ಮಂಗಳವಾರ, ಮೇ 24, 2022
28 °C

ರಕ್ಷಣಾ ಸಂಶೋಧಕರ ಸಾಧನೆ ಗಡಿ ಆಚೆ ಇಣುಕುವ ಆಕಾಶದೀಪ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಯಲಹಂಕ ವಾಯುನೆಲೆ: ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಯಲಹಂಕ ವಾಯುನೆಲೆಯನ್ನು ಪ್ರವೇಶಿಸಿದ ಕೂಡಲೇ ಎಲ್ಲರ ಕಣ್ಣಿಗೆ ಬೀಳುವುದು ‘ಡಿಆರ್‌ಡಿಒ’ ಎಂಬ ಹೆಸರು ಹೊತ್ತಿರುವ ಬೃಹತ್ ಗಾತ್ರದ ಬಲೂನು. ‘ಏನಿದು? ಇದನ್ನು ಯಾಕೆ ಇಲ್ಲಿ ಹಾರಿಸಿದ್ದಾರೆ? ಇದು ಕೇವಲ ಜನಾಕರ್ಷಣೆಗಾಗಿ ಹಾರಿಸಿದ್ದಾ?...’ ಎಂಬ ಪ್ರಶ್ನೆಗಳು ಜನರ ಬಾಯಿಂದ ಬರುತ್ತವೆ.

ಡಿಆರ್‌ಡಿಒ ತಯಾರಿಸಿದ್ದು: ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಲ್ಲಿ ಹಾರಿಸಲಾಗುವ ಸಾಮಾನ್ಯ ಬಲೂನು ಇದಲ್ಲ. ಇದು ದೇಶದ ಮುಂಚೂಣಿ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ   ‘ಡಿಆರ್‌ಡಿಒ’ದ ಕೂಸು, ಸಂಪೂರ್ಣ ಸ್ವದೇಶಿ ನಿರ್ಮಿತ. ಈ ಬಲೂನಿಗೆ ಡಿಆರ್‌ಡಿಒ ಇಟ್ಟಿರುವ ಹೆಸರು ‘ಆಕಾಶದೀಪ’, ನೋಡಲೂ ದೀಪಾವಳಿಯ ಆಕಾಶದೀಪದಂತೆಯೇ ಇದೆ ಇದು.

ಉಪಯೋಗ?: ಶತ್ರುದೇಶಗಳ ಮಿಲಿಟರಿ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಾಕಷ್ಟು ಉಪಕರಣಗಳನ್ನು ಅನೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಈ ಬಲೂನನ್ನು ಕೂಡ ಶತ್ರುದೇಶಗಳ ಮಿಲಿಟರಿ ಚಟುವಟಿಕೆಗಳ ಬಗ್ಗೆ ಮತ್ತು ಇನ್ನಿತರ ಯಾವುದೇ ಚಲನವಲನಗಳ ಬಗ್ಗೆ ಕಣ್ಗಾವಲಿಡಲು ಅಭಿವೃದ್ಧಿಪಡಿಸಲಾಗಿದೆ.  35 ಮೀಟರ್ ಉದ್ದ, 23 ಮೀಟರ್ ಎತ್ತರ ಮತ್ತು 11 ಮೀಟರ್ ಪರಿಧಿಯ ಈ ಬಲೂನು ತನ್ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದ ಸಹಾಯದಿಂದ 35 ಕಿ.ಮಿ.ನಷ್ಟು ದೂರದಲ್ಲಿ ನಡೆಯುತ್ತಿರುವ ಯಾವುದೇ ಚಟುವಟಿಕೆಗಳನ್ನೂ ಗುರುತಿಸಬಲ್ಲದು.

‘ಇನ್ನೂ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಿದಲ್ಲಿ 60 ಕಿ.ಮಿ.ನಷ್ಟು ದೂರದ ದೃಶ್ಯಗಳನ್ನೂ ಪಡೆದುಕೊಳ್ಳಬಹುದು. ನಮ್ಮ ದೇಶದ ಗಡಿಯಿಂದ 20 ಕಿ.ಮಿ. ಹಿಂದೆಯೇ ಈ ಆಕಾಶ ದೀಪವನ್ನು ಸ್ಥಾಪಿಸಿದಲ್ಲಿ, ಶತ್ರುದೇಶದ ಗಡಿಯೊಳಗೆ ಸುಮಾರು 40 ಕಿ.ಮಿ.ವರೆಗೂ ಇಣುಕಿ ನೋಡಬಹುದು’ ಎನ್ನುತ್ತವೆ ಡಿಆರ್‌ಡಿಒ ಮೂಲಗಳು.

