ಶುಕ್ರವಾರ, ಮಾರ್ಚ್ 5, 2021
18 °C

ರಕ್ತ ದಾನಿಗಳ ಬೃಹತ್‌ ಜಾಲ

ಆರ್‌.ಎಂ. Updated:

ಅಕ್ಷರ ಗಾತ್ರ : | |

ರಕ್ತ ದಾನಿಗಳ ಬೃಹತ್‌ ಜಾಲ

‘ನಿಮ್ಮ ರಕ್ತದ ಗುಂಪು ಎ ನೆಗೆಟಿವ್‌ ಆಗಿದ್ದರೆ ತಕ್ಷಣ ಧಾವಿಸಿ ನಿಮ್ಮ ಜೀವರಸವನ್ನು ಹಂಚಿಕೊಳ್ಳಿ’ ಎಂಬುದೊಂದು ಸಂದೇಶ ನಮ್ಮ ಮೊಬೈಲ್‌ ಫೋನ್‌ಗೆ ಬಂತು ಅಂದುಕೊಳ್ಳೋಣ. ಓದಿದ ತಕ್ಷಣ ಒಂದಷ್ಟು ಮಂದಿ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿ ನಿಟ್ಟುಸಿರು ಬಿಡುತ್ತಾರೆ. ನಮ್ಮ ಕರ್ತವ್ಯ ನಾವು ಮಾಡಿದೆವು, ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು ಎಂಬ ಷರಾ ಮನಸ್ಸಿನಲ್ಲಿ ಮೂಡುತ್ತದೆ.ಹಾಗೊಂದು ತುರ್ತು ಸಂದರ್ಭ ಒದಗಿದಾಗ ಹೊತ್ತು ಗೊತ್ತುಗಳ ಹಂಗಿಲ್ಲದೆ ರಕ್ತದಾನ ಮಾಡಲು ಸನ್ನದ್ಧರಾಗಿರುವವರ ದೊಡ್ಡ ತಂಡವೊಂದು ನಮ್ಮ ಸುತ್ತಮುತ್ತ ಇದೆ. ಅವರ ಜಾಡನ್ನು ಅಂತರ್ಜಾಲದ ತುಂಬಾ ಜಾಲಾಡುವ ಅಗತ್ಯವಿಲ್ಲ. ಅವರ ಬಗ್ಗೆ ಕರಾರುವಾಕ್‌ ಮಾಹಿತಿ ನೀಡುವ, ಅವರದ್ದೇ ಒಂದು ವೆಬ್‌ಸೈಟ್‌ ಇದೆ. ಆನ್‌ಲೈನ್‌ನಲ್ಲಿ ರಕ್ತದಾನದ ಬಗ್ಗೆ, ರಕ್ತದಾನಿಗಳ ಬಗ್ಗೆ ಅವರು ವಿವರ ಒದಗಿಸುತ್ತಾರೆ. ಹೀಗೆ ಕಾರ್ಯನಿರ್ವಹಿಸುತ್ತಿರುವುದು ಹೈದರಾಬಾದ್‌ ಮೂಲದ ಐವರು ತರುಣರು ಹುಟ್ಟುಹಾಕಿದ ‘ಫ್ರೆಂಡ್ಸ್‌2 ಸಪೋರ್ಟ್‌’ (Friendstosupport- F2S) ಸಂಸ್ಥೆ.ಬೆಂಗಳೂರೂ ಸೇರಿದಂತೆ ದೇಶದ ಉದ್ದಗಲದಲ್ಲಿ ಮಾತ್ರವಲ್ಲ ಅಮೆರಿಕ, ಲಂಡನ್‌, ಸಿಂಗಪುರ ಮುಂತಾದ ರಾಷ್ಟ್ರಗಳಲ್ಲಿಯೂ ಇವರ ನೆಟ್‌ವರ್ಕ್‌ ವಿಸ್ತರಿಸಿಕೊಂಡಿದೆ. F2Sನಲ್ಲಿ ನೋಂದಣಿ ಮಾಡಿಕೊಂಡು ಸಕ್ರಿಯರಾಗಿರುವ ಸದಸ್ಯರು ಎಷ್ಟು ಮಂದಿ ಗೊತ್ತೇ? ಬರೋಬ್ಬರಿ 1.25ಲಕ್ಷ!ಅವರಲ್ಲಿ 10 ಸಾವಿರ ಮಂದಿ ಬೆಂಗಳೂರಿಗರು! ಮೈಸೂರಿನ ‘ಎಕ್ಸೆಲ್‌ಸಾಫ್ಟ್‌ ಟೆಕ್ನಾಲಜೀಸ್‌’ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹೈದರಾಬಾದಿ ಯುವಕ ಷರೀಫ್‌ ಎಸ್.ಕೆ. ಅವರ ಜೀವಪರ ಚಿಂತನೆಯ ಫಲವಾಗಿ ಹುಟ್ಟಿಕೊಂಡದ್ದು F2S.

