ಮಂಗಳವಾರ, ಮೇ 24, 2022
24 °C

ರಥಯಾತ್ರೆಗೆ ಆರಂಭದಲ್ಲೇ ವಿಘ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಂದೋಲಿ (ಉತ್ತರ ಪ್ರದೇಶ)/ ಪಟ್ನಾ (ಪಿಟಿಐ): ಮುಗಲ್‌ಸರಾಯ್ ರೈಲ್ವೆ ಮೈದಾನದಲ್ಲಿ ಜಾಥಾ ನಡೆಸಲು  ಅಡ್ವಾಣಿ ಅವರಿಗೆ ಜಿಲ್ಲಾಡಳಿತ ಮತ್ತು ರೈಲ್ವೆ ಮಂಡಳಿ ಕೊನೆಗೂ ಬುಧವಾರ ಸಂಜೆ ಅನುಮತಿ ನೀಡಿವೆ. ಆರಂಭದಲ್ಲಿ ಅನುಮತಿ ನಿರಾಕರಿಸಿದ್ದರಿಂದ ವಿವಾದ ಆರಂಭವಾಗಿತ್ತು. ಜಿಲ್ಲಾ ಬಿಜೆಪಿ ಘಟಕವು ರೈಲ್ವೆ ಮೈದಾನದಲ್ಲೇ ಜಾಥಾ ನಡೆಸಲು ಪಟ್ಟು ಹಿಡಿದಿತ್ತು. ಆದರೆ ಇದೀಗ ರಥಯಾತ್ರೆಗೆ ಎದುರಾಗಿದ್ದ ಅನುಮತಿ ವಿವಾದಕ್ಕೆ ತೆರೆ ಬಿದ್ದಿದೆ.

ಇನ್ನೊಂದೆಡೆ ರಥದಲ್ಲಿ ಕಾಣಿಸಿದ ತಾಂತ್ರಿಕ ದೋಷದಿಂದಾಗಿ ಆರಂಭದಲ್ಲಿಯೇ ಯಾತ್ರೆಗೆ ವಿಘ್ನಗಳು ಎದುರಾದವು. ಯಾತ್ರೆಗಾಗಿಯೇ ವಿಶೇಷವಾಗಿ ರಥದ ಮಾದರಿಯಲ್ಲಿ ಸಿದ್ಧಪಡಿಸಲಾದ ಬಸ್ ಮಂಗಳವಾರ ಛಾಪ್ರಾದಿಂದ ಇಲ್ಲಿಗೆ ಆಗಮಿಸುವಾಗ ತೊಂದರೆ ಕಾಣಿಸಿಕೊಂಡಿತು. ಹೊಗೆ ಹೊರ ಹಾಕುವ ಕೊಳವೆ ಕೆಟ್ಟುಹೋದ ಕಾರಣ ಜನರೇಟರ್ ಭಾರಿ ಪ್ರಮಾಣದ ಇಂಗಾಲದ ಮೋನಾಕ್ಸೈಡ್ ಉಗುಳಲು ಆರಂಭಿಸಿತು. ಜೇಟ್ಲಿ, ಸುಷ್ಮಾ  ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಹೀಗಾಗಿ ಮಾರ್ಗ ಮಧ್ಯದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.

ನಂತರ ಪಟ್ನಾದಲ್ಲಿ ಅನಿಲ ಕೊಳವೆ ದುರಸ್ತಿ ಮಾಡಿಸಿ ಯಾತ್ರೆ ಮುಂದುವರಿಸಲಾಯಿತು. ಬಳಿಕ ಕರ್ನಾಟಕದಿಂದ ಮತ್ತೊಂದು `ರಥ~ (ವಾಹನ) ತರಿಸಿಕೊಳ್ಳಲಾಯಿತು. ಆದರೆ, ಅಡ್ವಾಣಿ ಮಾತ್ರ ಮೊದಲಿನ ರಥದಲ್ಲಿಯೇ ಯಾತ್ರೆ ಮುಂದುವರಿಸಿದರು. ಕೊಯ್ಲಾಬಾರ್ ಬಳಿಯ ರೈಲ್ವೆ ಕೆಳ ಸೇತುವೆ ಬಳಿ ರಥ ಮತ್ತೆ ನಿಂತಿತು. 13 ಅಡಿ ಎತ್ತರದ ಸೇತುವೆಯ ಕೆಳಗಿಂದ 13.9 ಅಡಿ ಎತ್ತರದ ರಥವನ್ನು ನುಗ್ಗಿಸಲು ಚಾಲಕ 10 ನಿಮಿಷ ಸಾಹಸ ಮಾಡಬೇಕಾಯಿತು.

ಇನ್ನೊಂದೆಡೆ, ಭೋಜ್‌ಪುರ್ ಜಿಲ್ಲೆಯ ಕೊಯ್ಲಿವಾರ್ ಪಟ್ಟಣದ ಬಳಿ ಸೋನೆ ನದಿಗೆ ನಿರ್ಮಿಸಲಾದ ಸೇತುವೆಯಿಂದ ನೇತಾಡುತ್ತಿದ್ದ ಕಬ್ಬಿಣದ ಸರಳುಗಳಿಗೆ ಹವಾನಿಯಂತ್ರಿತ ರಥದ ಮೇಲು ಭಾಗ ತಾಗಿ ಜಖಂಗೊಂಡಿತು.

80 ಕಿ.ಮೀ ದೂರ ಸಂಚರಿಸಿರುವ ಯಾತ್ರೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್,  ಎಲ್‌ಜೆಪಿ ಮುಖ್ಯಸ್ಥ ರಾಂವಿಲಾಸ್ ಪಾಸ್ವಾನ್ ಕ್ಷೇತ್ರಗಳಲ್ಲಿ ಹಾಯ್ದು ಹೋಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.