ಗುರುವಾರ , ಫೆಬ್ರವರಿ 25, 2021
29 °C

ರಮ್ಯಾ ಕೊನೆಯ ಓಟಕ್ಕೆ ಆರ್ಯನ್‌ ಟ್ರ್ಯಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಮ್ಯಾ ಕೊನೆಯ ಓಟಕ್ಕೆ ಆರ್ಯನ್‌ ಟ್ರ್ಯಾಕ್‌

ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯಲ್ಲಿ ಅಂದು ಬೆಳಕು ಹೆಚ್ಚಾಗಿ ಪ್ರವಹಿಸುತ್ತಿತ್ತು. ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿತ್ತು ‘ಆರ್ಯನ್‌’ ಚಿತ್ರತಂಡ. ಶಿವರಾಜ್‌ಕುಮಾರ್‌ ಅದೇ ಯೌವನದ ಉತ್ಸಾಹದಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಸಂಸದೆ ರಮ್ಯಾ ರಜೆಯ ದಿನದಂದು ನಟಿಯ ದಿರಿಸಿನಲ್ಲಿ ಮತ್ತೆ ಗ್ಲಾಮರ್‌ ಲುಕ್‌ಗೆ ಜಾರಿದ್ದರು.ಹರ್ಷ ಸಂಯೋಜಿಸುತ್ತಿದ್ದ ಸ್ಟೆಪ್ಪುಗಳಿಗೆ ಶಿವರಾಜ್‌ಕುಮಾರ್‌ ಮತ್ತು ರಮ್ಯಾ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದರು ಮತ್ತೊಬ್ಬ ನಟಿ ಅರ್ಚನಾ ಗುಪ್ತ. ಹಾಡಿನ ಚಿತ್ರೀಕರಣದ ನಡುವೆ ಬ್ರೇಕ್‌ ತೆಗೆದುಕೊಂಡು ಮಾತಿಗೆ ಕುಳಿತುಕೊಂಡಿತು ಚಿತ್ರತಂಡ. ಅದುವರೆಗೂ ಸೆಟ್‌ನಲ್ಲಿದ್ದ ಅರ್ಚನಾ ಗುಪ್ತ ಸುದ್ದಿಗೋಷ್ಠಿ ವೇಳೆಗೆ ಮಾಯವಾಗಿದ್ದರು.ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ನಿಧನದ ನಂತರ ಚಿತ್ರತಂಡ ಆಯೋಜಿಸಿದ್ದ ಮೊದಲ ಸುದ್ದಿಗೋಷ್ಠಿಯದು. ರಾಜೇಂದ್ರ ಬಾಬು ಅವರಿಂದ ತೆರವಾದ ನಿರ್ದೇಶಕನ ಸ್ಥಾನವನ್ನು ತುಂಬಿಕೊಂಡಿರುವ ಗುರುದತ್, ‘ಆರ್ಯನ್‌’ ಚಿತ್ರೀಕರಣ ಪೂರ್ಣಗೊಳಿಸುತ್ತಿರುವ ಸಂತಸದಲ್ಲಿದ್ದರು.ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣವನ್ನು ರಾಜೇಂದ್ರ ಬಾಬು ಅವರೇ ಮುಗಿಸಿದ್ದರು. ಇದು ದೇಶಭಕ್ತಿ ಮತ್ತು ಕ್ರೀಡಾಭಿಮಾನದ ಜೊತೆಗೆ ಸಂಪೂರ್ಣ ಸರಳ, ನವಿರಾದ, ಮುದ್ದಾದ ಪ್ರೇಮ ಕಥೆಯ ಚಿತ್ರ ಎಂದರು ಶಿವಣ್ಣ. ತಮ್ಮ ಒತ್ತಡದ ಕೆಲಸಗಳ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಂಡ ರಮ್ಯಾ ಅವರ ಬದ್ಧತೆಯನ್ನು ಶಿವಣ್ಣ ಮೆಚ್ಚಿದರು.ರಾಜೇಂದ್ರ ಬಾಬು ಅವರ ಅಗಲಿಕೆ ಬಳಿಕ ನಿರ್ದೇಶಕನ ಸ್ಥಾನವನ್ನು ಯಾರು ತುಂಬುವುದು ಎನ್ನುವುದು ಪ್ರಶ್ನೆಯಾಗಿತ್ತು. ಆಗ ಗುರುದತ್‌ ಅವರ ಹೆಸರು ಸೂಚಿಸಿದ್ದೇ ಶಿವಣ್ಣ. ಅದಕ್ಕಾಗಿ ಶಿವರಾಜ್‌ಕುಮಾರ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು ಗುರುದತ್‌. ಬಾಬು ಅವರು ಅದ್ಭುತವಾಗಿ ಚಿತ್ರಕಥೆ ಮಾಡಿದ್ದಾರೆ. ಇಡೀ ಚಿತ್ರೀಕರಣ ಯಾವುದೇ ಸಮಸ್ಯೆಗಳಿಲ್ಲದೆ ನಡೆಯಿತು ಎಂದರು ಗುರುದತ್‌.ಮಹಿಳಾ ಸಬಲೀಕರಣದ ಅಂಶಗಳನ್ನು ಹೊಂದಿರುವ ಕಾರಣಕ್ಕೆ ಈ ಸಿನಿಮಾ ಹೆಚ್ಚು ಮಹತ್ವ ಪಡೆದಿದೆ ಎನ್ನುವ ಅಭಿಪ್ರಾಯ ಮಂಡಿಸಿದರು ರಮ್ಯಾ. ಬಾಲ್ಯದಲ್ಲಿ ಅಥ್ಲೆಟಿಕ್‌ನಲ್ಲಿ ಭಾಗವಹಿಸಿ ಗೆದ್ದ ನೆನಪುಗಳನ್ನು ಅವರು ಹಂಚಿಕೊಂಡರು. ಇಲ್ಲಿನ ಪಾತ್ರವೂ ಅದಕ್ಕೆ ಪೂರಕವಾಗಿದೆ ಎನ್ನುವ ಖುಷಿ ಅವರದು. ಆರ್ಯನ್‌ ಬಳಿಕ ‘ದಿಲ್‌ ಕಾ ರಾಜ’ ಚಿತ್ರೀಕರಣ ಪೂರ್ಣಗೊಳಿಸಲಿರುವ ರಮ್ಯಾ ಚಿತ್ರರಂಗದಿಂದ ದೂರ ಸರಿಯುವ ಸೂಚನೆ ನಿಡಿದರು.ಕಷ್ಟದ ಸಮಯಗಳನ್ನು ದಾಟಿ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ನಿರ್ಮಾಪಕರಲ್ಲೊಬ್ಬರಾದ ಕಮರ್‌. ರಮ್ಯಾ ಲೋಕಸಭಾ ಚುನಾಚಣೆಗೆ ಸ್ಪರ್ಧಿಸಲಿರು­ವುದರಿಂದ ಚುನಾವಣೆಯ ನಂತರವೇ ‘ಆರ್ಯನ್‌’ ತೆರೆಕಾಣಲಿದೆ.

ನೃತ್ಯ ನಿರ್ದೇಶಕ ಹರ್ಷ, ಛಾಯಾಗ್ರಾಹಕ ಚಂದ್ರಶೇಖರ್‌, ಧ್ರುವ್‌ ಸುದ್ದಿಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.