ಭಾನುವಾರ, ಜೂಲೈ 12, 2020
28 °C

ರಸ್ತೆ ದುರಸ್ತಿಗಾಗಿ ಕರವೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಾಗೇವಾಡಿ (ಬೈಲಹೊಂಗಲ):  ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರು ಐದು ಗಂಟೆಗಳ ವರೆಗೆ ಬೈಲಹೊಂಗಲ- ಹಿರೇಬಾಗೇವಾಡಿ ರಾಜ್ಯ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಬೈಲಹೊಂಗಲ- ಹಿರೇಬಾಗೇವಾಡಿ ರಸ್ತೆ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಮುಖ್ಯ ರಸ್ತೆಯಾಗಿದ್ದು, ಸವದತ್ತಿಯಿಂದ ಬೆಳಗಾವಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಿದೆ.ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಡಾಂಬರೀಕರಣ, ತಿಗಡಿ ಕ್ರಾಸ್‌ದಿಂದ ಮರಿಕಟ್ಟಿವರೆಗಿನ ರಸ್ತೆ ದುರಸ್ತಿ ಗದ್ದಿಕರವಿನಕೊಪ್ಪ ಕ್ರಾಸ್‌ದಿಂದ ಎಂ.ಕೆ. ಹುಬ್ಬಳ್ಳಿ ವರೆಗೆ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.ಸವದತ್ತಿ ಘಟಕದ ಸಾರಿಗೆ ಬಸ್‌ಗಳು ತಿಗಡಿ ಕ್ರಾಸ್, ಗದ್ದಿಕರವಿನಕೊಪ್ಪ ಕ್ರಾಸ್ ಹಾಗೂ ಚಿಕ್ಕಬಾಗೇವಾಡಿ ಕಡೆಗಳಲ್ಲಿ ಬಸ್ ನಿಲ್ಲಿಸದೇ ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿಗದಿತ ಸಮಯದಲ್ಲಿ ಕೆಲಸ ಕಾರ್ಯ, ಶಾಲೆಗಳಿಗೆ ತಲುಪಲು ಆಗದೇ ಪರದಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡುವ ಸೌಜನ್ಯ ತೋರದ ಅಧಿಕಾರಿಗಳ ಪ್ರತಿಕೃತಿಯನ್ನು ಅಧಿಕಾರಿಗಳು ದಹನ ಮಾಡಿದರು.ಬೈಲಹೊಂಗಲ-ಹಿರೇಬಾಗೇವಾಡಿ ರಸ್ತೆತಡೆ ಮಾಡಿದ್ದರಿಂದ, ಗಿರಿಯಾಲ, ಬೆಣಚಿಣಮರಡಿ, ತಿಗಡಿ ಮೂಲಕ ವಾಹನಗಳು ಸಂಚರಿಸಿದವು. ಹೀಗಾಗಿ ಪ್ರತಿಭಟನಾಕಾರರು ಗಿರಿಯಾಲ ಕ್ರಾಸ್, ತಿಗಡಿ ಕ್ರಾಸ್ ಹಾಗೂ ಬೆನಚಿಣಮರಡಿ ಕ್ರಾಸ್‌ದಲ್ಲಿಯೂ ರಸ್ತೆತಡೆ ಕೈಗೊಂಡರು.ತಹಸೀಲ್ದಾರ ಪಿ.ಎನ್. ಲೋಕೇಶ ಆಗಮಿಸಿ ಶೀಘ್ರದಲ್ಲಿ ಸಮಸ್ಯೆಗಳ ಈಡೇರಿಕೆಗೆ ಅಧಿಕಾರಿಗಳು ಸ್ಪಂದಿಸದೇ ಇದ್ದಲ್ಲಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಲೋಕೋಪಯೋಗಿ ಇಲಾಖೆಯ  ಎಂಜನಿಯರ್ ಕುಲಕರ್ಣಿ ಮಾತನಾಡಿ 10 ದಿನಗಳಲ್ಲಿ ಗದ್ದಿಕರವಿನಕೊಪ್ಪದಿಂದ ಎಂ.ಕೆ. ಹುಬ್ಬಳ್ಳಿ ವರೆಗಿನ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು. ಗ್ರಾಮೀಣ ಭಾಗದ ರಸ್ತೆಗಳನ್ನು ಶೀಘ್ರದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯ ನೇತೃತ್ವವನ್ನು ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ತುರಮರಿ, ತಾಲ್ಲೂಕು ಗೌರವ ಅಧ್ಯಕ್ಷ ರಾಜು ಕುಡಸೋಮಣ್ಣವರ, ಉಪಾಧ್ಯಕ್ಷ ಜಗದೀಶ ನಾವಲಗಟ್ಟಿ, ಶಾಖಾ ಅಧ್ಯಕ್ಷ ಸುಧೀರ ಪಾಟೀಲ, ರುದ್ರಗೌಡ ಪಾಟೀಲ, ಅಡಿವೆಪ್ಪ ಗೋಣಿ, ಮಡಿವಾಳಯ್ಯ ಹಿರೇಮಠ, ನಾಗೇಶ ಶಿಂಧೆ, ದೊಡಗೌಡ ಹುಚ್ಚಗೌಡರ, ಸುಭಾಸ ಪಡೆಣ್ಣವರ, ಚಂದ್ರಶೇಖರ ಕಲ್ಲೂರ, ಚನಬಸ್ಸು ಮಾರಿಹಾಳ ಸೇರಿದಂತೆ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.