ಮಂಗಳವಾರ, ಮೇ 11, 2021
25 °C

ರಥೋತ್ಸವಕ್ಕೆ ಹರಿದುಬಂದ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಭಾನುವಾರ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು.

ವಿವಿಧ ಹಿಂದೂಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮ ಸೇನೆ ವತಿಯಿಂದ ಆಚರಣೆ ನಡೆಯಿತು.ವಿನೋಬನಗರದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ರಾಮ ಪೂಜೆ ನಡೆಸಿದರು. ಬಳಿಕ ಭಕ್ತಿಗೀತೆಗಳನ್ನು ಮೊಳಗಿಸಲಾಯಿತು.ಪಿಜೆ ಬಡಾವಣೆಯ ಶ್ರೀರಾಮ ದೇವಸ್ಥಾನದಲ್ಲಿಯೂ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.ನಗರದ ಜಯದೇವ ವೃತ್ತ, ಹಳೇಪೇಟೆ ಪರಿಸರದಲ್ಲಿ ರಾಮನವಮಿ ಅಂಗವಾಗಿ  ಸಾರ್ವಜನಿಕರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಮನೆಗಳಲ್ಲಿಯೂ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.ಮಲೇಬೆನ್ನೂರು ವರದಿ

ಹೋಬಳಿ ವ್ಯಾಪ್ತಿಯ ಹಲವೆಡೆ ರಾಮನವಮಿ ಅಂಗವಾಗಿ ಆಂಜನೇಯ ಉಚ್ಛಾಯ, ಬ್ರಹ್ಮ ರಥೋತ್ಸವ ಹಾಗೂ ಸೀತಾರಾಮ ಕಲ್ಯಾಣೋತ್ಸವ ಭಾನುವಾರ ಹಮ್ಮಿಕೊಂಡಿದ್ದರು. ಕಡಾರನಾಯಕನ ಹಳ್ಳಿ, ಹೊಳೆಸಿರಿಗೆರೆ, ಹಿರೆ ಹಾಲಿವಾಣ ಗ್ರಾಮದಲ್ಲಿ ಆಂಜನೇಯ ದೇವರ ಉಚ್ಛಾಯ ರಾಜಬೀದಿಗಳಲ್ಲಿ ಸಾಂಪ್ರದಾಯಿಕ ರೀತಿ  ಜರುಗಿತು.ಬಲಿದಾನ, ರಥಶಾಂತಿ ನಂತರ ಉತ್ಸವ ಮೂರ್ತಿ ರಥಾರೋಹಣವಾಯಿತು. ಉಚ್ಛಾಯ ರಥವನ್ನು ಧ್ವಜ ಪತಾಕೆಗಳಿಂದ ಸುಂದರವಾಗಿ ಹೂ -ಹಾರಗಳಿಂದಲೂ, ದೇವಾಲಯವನ್ನು ವಿದ್ಯುತ್ ದೀಪದಿಂದ ಅಲಂಕರಿಸಿದ್ದರು.ನಂದಿಕೋಲು, ಪುರವಂತರ ವೀರಭದ್ರ ಗುಗ್ಗುಳ, ಮಹಿಳೆಯರ ಡೊಳ್ಳು ಕುಣಿತ. ನಾಸಿಕ್‌ಡೋಲು, ಜಾಗಟೆ, ತಮಟೆ ಮೇಳ, ಕೊಂಬು ಕಹಳೆ. ಭೂತದ ಹಲಗೆ ಹೊತ್ತವರು ಹಾಗೂ ಮಂಗಳ ವಾದ್ಯ ಹೆಚ್ಚಿನ ಮೆರಗು ತಂದಿದ್ದವು.ಆಂಜನೇಯ ರಥೋತ್ಸವ:
ಸಮೀಪದ ಕೊಕ್ಕನೂರಿನಲ್ಲಿ ಆಂಜನೇಯ ದೇವರ ಬ್ರಹ್ಮ ರಥೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಳಸಪೂಜೆ, ಅಶ್ವ ಹಾಗೂ ಗಜೋತ್ಸವ, ಪುಣ್ಯಾಹವಾಚನ ನಂತರ ಉತ್ಸವ ಮೂರ್ತಿ ರಥಾರೋಹಣವಾಯಿತು. ವಿಪ್ರ ಸಮುದಾಯದ ವೇದ ಘೋಷದ ನಡುವೆ  ನಾಲ್ಕು ಗಾಲಿಗಳಿಗೆ ಬಲಿಹಾಕಿ, ದೀಪಾರಾಧನೆ ತೆಂಗಿನಕಾಯಿ ಸಮರ್ಪಣೆ ಮಾಡಿದರು. ಜನತೆ ಬಾಳೆಹಣ್ಣು ಅರ್ಪಿಸಿ ರಥ ಎಳೆದರು.ಜಿ.ಪಂ.ಅಧ್ಯಕ್ಷ ಹನಗವಾಡಿ ವೀರೇಶ್, ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಕೊಕ್ಕನೂರು ದ್ಯಾಮಪ್ಪ ಪಾಲ್ಗೊಂಡಿದ್ದರು. ವಿವಿಧ ರಾಮ ದೇವಾಲಯಗಳಿಗೆ ಶಾಸಕ ಬಿ.ಪಿ. ಹರೀಶ್ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು.ಸಾಮೂಹಿಕ ವಿವಾಹ: ದೇವಾಲಯ ಸಮಿತಿ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 46 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಾಲಯದವರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಜನತೆ ಉರುಳು ಸೇವೆ, ಹರಕೆ, ಜವಳ ಸಮರ್ಪಿಸಿದರು.ಕಲ್ಯಾಣೋತ್ಸವ: ಹೋಬಳಿ ವ್ಯಾಪ್ತಿಯ ಆಂಧ್ರಪ್ರದೇಶದ ಜನತೆ ವಾಸಿಸುವ ವಿನಾಯಕ ನಗರ, ಕುಂಬಳೂರು, ಜಿಗಳಿ, ಶ್ರೀನಿವಾಸನಗರ, ಮಲ್ಲನಾಯ್ಕನಹಳ್ಳಿ, ನಂದೀಶ್ವರ, ಗೋಲಿ ರಾಮರಾವ್, ಭಾಸ್ಕರ್‌ರಾವ್ (ನಂದಿತಾವರೆ) ಕ್ಯಾಂಪ್‌ಗಳ ಸೀತಾರಾಮ ದೇವಾಲಯಗಳಲ್ಲಿ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು. ಸೀತಾರಾಮ ಕಲ್ಯಾಣ, ತೊಟ್ಟಿಲೋತ್ಸವ ಹಾಗೂ ಆಂಜನೇಯ ಸಹಿತ ಸೀತಾ,ರಾಮ, ಲಕ್ಷ್ಮಣರ ವಿಗ್ರಹದ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆ ಜನತೆ ಪಾಲ್ಗೊಂಡಿದ್ದರು. ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಿದರು.ಬಸವಾಪಟ್ಟಣ ವರದಿ

