಾರಿನ ಶೆಡ್ಡೇ ನಿವಾಸ

ಹುಬ್ಬಳ್ಳಿ: ಜರಿಯಂಚಿನ ಸೀರೆಯುಟ್ಟು, ತಲೆ ತುಂಬ ಹೂ ಮುಡಿದುಕೊಂಡು, ಮೇಕಪ್ ಮಾಡಿಕೊಂಡು ರಂಗಕ್ಕೆ ಬಂದು ಜಗಮಗಿಸುವ ಬೆಳಕಲ್ಲಿ ನೃತ್ಯವಾಡಿದರೆ ಅಥವಾ ಅಭಿನಯಿಸಿದರೆ ಪ್ರೇಕ್ಷಕರ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದರು. ಅವರು ಒಂದು ಕಾಲದ ಅತ್ಯಂತ ಬೇಡಿಕೆಯ ನೃತ್ಯ ಕಲಾವಿದೆಯಾಗಿದ್ದ ಶಕುಂತಲಾ ಜವಳಿಮಠ. ಭರತನಾಟ್ಯ, ಕಥಕ್ ನೃತ್ಯ ಪ್ರಕಾರಗಳನ್ನು ಶಾಸ್ತ್ರೀಯವಾಗಿ ಕಲಿತು ನಾಟಕಕ್ಕೆ ಪೂರಕವಾಗಿದ್ದ ನೃತ್ಯಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರಿಂದ ಒನ್ಸ್‌ಮೋರ್ ಎನ್ನುವ ಕೂಗು ಕೇಳುತ್ತಿತ್ತು.

 

ಹೀಗಿದ್ದ ಅವರ ವಾಸ ಈಗ ನಗರದ ಹಳೆಬಾದಾಮಿನಗರದ ಮಾರಾಟಕ್ಕಿಟ್ಟ ಪ್ರಕಾಶ ಜೈನ್ ಅವರ ಮನೆಯ ಕಾರಿನ ಶೆಡ್ಡಿನಲ್ಲಿ. ಅದು ಬುದ್ಧಿಮಾಂದ್ಯ ಪುತ್ರ ಪ್ರಕಾಶನೊಂದಿಗೆ. ಶೆಡ್ಡಿನಲ್ಲಿಯೇ ಅಡುಗೆ ಮಾಡಿಕೊಂಡು ಅಲ್ಲೇ ಊಟ, ನಿದ್ದೆ. ಬುದ್ಧಿಮಾಂದ್ಯ ಪುತ್ರನಿಗೆ ಮದುವೆ ಮಾಡಿಲ್ಲ. ಹೀಗಾಗಿ ಅವರೇ ಅಡುಗೆ ಮಾಡುತ್ತ, ಬಡಿಸುತ್ತ ನಿಡುಗಾಲದಿಂದ ಅವರು ತಮ್ಮ ಪುತ್ರನಿಗೆ ಆಸರೆಯಾಗಿದ್ದಾರೆ.

 

ಅವರ ಪತಿ ಬಸವರಾಜ ಜವಳಿಮಠ ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡರು. ಅವರು ಕೂಡಾ ಬಣ್ಣದ ಬದುಕಿನವರೇ. ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ 11 ವರ್ಷದವರಿರುವಾಗಲೇ ಧಾರವಾಡದಿಂದ ಹೋಗಿ ಬಣ್ಣ ಹಚ್ಚಿದರು. ಅಲ್ಲಿಂದ ವಿವಿಧ ಕಂಪನಿಗಳ ಯಾತ್ರೆ ನಡೆಯಿತು. ನಂತರ ಶಕುಂತಲಾ ಅವರನ್ನು ಮದುವೆಯಾದರು. ಆಗ ಶಕುಂತಲಾ ಅವರಿಗೆ 12 ವರ್ಷ. ಮೊದಲ ಪುತ್ರಿಯನ್ನು ಹೆತ್ತಾಗ 16 ವರ್ಷ. ಒಬ್ಬರ ಪಗಾರ ಸಾಲುವುದಿಲ್ಲವೆಂದು ಶಕುಂತಲಾ ಬಣ್ಣ ಹಚ್ಚತೊಡಗಿದರು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ, ಜಮಖಂಡಿಯ ಗಜಾನನ ನಾಟ್ಯ ಸಂಘ, ಸಿಂಧನೂರಿನ ಮುರಡಯ್ಯನವರ ಕಂಪನಿಯಲ್ಲಿ ಅನೇಕ ವರ್ಷಗಳವರೆಗೆ ಅಸಂಖ್ಯ ಪಾತ್ರಗಳನ್ನು ನಿರ್ವಹಿಸಿದರು. ಅದರಲ್ಲೂ ‘ಮುಂಜಾನೆ ಹುಟ್ಟಿ ಸಂಜೆಗೆ ಸಾಯುವ ಕಂಪನಿಗಳಲ್ಲೂ ಅಭಿನಯಿಸಿದೆ’ ಎನ್ನುತ್ತಾರೆ ಅವರು.

