ಶುಕ್ರವಾರ, ಏಪ್ರಿಲ್ 16, 2021
31 °C

ರಘು ಧ್ಯಾನಕ್ಕೆ ಸಿಕ್ಕ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆ ಸೃಜನಶೀಲತೆ ಮತ್ತು ಹೊಸತನ ಇವೆಲ್ಲದರ ಸಂಗಮ ಫೋಟೊಗ್ರಫಿ. ಇದು ಸುಖಾಸುಮ್ಮನೆ ಕೈಗೆಟುಕುವ ಕಲೆಯಲ್ಲ. ಛಾಯಾಗ್ರಹಣ ಕಲೆ ಸಿದ್ಧಿಸಬೇಕೆಂದರೆ ಛಾಯಾಚಿತ್ರಕಾರ ಧ್ಯಾನಸ್ಥನಾಗಿರಬೇಕು. ಹಾಗಿದ್ದಾಗ ಮಾತ್ರ ಅವನು ಕ್ಲಿಕ್ಕಿಸುವ ಪ್ರತಿ ಫೋಟೊ ಕೂಡ ಒಂದು ದೃಶ್ಯಕಾವ್ಯ ಎನಿಸುತ್ತದೆ.ಲಕ್ಸರ್ ಲೂಯಿಸ್ ಫಿಲಿಪ್ ಪೋಟೊಗ್ರಫಿ ಗ್ಯಾಲರಿ ತಸ್ವೀರ್ ಜತೆಗೂಡಿ ಐದು ನಗರಗಳ (ಫೈವ್ ಸಿಟಿ) ಪ್ರದರ್ಶನ ಪ್ರವಾಸದ ಅಂಗವಾಗಿ ಅಂತರರಾಷ್ಟ್ರೀಯ ಶ್ರೇಷ್ಠ ಛಾಯಾಚಿತ್ರಕಾರರ ಅಪೂರ್ವ ಚಿತ್ರಗಳ ಪ್ರದರ್ಶನ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ.ಬೆಂಗಳೂರು, ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಮುಂದಿನ ವರ್ಷ ಜೂನ್‌ವರೆಗೆ ನಡೆಯುವ ಈ ಛಾಯಾಚಿತ್ರ ಪ್ರದರ್ಶನಕ್ಕೆ ತಾಜ್ ವೆಸ್ಟ್‌ಎಂಡ್‌ನಲ್ಲಿ ಚಾಲನೆ ನೀಡಲಾಯಿತು.`ಫೈವ್ ಸಿಟಿ~ ಪ್ರದರ್ಶನದ ಏಳನೇ ಆವೃತ್ತಿ ಇದಾಗಿದ್ದು, ಜಾಗತಿಕ ಮನ್ನಣೆ ಗಳಿಸಿರುವ ದೇಶದ ಶ್ರೇಷ್ಠ ಛಾಯಾಚಿತ್ರಕಾರ ರಘು ರೈ, ಬ್ರಿಟಿಷ್ ಛಾಯಾಚಿತ್ರಗ್ರಾಹಕ ಡೆರ‌್ರಿ ಮೋರ್ ಮತ್ತು ಇಟಲಿಯ ಶಿಲ್ಪಿ ಮತ್ತು ಫೋಟೊಗ್ರಾಫರ್ ಪಟ್ರಿಜಿಯಾ ಮೈಮೌನಾ ಗ್ಯುರ‌್ರೆಸಿ ಅವರ ಅಸಲಿ ಪ್ರಿಂಟ್‌ಗಳನ್ನು ಸಾರ್ವಜನಿಕರು ಇಲ್ಲಿ ಕಣ್ತುಂಬಿಕೊಳ್ಳಬಹುದು.ಇದೇ ವೇಳೆ `ಮ್ಯಾಗ್ನಮ್ ಕೆ ತಸ್ವೀರೆ~ ಹೆಸರಿನ ಕ್ಯುರೇಟ್ ಪ್ರದರ್ಶನ ಕೂಡ ನಡೆಯಲಿದೆ. ತಸ್ವೀರ್ ಮತ್ತು ವಿಶ್ವದ ಅತ್ಯುತ್ತಮ ಛಾಯಾಚಿತ್ರಕಾರರ ಸಹಕಾರ ಸಂಘದ ಮ್ಯಾಗ್ನಮ್ ಫೋಟೋಸ್ ಸಹಭಾಗಿತ್ವದಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಇದರ ಹೊರತಾಗಿ ಸಮಕಾಲೀನ ಏಷ್ಯನ್ ಫೋಟೊಗ್ರಫಿಯನ್ನು ಪ್ರದರ್ಶಿಸುವ ಉದ್ದೇಶದಿಂದ `ಹಿಕರಿ~ ಎಂಬ ಸಮೂಹ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಇದನ್ನು ಜಪಾನ್‌ನ ಐದು ಮಂದಿ ಪ್ರಖ್ಯಾತ ಛಾಯಾಚಿತ್ರಕಾರರು ನಡೆಸಿಕೊಡಲಿದ್ದಾರೆ.