ಗುರುವಾರ , ಜೂನ್ 24, 2021
25 °C

ರಂಗ ಯುಗಾದಿಯಲ್ಲಿ ಚಾಳೇಶ-

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗ ಶಂಕರ ಆಯೋಜಿಸಿರುವ `ಕಂಬಾರರೊಂದಿಗೆ ರಂಗ ಯುಗಾದಿ~ ಕಾರ್ಯಕ್ರಮದಲ್ಲಿ ಹೊಸಪೇಟೆಯ ಕನ್ನಡ ಕಲಾಸಂಘದ ಕಲಾವಿದರು ಡಾ.ಚಂದ್ರಶೇಖರ ಕಂಬಾರ ಅವರ `ಚಾಳೇಶ~ ನಾಟಕ ಪ್ರದರ್ಶಿಸಲಿದ್ದಾರೆ.ಭಾನುವಾರ ನಡೆಯಲಿರುವ ರಂಗ ಯುಗಾದಿ ಕಾರ್ಯಕ್ರಮದಲ್ಲಿ ಸಂಜೆ 7ಕ್ಕೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಧನಂಜಯ ಕುಲಕರ್ಣಿ ಇದನ್ನು ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ.ಜನವರಿಯಲ್ಲಿ ಮುಂಬೈ ಕರ್ನಾಟಕ ಸಂಘದವರು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿತಗೊಂಡ ಈ ನಾಟಕವು ಪ್ರೇಕ್ಷಕರಿಂದ, ನಿರ್ಣಾಯಕರಿಂದ ಅಪಾರ ಮೆಚ್ಚುಗೆ ಗಳಿಸಿ ಐದು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.ಇದೇ ತಂಡದ ಕಲಾವಿದರು ರಂಗ ಯುಗಾದಿ ಕಾರ್ಯಕ್ರಮವನ್ನು ಕಂಬಾರರ ರಂಗ ಗೀತೆಗಳನ್ನು ಹಾಡುವುದರ ಮೂಲಕ ಆರಂಭಿಸಲಿದ್ದಾರೆ.ನಾಟಕದ ಕುರಿತು...

ಡಾ.ಚಂದ್ರಶೇಖರ ಕಂಬಾರರ ಅತ್ಯಂತ ಅಪರೂಪದ ಅಸಂಗತ ನಾಟಕಗಳಲ್ಲೊಂದಾದ `ಚಾಳೇಶ~ ಅನೇಕ ಸಂಕೀರ್ಣ ಅಂಶಗಳನ್ನೊಳಗೊಂಡಿದೆ.

ಅವಕಾಶವಾದಿತನ ಮತ್ತು ಊಳಿಗಮಾನ್ಯ ಪದ್ಧತಿ ನಮ್ಮ ಸಂಸ್ಕೃತಿಗೆ ಹೊಸದೇನಲ್ಲ.ಅವಕಾಶ ಸಿಕ್ಕಾಗೆಲ್ಲ ಅದನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಾವುಗಳು ಸಾಬೀತುಪಡಿಸುತ್ತಲೇ ಬಂದಿದ್ದೇವೆ. ಕಂಬಾರರ `ಚಾಳೇಶ~ ನಾಟಕದಲ್ಲಿ ಸಹ ಅವರು ಪ್ರಮುಖವಾಗಿ ಚಿತ್ರಿಸಿರುವುದು ಇವೇ ಎರಡು ಅಂಶಗಳನ್ನು.ನಾಟಕದ ವಸ್ತು ಮೇಲ್ನೋಟಕ್ಕೆ ತುಂಬಾ ತಮಾಷೆಯಾಗಿ ಕಂಡರೂ, ಒಳಹೊಕ್ಕು ನೋಡಿದಾಗ ಅದು ಬೇರೆ ಪದರಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಟಕದ ಪ್ರಮುಖ ಪಾತ್ರಧಾರಿ ಗೋವಿಂದ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸದಾ ಹೊಸ ಸುಳ್ಳುಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಿರುತ್ತಾನೆ.ತನ್ನ ಸುಳ್ಳುಗಳಿಗೆ ತನ್ನ ಹೆಂಡತಿ ಕಾಶಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆ. ಒಂದು ಹಂತದಲ್ಲಿ ತಮಾಷೆಗೆಂದು ಹೇಳಿದ ಸುಳ್ಳು ಶಂಕರ, ಸರಸು ಮತ್ತು ಹುಶ್ಯ ಅವರ ಅವಕಾಶವಾದಿತನಕ್ಕೆ ಕಾರಣವಾಗಿ ನಿಲ್ಲುತ್ತದೆ.ಹೆಂಡತಿಯನ್ನು ಕಳೆದುಕೊಳ್ಳುವ ಗೋವಿಂದ, ಕೊನೆಗೆ ತನ್ನತನವನ್ನು ರಕ್ಷಿಸಿಕೊಳ್ಳಲು ಕೈಯಲ್ಲಿ ಬೆಲ್ಟು ಹಿಡಿದು ನಿಲ್ಲುವುದು ಸಾಂಕೇತಿಕವಾಗಿ ನಮಗೆ ಊಳಿಗಮಾನ್ಯ ಪದ್ಧತಿಯ ಕುರುಹಾಗಿ ಕಾಣುತ್ತದೆ. ನಮ್ಮ ಪ್ರಸ್ತುತ ರಾಜಕಾರಣ ಸಹ ಇದಕ್ಕೆ ಹೊರತಾಗಿಲ್ಲ... 

                                           ====

ರಂಗ ಉಗಾದಿ ಅಂಗವಾಗಿ ಭಾನುವಾರ ಬೆಳಿಗ್ಗೆ 10.30ಕ್ಕೆ ಟಿ.ಬಿ.ಡ್ಯಾಮ್‌ನ ಕನ್ನಡ ಕಲಾ ಸಂಘದವರಿಂದ ರಂಗ ಪ್ರಾರ್ಥನೆ. 11ಕ್ಕೆ ನಟನಾ ತಂಡದಿಂದ ಅಲಿಬಾಬ ನಾಟಕ ಪ್ರದರ್ಶನ. ನಿರ್ದೇಶನ ಮಂಡ್ಯ ರಮೇಶ್. 12ಕ್ಕೆ ಲಾವಣಿ- ಹೇಳತೇನೆ ಕೇಳ.ಪ್ರಸ್ತುತಿ: ರಾಜಶೇಖರ ಕಂಬಾರ. ಮಧ್ಯಾಹ್ನ 1ಕ್ಕೆ ನಾಟಕ ಖರೋಖರ. ಇಳಕಲ್ಲಿನ ಸ್ನೇಹರಂಗ ತಂಡ ಪ್ರಸ್ತುತ ಪಡಿಸಲಿದ್ದು ನಾಟಕವನ್ನು ಅಶೋಕ ಬಾದರದಿನ್ನಿ ನಿರ್ದೇಶಿಸಿದ್ದಾರೆ.ಬಿ.ಜಯಶ್ರೀ ನಿರ್ದೇಶನದ `ಕರಿಮಾಯೆ~ ನಾಟಕವನ್ನು ಸ್ಪಂದನ ತಂಡ ಮಧ್ಯಾಹ್ನ 3ಕ್ಕೆ ಪ್ರಸ್ತುತ ಪಡಿಸಲಿದೆ. ಸಂಜೆ 6ಕ್ಕೆ ಕಂಬಾರರ ಕಾವ್ಯ ವಾಚನ/ಗಾಯನ. ರಾತ್ರಿ 8ಕ್ಕೆ ಕಂಬಾರರೊಂದಿಗೆ ಸಂವಾದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.