ಇದಕ್ಕೆ ಪ್ರೇರಣೆ, ಕಾರ್ಯರೂಪಕ್ಕೆ ಬಂದ ಬಗೆ, ಅದಕ್ಕೆ ದಕ್ಕಿದ ಪ್ರತಿಕ್ರಿಯೆ ಇತ್ಯಾದಿ ಸಂಗತಿಗಳನ್ನು ಅವರು ‘ಮೆಟ್ರೊ’ ಜತೆ ಹಂಚಿಕೊಂಡಿದ್ದಾರೆ.ರಕ್ತದಾನಿಗಳ ಆನ್‌ಲೈನ್‌ ಜಾಲದ ಅಗತ್ಯವಿದೆ ಎಂದು ಯಾಕೆ ಅನಿಸಿತು?

ಆಟವಾಡುತ್ತಿದ್ದ ಮಕ್ಕಳನ್ನು ತಿಂಡಿಯ ಆಮಿಷವೊಡ್ಡಿ ಬಲವಂತದಿಂದ ರಕ್ತ ದಾನ ಮಾಡಿಸಿದ ಒಂದು ಘಟನೆ ಹಾಗೂ ಸಾರಾಯಿ ಕೊಡಿಸುವುದಾಗಿ ಆಟೊ ಚಾಲಕರಿಂದ ರಕ್ತದಾನ ಮಾಡಿಸಿದ್ದು ಮತ್ತೊಂದು. ಇದಾದ ನಂತರ ನನ್ನ ಆಪ್ತರೊಬ್ಬರು ತುರ್ತಾಗಿ ರಕ್ತ ಸಿಗದೇ ಅಸುನೀಗಿದ್ದು ನಮ್ಮ ಸಮಾಜದ ನೈತಿಕ ಪ್ರಜ್ಞೆಯನ್ನೇ ಪ್ರಶ್ನಿಸುವಂತೆ ಮಾಡಿತು. ಹೀಗಾಗಿ 2005ರ ನವೆಂಬರ್‌ 14ರಂದು F2S ಅಸ್ತಿತ್ವಕ್ಕೆ ತಂದೆವು.ನಿಮ್ಮ ಚಿಂತನೆಗೆ ಕೈಜೋಡಿಸಿದವರು ಯಾರ್‍್ಯಾರು ಮತ್ತು ನೆಟ್‌ವರ್ಕ್ ಆರಂಭಿಸಿದ್ದು ಹೇಗೆಂಬ ಕುರಿತು ಹೇಳಿ?

‘ಫ್ರೆಂಡ್ಸ್‌2 ಸಪೋರ್ಟ್‌’ ಅಸ್ತಿತ್ವಕ್ಕೆ ಬರಲು ನನ್ನೊಂದಿಗೆ ನಿಂತವರು ನನ್ನ ಬಾಲ್ಯ ಸ್ನೇಹಿತರಾದ ನವೀನ್‌ ರೆಡ್ಡಿ, ಕೋಟೇಶ್ವರ ರಾವ್ ಎಸ್. ಫಣಿ ಕೇತಮಕ್ಕ ಮತ್ತು ಮುರಳಿಕೃಷ್ಣ. ನಾವೆಲ್ಲರೂ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆಯವರು. ನಾವು ಐಟಿ ವಲಯವನ್ನೇ ಟಾರ್ಗೆಟ್‌ ಮಾಡಿಕೊಂಡು ಸಂಪರ್ಕಿಸುತ್ತಾ ಹೋದೆವು. ಬಹುತೇಕರು ಒಪ್ಪಿದರು. ಈಗ ನಮ್ಮೊಂದಿಗೆ 1.25ಲಕ್ಷ ಮಂದಿ ಸದಸ್ಯರಿದ್ದಾರೆ.ಬೆಂಗಳೂರಿನಲ್ಲಿ F2Sಗೆ ಸಿಕ್ಕಿರುವ ಸ್ಪಂದನ ಹೇಗಿದೆ?

ಊಹೆಗೂ ಮೀರಿದ ಸ್ಪಂದನ ಬೆಂಗಳೂರಿನಿಂದ ಸಿಕ್ಕಿರುವುದು ಹೆಮ್ಮೆಯ ಸಂಗತಿ. 10 ಸಾವಿರಕ್ಕೂ ಅಧಿಕ ಮಂದಿ ಐಟಿ ವಲಯದ ರಕ್ತದಾನಿಗಳ ಡಾಟಾಬೇಸ್ F2Sನಲ್ಲಿ ನೋಂದಾವಣೆಯಾಗಿದೆ.‘ತುರ್ತು ಅಗತ್ಯಕ್ಕೆ ಆನ್‌ಲೈನ್‌ ಸ್ನೇಹಿತ’ ಎಂಬ ನಿಮ್ಮ ವೆಬ್‌ಸೈಟ್‌ (Friendstosupport.org) ಹೇಗೆ ಕಾರ್ಯನಿರ್ವಹಿಸುತ್ತದೆ?

