ಶುಕ್ರವಾರ, ಆಗಸ್ಟ್ 7, 2020
25 °C

ರಟ್ಟೀಹಳ್ಳಿ ಕದಂಬೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ ಕದಂಬೇಶ್ವರ

ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕು ರಟ್ಟೀಹಳ್ಳಿಯಲ್ಲಿ ವೇದ, ಪುರಾಣ, ಇತಿಹಾಸಗಳನ್ನು ನೆನಪಿಸುವ ಹತ್ತು ಹಲವು ದೇವಾಲಯಗಳು, ಸ್ಮಾರಕಗಳು ಇವೆ. ಇವುಗಳ ಪೈಕಿ ಪುರಾತನ ಶ್ರೀ ಕದಂಬೇಶ್ವರ ದೇವಸ್ಥಾನ ಮುಕುಟಪ್ರಾಯವಾಗಿದೆ.ಬನವಾಸಿ ಕದಂಬರ ಹಾಗೂ ರಾಷ್ಟ್ರಕೂಟರ ಆಡಳಿತದಲ್ಲಿ ರಟ್ಟೀಹಳ್ಳಿ ಗ್ರಾಮಕ್ಕೆ ತುಂಬ ಮಹತ್ವ ಇತ್ತು. ಅದನ್ನು ಸಮರ್ಥಿಸುವ ಅನೇಕ ಶಿಲಾಶಾಸನಗಳು ಇಲ್ಲಿವೆ. ರಾಷ್ಟ್ರಕೂಟರಿಂದಲೇ ಈ ಗ್ರಾಮವು `ರಾಷ್ಟ್ರಪಲ್ಲಿ, ರಟ್ಟೀಪಲ್ಲಿ~ ಎಂಬ ಹೆಸರುಗಳನ್ನು ಪಡೆದುಕೊಂಡು ಕೆಲಕಾಲದ ನಂತರ `ರಟ್ಟೀಹಳ್ಳಿ~ಎಂದು ಪ್ರಸಿದ್ಧವಾಯಿತು.ಫಜಲುಲ್ಲಾ ಎಂಬ ಸೇನಾಧಿಪತಿಯ ಮೂಲಕ ಮೈಸೂರಿನ ಹೈದರಾಲಿಯು ಈ ಗ್ರಾಮದ ಮೇಲೆ ಆಕ್ರಮಣ ಮಾಡುತ್ತಾನೆ. ಅನಂತರ  ಪೇಶ್ವೆ ಮಾಧವರಾಯನು ತನ್ನ ಬಲಿಷ್ಠ ಸೈನ್ಯದೊಂದಿಗೆ ದಾಳಿ ಮಾಡಿ ರಟ್ಟೀಹಳ್ಳಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಇದು `ರಟ್ಟೀಹಳ್ಳಿ ಆನವಟ್ಟಿ~ ಯುದ್ಧವೆಂದೇ ಹೆಸರಾಗಿದೆ.ಇಷ್ಟೆಲ್ಲ ಇತಿಹಾಸ ಇರುವ ಈ ಊರಲ್ಲಿನ ಕದಂಬೇಶ್ವರ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ಕದಂಬರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿ ಕಂಡಿತ್ತು. ಶ್ರೀ ಕದಂಬೇಶ್ವರ ಮಹಾದೇವ ಇಲ್ಲಿನ ಪ್ರಧಾನ ದೇವತೆ. ಇವನ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಪಾರ್ವತಿದೇವಿ, ಶ್ರೀ ಮಹಾನಂದಿ ಮತ್ತು ನಾಲ್ಕು ಶಿವಲಿಂಗಗಳಿವೆ. ಹೀಗಾಗಿ ಇವನನ್ನು ಪಂಚಲಿಂಗೇಶ್ವರ ಎಂದೇ ಕರೆಯುತ್ತಾರೆ.ದೇವಸ್ಥಾನದ ಪ್ರತಿಯೊಂದು ಕಲ್ಲು, ವಿಗ್ರಹ, ನಾಲ್ಕಾರು ಶಿಲಾಶಾಸನಗಳು, ವೀರಗಲ್ಲುಗಳು ಹೊಯ್ಸಳ- ಕದಂಬ- ರಾಷ್ಟ್ರಕೂಟರ ಧಾರ್ಮಿಕ ಶ್ರದ್ಧೆ, ಶಿಲಾ ಕೌಶಲ, ಕಲಾ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿವೆ. ಭಕ್ತಾದಿಗಳು ಮಾತ್ರವಲ್ಲದೆ ವಿವಿಧ ಚಿತ್ರಕಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಇಲ್ಲಿ ಕಲೆಯ ಅಧ್ಯಯನಕ್ಕೆ ಬರುತ್ತಿರುತ್ತಾರೆ.ದೇವಸ್ಥಾನದಲ್ಲಿ ನಿತ್ಯ ಪೂಜೆ ಇದೆ. ವಿಶೇಷ ದಿನಗಳು, ಹಬ್ಬಗಳು ಹಾಗೂ ಸೋಮವಾರ, ಗುರುವಾರ ಶಾರದಾ ಭಜನೆ ಮಂಡಳಿಯವರಿಂದ ಶ್ರೀ ಕದಂಬೇಶ್ವರ ಸ್ವಾಮಿಗೆ ಆರತಿ ಭಜನೆ ನಡೆಯುತ್ತದೆ. ಶಿವರಾತ್ರಿ ಮಾತ್ರವಲ್ಲದೆ ಶ್ರೀ ಶಂಕರ ಜಯಂತಿ, ರಾಮನವಮಿ, ದತ್ತ ಜಯಂತಿ ಉತ್ಸವಗಳು ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತವೆ.ದೇವಸ್ಥಾನದ ಸೇವೆಗಳಿಗೆ ಯಾವುದೇ ನಿರ್ದಿಷ್ಟ ಶುಲ್ಕ ನಿಗದಿಪಡಿಸಿಲ್ಲ. ಭಕ್ತರು ತಮ್ಮ ಅಪೇಕ್ಷೆಗೆ ಅನುಸಾರ ಸೇವೆ ಮಾಡಿಸಬಹುದು. ಮಾಹಿತಿಗೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರದೀಪ ಕುಲಕರ್ಣಿ ಅವರನ್ನು 99001 21098 ಸಂಪರ್ಕಿಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.