ಇದು ‘ಮೊಬೈಲ್’: ಈ ಆಕಾಶದೀಪ ಅಕ್ಷರಶಃ  ‘ಮೊಬೈಲ್’. ಅಂದರೆ ಬೇಕಾದಾಗ, ಬೇಕೆಂದಲ್ಲಿಗೆ ಇದನ್ನು ಕೊಂಡೊಯ್ದು ಸ್ಥಾಪಿಸಬಹುದು. ಇದು 300 ಕೆ.ಜಿ.ವರೆಗೆ ಭಾರ ಹೊರಬಲ್ಲದು.  ಹೀಲಿಯಂ ಅನಿಲ ತುಂಬಿಸಿ ಈ ಬಲೂನನ್ನು ಹಾರಿ ಬಿಡಲಾಗುತ್ತದೆ. ಭೂಮಿಯ ಮೇಲಿನ ನಿಯಂತ್ರಣ ಕೇಂದ್ರಕ್ಕೆ ಇದನ್ನು ಬಿಗಿದು ಕಟ್ಟಿರುವ ಕಾರಣ ಇದು ‘ಗಾಳಿ ಬಂದಲ್ಲಿ ತೂರಿಕೊಳ್ಳುವುದಿಲ್ಲ!’ ಆಕಾಶದೀಪದಲ್ಲಿ ಒಟ್ಟು 2,000 ಘನ ಮೀಟರ್‌ಗಳಷ್ಟು ಹೀಲಿಯಂ ಅನಿಲ ಇರುತ್ತದೆ. ನಾನಾ ಕಾರಣಗಳಿಂದ ದಿನವೊಂದಕ್ಕೆ 10-15 ಘನ ಮೀಟರ್‌ಗಳಷ್ಟು ಅನಿಲ ಹೊರಹೋದರೂ ಒಂದು ವಾರ ಕಾಲ ಈ ಬಲೂನು ತೇಲಾಡುತ್ತಿರುತ್ತದೆ. ವಾರಕ್ಕೊಮ್ಮೆ ಹೀಲಿಯಂ ಅನಿಲವನ್ನು ತುಂಬಿಸಿದರಾಯಿತು.

ನೈಲಾನ್ ಲೇಪಿತ ಬಟ್ಟೆಯಿಂದ ಮಾಡಲಾಗಿರುವ ಈ ಬಲೂನ್‌ನಲ್ಲಿ ಇನ್ನೊಂದು ವಿಶೇಷ ಇದೆ. ಒಂದು ವೇಳೆ ಶತ್ರು ದೇಶದವರು ತಮ್ಮ ಚಟುವಟಿಕೆಗಳು ತಿಳಿಯದಿರಲಿ ಎಂದು ಈ ಬಲೂನ್‌ಗೆ ಗುಂಡು ಹಾರಿಸಿ ಇದರ ವ್ಯವಸ್ಥೆಯನ್ನೇ ಹಾಳು ಮಾಡುವ ಯೋಚನೆ ಮಾಡಿದರೆ? ಹಾಗೆ ಮಾಡಿದರೂ ಇದಕ್ಕೆ ಏನೂ ಆಗುವುದಿಲ್ಲ.  ಹೀಲಿಯಂ ಅನಿಲದ ಉಷ್ಣತೆಯ ಕಾರಣ ಗುಂಡುಗಳಿಂದ ಆದ ರಂಧ್ರವು ತಾನಾಗಿಯೇ ಮುಚ್ಚಿಹೋಗುತ್ತದೆ! ಒಂದು ವೇಳೆ ರಂಧ್ರ ತೀರಾ ದೊಡ್ಡಾಗಿ, ಬಲೂನಿನಲ್ಲಿದ್ದ ಅನಿಲ ಖಾಲಿಯಾದರೆ, ಆ ರಂಧ್ರವನ್ನು ಮುಚ್ಚುವುದು ನಿಮಿಷಗಳ ಕೆಲಸ ಎನ್ನುತ್ತಾರೆ ಡಿಆರ್‌ಡಿಒ ಅಧಿಕಾರಿಗಳು. ಇಷ್ಟು ದೊಡ್ಡ ಬಲೂನಿನಲ್ಲಿ ಎಲ್ಲಿ ರಂಧ್ರ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚಲೂ ಸಾಧನ ಅಭಿವೃದ್ಧಿಯಾಗಿದೆ.

‘ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆ ಈ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಈಗ ಭಾರತೀಯರೂ ಈ ತಂತ್ರಜ್ಞಾನದಲ್ಲಿ ಪಳಗಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಗಬಹುದು’ ಎಂದು ಡಿಆರ್‌ಡಿಒ ಅಧಿಕಾರಿಗಳು ಹೆಮ್ಮೆಯಿಂದ ಹೇಳುತ್ತಾರೆ. ಯುದ್ಧಭೂಮಿಯಲ್ಲಿ ಕಣ್ಗಾವಲಿಗೆ ಬಳಸಲಾಗುವ ರಾಡಾರ್ ಅನ್ನೂ ಇದೇ ಬಲೂನಿಗೆ ಜೋಡಿಸಬಹುದು ಎಂದು ಅವರು ಹೇಳುತ್ತಾರೆ.

ಆಕಾಶದೀಪವನ್ನು 2010ರ ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ ಅದೇ ವರ್ಷ ಡಿಸೆಂಬರ್‌ನಲ್ಲಿ ಎರಡನೆಯ ಬಾರಿ ಪರೀಕ್ಷೆ   ನಡೆಸಲಾಗಿದೆ. ರಷ್ಯಾ ಸೇರಿದಂತೆ ವಿವಿಧ ದೇಶಗಳು ಆಕಾಶದೀಪದ ಬಗ್ಗೆ ಆಸಕ್ತಿ ತಾಳಿವೆ. ಭಾರತೀಯ ವಾಯುಪಡೆ ಮತ್ತು ಭೂಸೇನೆಯಿಂದ ಬೇಡಿಕೆ ಬಂದಲ್ಲಿ ಅವರಿಗೆ ಆಕಾಶದೀಪವನ್ನು ಪೂರೈಸಲಾಗುವುದು ಎಂದು ಅಧಿಕಾರಿಗಳು   ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.