ಇಲ್ಲಿನ ಶ್ರೀರಾಮ ಸೇವಾ ಸಮಿತಿ ವತಿಯಿಂದ ರಾಮನವಮಿ ಉತ್ಸವವನ್ನು ಭಾನುವಾರ ವಿಜೃಂಭಣೆಯಿಂದ ನಡೆಸಲಾಯಿತು.ಮುಂಜಾನೆ ವಿಶೇಷ ಪೂಜೆಯ ನಂತರ ರಾಮದೇವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಗ್ರಾಮದಲ್ಲಿ ಭಜನೆಯ ಮೂಲಕ  ನಡೆಸಲಾಯಿತು. ನಂತರ ರಾಮಾಯಣ ವಾಚನ, ಮಹಾ ಮಂಗಳಾರತಿಯ ನಂತರ ಪಾನಕ ಕೋಸಂಬಿಯ ವಿತರಣೆ ಮಾಡಲಾಯಿತು. ರಾತ್ರಿ ದಾಸ ವರೇಣ್ಯರ ವಿರಚಿತ ಕೀರ್ತನೆಗಳ ಗಾಯನ ನಡೆಯಿತು.ನ್ಯಾಮತಿ ವರದಿ


ಗ್ರಾಮದೇವತೆ ಪ್ರಾಣದೇವರು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾಮನವಮಿ ಆಚರಣೆಯನ್ನು ಆಚರಿಸಲಾಯಿತು.ಈ ನಿಮಿತ್ತ ಆಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ರೂಪವಾಗಿ ಕೋಸಂಬರಿ, ಪಾನಕವನ್ನು ವಿತರಿಸಲಾಯಿತು.

ದೇವಸ್ಥಾನ ಮುಜರಾಯಿ ಸಮಿತಿ ಹಾಗೂ ಆಂಜನೇಯಸ್ವಾಮಿ ಸೇವಾ ಸಮಿತಿಯವರು ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.