 

ನಂತರ ಅವರ ಪತಿ ಬಸವರಾಜ 1961ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ವಿಜಯ ನಾಟ್ಯ ಸಂಘ, ಧಾರವಾಡ ಎನ್ನುವ ಸ್ವಂತ ಕಂಪನಿ ಕಟ್ಟಿದಾಗ ಹೆಗಲು ಕೊಟ್ಟರು. ಹಡೆದವ್ವ, ಹೇಮರಡ್ಡಿ ಮಲ್ಲಮ್ಮ, ಸಂಪತ್ತಿಗೆ ಸವಾಲ್, ಬದುಕು ಬಂಗಾರವಾಯಿತು ಮೊದಲಾದ ನಾಟಕಗಳು ಜಯಭೇರಿ ಬಾರಿಸಿದವು. 18 ವರ್ಷಗಳವರೆಗೆ ಯಶಸ್ವಿಯಾಗಿ ನಡೆದು ನಿಂತುಹೋಯಿತು. ಆಮೇಲೆ ನಾಟಕಗಳಿಗೆ ಬಣ್ಣ ಹಚ್ಚಲು ಆಗದಾಗ ಪಾರ್ವತಿ-ಪರಮೇಶ್ವರ, ಪೂಜಾ ನೃತ್ಯ, ಮೋಹಿನಿ-ಭಸ್ಮಾಸುರ ಮೊದಲಾದ ನೃತ್ಯ ಕಾರ್ಯಕ್ರಮ ನೀಡಿ ತುತ್ತಿನಚೀಲ ತುಂಬಿಸಿಕೊಳ್ಳುತ್ತಿದ್ದರು. ಜೊತೆಗೆ ಗಣೇಶ ಚತುರ್ಥಿ ಸಂದರ್ಭಕ್ಕೆ ಸೊಲ್ಲಾಪುರದಲ್ಲಿ ನೃತ್ಯ ಕಾರ್ಯಕ್ರಮ ನೀಡುತ್ತಿದ್ದರು. ಆದರೆ ಬಸವರಾಜು ತೀರಿಕೊಂಡ ನಂತರ ನಿಜಕ್ಕೂ ಕಷ್ಟಕ್ಕೊಳಗಾದರು ಶಕುಂತಲಾ.

 

ಬಾಡಿಗೆ ಮನೆಯಲ್ಲಿದ್ದರೆ ಕಷ್ಟವೆಂದು ಖಾಲಿ ಮಾಡಿ ಈಗಿರುವ ಕಾರಿನ ಶೆಡ್‌ಗೆ ವರ್ಗಾವಣೆಗೊಂಡರು. ಬೆಂಗಳೂರಿನಲ್ಲಿ ವಾಸವಾಗಿರುವ ಪ್ರಕಾಶ ಜೈನ್ ನಗರದ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಅದು ಮಾರಾಟವಾದ ಮೇಲೆ ಮತ್ತೆ ಬಾಡಿಗೆ ಮನೆ ಹುಡುಕುವ ದುರಂತ ವಾಸ್ತವ ಅವರ ಮುಂದಿದೆ. ಮೂವರು ಪುತ್ರಿಯರು ಮದುವೆಯಾಗಿ ಬೇರೆ ಊರಲ್ಲಿದ್ದಾರೆ. ಮೊದಲ ಪುತ್ರಿ ಅನಸೂಯಾ ಹಾಗೂ ಕೊನೆಯ ಪುತ್ರಿ ಸರ್ವಮಂಗಳ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿರುತ್ತಾರೆ. ಸರ್ವಮಂಗಳ ರಂಗಕಲಾವಿದೆ. ಇನ್ನೊಬ್ಬ ಪುತ್ರಿ ಅನ್ನಪೂರ್ಣ ಸವದತ್ತಿಯಲ್ಲಿರುತ್ತಾರೆ. ಇವರೆಲ್ಲ ಶಕುಂತಲಾ ಅವರನ್ನು ಕರೆಯುತ್ತಾರೆ. ಆದರೆ ‘ಹೋಗುವುದಿಲ್ಲ’ ಎನ್ನುವ ಸ್ಪಷ್ಟ ನಿರ್ಧಾರ ಅವರದು. ‘ಅವರೂ ದುಡಿದು ತಿನ್ನುವವರೇ. ಅವರಿಗೆ ಹೊರೆಯಾಗಬಾರದೆಂದು ಇಲ್ಲೇ ಉಳಿದಿರುವೆ’ ಎನ್ನುವ ಅವರಿಗೆ ಯಾವ ಪ್ರಶಸ್ತಿಗಳೂ ಬಂದಿಲ್ಲ. ಇನ್ನು ಅವರಿಗೆ ಆಸರೆಯಾಗಿದ್ದು ರಾಜ್ಯ ಸರ್ಕಾರದ ಒಂದು ಸಾವಿರ ರೂಪಾಯಿ ಮಾಸಾಶನ ಮತ್ತು ಅವರ ಪುತ್ರ ಪ್ರಕಾಶ ಬುದ್ಧಿಮಾಂದ್ಯನೆಂದು ಬರುವ ರೂ. 400 ಮಾಸಾಶನ.

 

‘ಶಾಲೆಗೆ ಹೋಗಲಿಲ್ಲ. ಹೀಗಾಗಿ ಓದಲು-ಬರೆಯಲು ಬರಲಿಲ್ಲ. ಆದರೆ ಇಡೀ ನಾಟಕವನ್ನು ಇನ್ನೊಬ್ಬರಿಂದ ಓದಿಸಿಕೊಂಡು ಬಾಯಿಪಾಠ ಮಾಡುತ್ತಿದ್ದೆ. 10 ವರ್ಷಗಳ ಹಿಂದೆ ಮಂಡಿ ನೋವೆಂದು ನೃತ್ಯ ಮಾಡುವುದನ್ನು, ನಾಟಕ ಆಡುವುದನ್ನು ಬಿಟ್ಟೆ. ಈಗ ವಯಸ್ಸಾಯಿತು. ಕಷ್ಟದಲ್ಲೇ ಬಂದೆ. ಸುಖ ಅನ್ನೋದು ಗೊತ್ತಿಲ್ಲ’ ಎಂದು ಸೆರಗಿನಿಂದ ಕಣ್ಣೀರು ಒರೆಸಿಕೊಂಡರು.


ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.