ದಿ ಗ್ರೇಟ್ ಇಂಡಿಯನ್ ಮಾಸ್ಟರ್ ಆಫ್ ಫೋಟೊಗ್ರಫಿ ಎನಿಸಿಕೊಂಡಿರುವ ರಘು ರೈ ಅವರ ಛಾಯಾಚಿತ್ರಗಳ ಪ್ರದರ್ಶನ ಇಲ್ಲಿನ ಪ್ರಧಾನ ಆಕರ್ಷಣೆ. `ಡಿವೈನ್ ಮೂಮೆಂಟ್ಸ್~ ಹೆಸರಿನಡಿಯಲ್ಲಿ ಇವು ಪ್ರದರ್ಶನಗೊಳ್ಳಲಿವೆ.ಉತ್ತರದಲ್ಲಿ ಬೀಸುವ ಚಳಿ ಎದೆ ಸೀಳಿ ಒಳನುಗ್ಗುತ್ತದೆ. ಹಸಿರು ಹೊದ್ದು ನಿಂತಿರುವ ಗಿರಿಶ್ರೇಣಿಗಳನ್ನು ಬಾಗಿ ಚುಂಬಿಸುವಂತೆ ಬೆಸೆದುಕೊಂಡಿರುವ ಆಕಾಶ. ಬಾನು ಮತ್ತು ಪ್ರಕೃತಿ ಮುತ್ತಿಕ್ಕುವುದನ್ನು ಯಾರೂ ಕದ್ದು ನೋಡಬಾರದು ಎಂಬಂತೆ ಮುಸುಕು ಮುಚ್ಚಿರುವ ಮಂಜು. ಈ ಆಹ್ಲಾದಕರ ಸನ್ನಿವೇಶದಲ್ಲಿ ಕಾಶ್ಮೀರಿ ಶಾಲು ಹೊದ್ದುಕೊಂಡು ರಸ್ತೆ ಬದಿಯಲ್ಲಿ ಇಣುಕಿದರೆ ಕಾಣುವ ಕಂದಕಕ್ಕೆ ಅಡ್ಡವಾಗಿ ನಿರ್ಮಿಸಿರುವ ತಡೆಗೋಡೆ ಮೇಲೆ ಬೆಳಗಿನ ವಾಕಿಂಗ್ ಮಾಡುತ್ತಿರುವ ವ್ಯಕ್ತಿಯ ಚಿತ್ರವನ್ನು ರಘು ತಮ್ಮ ಕ್ಯಾಮೆರಾ ಫ್ರೇಮ್‌ನೊಳಗೆ ಸೆರೆಹಿಡಿದಿರುವ ಪರಿ ಬೆರಗು ಹುಟ್ಟಿಸುತ್ತದೆ. ಈ ಚಿತ್ರ ಇವರ ಬೆಸ್ಟ್ ಛಾಯಾಚಿತ್ರಗಳಲ್ಲಿ ಒಂದು. ಹಾಗೆಯೇ ರಘು ರೈ ಅವರು 1968ರಲ್ಲಿ ದೆಹಲಿಯಲ್ಲಿ ಕ್ಲಿಕ್ಕಿಸಿದ `ಅಮಾಂಗ್ ದಿ ಸ್ಪ್ಯಾರೋಸ್~, `ದಿ ಫ್ಲೂಟ್ ಪ್ಲೇಯರ್~ ಹಾಗೂ 1970ರಲ್ಲಿ ಹಳೆ ದೆಹಲಿಯಲ್ಲಿ ಸೆರೆಹಿಡಿದ `ಟು ಓಲ್ಡ್ ಮ್ಯಾನ್~ ಛಾಯಾಚಿತ್ರಗಳು ಮನಸೆಳೆಯುತ್ತವೆ.ರಘು ರೈ ಅವರ ಚಿತ್ರಗಳು ಡಿವೈನ್ ಮೂಮೆಂಟ್ಸ್ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಇಲ್ಲಿ ಅವರ ಅನೇಕ ಕಪ್ಪು-ಬಿಳುಪು ಚಿತ್ರಗಳು ಕೂಡ ಪ್ರದರ್ಶನಗೊಳ್ಳಲಿವೆ. ಫೋಟೊ ತೆಗೆಯುವಲ್ಲಿನ ಅವರ ತಾದಾತ್ಮ್ಯ, ಅದಕ್ಕೆ ಅವರು ಒದಗಿಸಿರುವ ಚೌಕಟ್ಟು ಬೆರಗು ಮೂಡಿಸುತ್ತದೆ.ರಘು ರೈ ದೇಶದ ಸೆಲೆಬ್ರಿಟಿ ಫೋಟೊಗ್ರಾಫರ್. ಅವರು ತಮ್ಮ 50 ವರ್ಷಗಳನ್ನು ಫೋಟೋಗ್ರಫಿಯಲ್ಲೇ ಸವೆಸಿದ್ದಾರೆ. `ಇಲಸ್ಟ್ರಿಯಸ್ ಮ್ಯಾಗ್ನಮ್ ಫೋಟೊ ಏಜೆನ್ಸಿ~ ಸದಸ್ಯತ್ವ ಪಡೆದಿರುವ ದೇಶದ ಏಕೈಕ ಕಲಾವಿದ ಅವರು. ಅವರ ಬಹುತೇಕ ಎಲ್ಲ ಚಿತ್ರಗಳು ಗಂಭೀರ ಛಾಯಾಚಿತ್ರಕಾರರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೂವತ್ತು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ಅವರ ಪ್ರತಿಭೆಗೆ 1971ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.