ರಕ್ತದಾನ ಮತ್ತು ರಕ್ತದಾನಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಿದ್ದೇವೆ. ಲಾಗಿನ್‌ ಆದವರು ಯಾವ ನಗರ, ಯಾವ ಗುಂಪಿನ ರಕ್ತ ಎಂಬುದನ್ನು ಆಯ್ಕೆ ಮಾಡಿದಲ್ಲಿ ಸಮಗ್ರವಾದ ವಿವರ ಡಿಸ್‌ಪ್ಲೇ ಆಗುತ್ತದೆ. ನಿಮಗೆ ಹತ್ತಿರದ ದಾನಿಯನ್ನು ಸಂಪರ್ಕಿಸಿದರೆ ಅವರು ತಕ್ಷಣ ಧಾವಿಸುತ್ತಾರೆ.ವೆಬ್‌ಸೈಟ್‌ ಹೆಸರಿನಲ್ಲೇ ಮೊಬೈಲ್‌ ಅಪ್ಲಿಕೇಶನ್‌ ಕೂಡ ಇದೆ. ದಾನಿಗಳಿಗೆ ಆ ಮೂಲಕವೂ ಸಂದೇಶ ರವಾನೆಯಾಗುತ್ತದೆ. ಒಮ್ಮೆ ರಕ್ತದಾನ ಮಾಡಿದ ವ್ಯಕ್ತಿಯ ಹೆಸರು ಮುಂದಿನ ಮೂರು ತಿಂಗಳವರೆಗೆ ಮರೆಯಾಗುತ್ತದೆ. 91ನೇ ದಿನ ತಂತಾನೇ ಅದು ಡಿಸ್‌ಪ್ಲೇ ಆಗುತ್ತದೆ.ನಿಮ್ಮ ಈ ಸಾಮಾಜಿಕ ಕಳಕಳಿಗೆ ಸಂದಿರುವ ಸಮ್ಮಾನಗಳು ಯಾವುವು?

ಲಾಭ ಹಾಗೂ ಪ್ರತಿಫಲದ ನಿರೀಕ್ಷೆಯಿಲ್ಲದೆ ಕೇವಲ ಸಮಾಜದ ಹಿತದೃಷ್ಟಿಯಿಂದ ಆರಂಭಿಸಿದ ಸಂಸ್ಥೆ ನಮ್ಮದು. ಆದರೆ ನಮ್ಮ ಕೆಲಸವನ್ನು ವಿಶ್ವದೆಲ್ಲೆಡೆ ಗುರುತಿಸಿದ್ದಾರೆ. ವಿಶ್ವದಲ್ಲೇ ರಕ್ತದಾನಿಗಳ ಬೃಹತ್‌ ಜಾಲವೆಂಬುದು ನಮ್ಮ ಹೆಗ್ಗಳಿಕೆ. ಇದೇ ಮಾನದಂಡದಲ್ಲಿ  2009ರಲ್ಲಿ ‘ಯುನೈಟೆಡ್‌ ನೇಷನ್ಸ್ ವರ್ಲ್ಡ್ ಸಮಿಟ್ ಯೂತ್‌ ಅವಾರ್ಡ್’ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದೆವು.2013ರಲ್ಲಿ ಈ ಪ್ರಶಸ್ತಿ ನಮ್ಮ ಪಾಲಾಯಿತು. 2012ರಲ್ಲಿ ‘ಅಸಿಸ್ಟ್‌ ವರ್ಲ್ಡ್ ರೆಕಾರ್ಡ್ಸ್’, ‘ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್’ ಸಂಸ್ಥೆಯವರು ನಮಗೆ ಪ್ರಮಾಣಪತ್ರ ನೀಡಿದ್ದಾರೆ. ಪ್ರಸಕ್ತ ವರ್ಷ ನಮ್ಮ ಸಂಸ್ಥೆ ‘ಲಿಮ್ಕಾ ಬುಕ್ ಆಫ್‌್ ರೆಕಾರ್ಡ್ಸ್’ನಲ್ಲಿಯೂ ದಾಖಲಾಗಿದೆ.ಆಸಕ್ತರಿಗೆ ಏನಾದರೂ ಸಂದೇಶ?

ನಮ್ಮ ನೆಟ್‌ವರ್ಕ್‌ ಮೂಲಕ ರಕ್ತ ನೀಡಲು ಬಯಸುವವರು ಯಾವುದೇ ದರ ಪಾವತಿಸಬೇಕಾಗಿಲ್ಲ. ಆಸಕ್ತ ರಕ್ತದಾನಿಗಳು ನಮ್ಮ ನೆಟ್‌ವರ್ಕ್‌ ಸೇರುವ ಅವಕಾಶವಿದೆ. www.friends2support.org ಮೊಬೈಲ್‌ ಆ್ಯಪ್‌: friends2support.org

ಷರೀಫ್ ಎಸ್.ಕೆ. (ಹೈದರಾಬಾದ್‌) ಸಂಪರ್ಕಕ್ಕೆ: 91 98850 39261.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.