ಮಂಗಳವಾರ, ಮೇ 18, 2021
22 °C
ಉಪ್ಪೂರು ಪಿಳ್ಕಳ ಕೆಸರುಮಯ

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾತಬೆಟ್ಟು ಬೈಲಾ ಹಿರಿಯ ಪ್ರಾಥಮಿಕ ಶಾಲೆಯಿಂದ ಪಿಳ್ಕಳ ಗರೋಡಿಗೆ ಸಾಗುವ ಸುಮಾರು 1ಕಿ.ಮೀ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಂಚರಿಸಲು ಅಯೋಗ್ಯವಾಗಿದೆ. ಶೀಘ್ರ ರಸ್ತೆ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.100ಕ್ಕೂ ಹೆಚ್ಚು ಮನೆಯಿರುವ ಇಲ್ಲಿಗೆ ಪಂಚಾಯಿತಿಯ ರಾಜಕೀಯ ಮತ್ತು ಸ್ಥಳೀಯ ಕೆಲಮಂದಿಯ ಕಾರಣ ರಸ್ತೆ ದುರಸ್ತಿ ಕಾಣದೇ ಸಂಪೂರ್ಣ ಕೆಸರುಮಯವಾಗಿದೆ. ದಿನನಿತ್ಯ 50ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಾಗಬೇಕಾಗಿದೆ.ರಸ್ತೆ ಹಾಳಾಗಿರುವುದರಿಂದ ರಿಕ್ಷಾ ಮತ್ತು ಇತರೆ ವಾಹನ ಚಾಲಕರು ಬರುತ್ತಿಲ್ಲ. ದ್ವಿಚಕ್ರವಾಹನ ಸವಾರರು ಇದೇ ರಸ್ತೆಯಲ್ಲಿ ಸರ್ಕಸ್ ಮಾಡಿ ಸವಾರಿ ಮಾಡಬೇಕಾದ ಪರಿಸ್ಥಿತಿ ಇದೆ. ದುರಸ್ತಿ ಮಾಡುವ ಬಗ್ಗೆ ಅನೇಕ ಬಾರಿ ಪಂಚಾಯಿತಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಗರೋಡಿ ಬಳಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ಕುಡಿಯುವ ನೀರಿಗೆ ಬಾವಿಯೊಂದನ್ನು ನಿರ್ಮಿಸಲಾಗುತ್ತಿದ್ದು, ಬಾವಿ ತೋಡುವ ಮುನ್ನವೇ ಕಳೆದ ಮೇಯಲ್ಲಿ ರಸ್ತೆ ಮದ್ಯದಲ್ಲಿ ನೀರಿಗಾಗಿ ಪೈಪ್ ಅಳವಡಿಸಲಾಗಿತ್ತು.ಈಗ ಮಳೆ ಬಂದ ಕಾರಣ ಮಣ್ಣು ಕೆಸರುಮಯವಾಗಿದ್ದು ನಡೆದಾಡಲೂ ಆಗುತ್ತಿಲ್ಲ ಎಂದು ಕೆಲವರು ದೂರಿದರೆ, ಬಾವಿ ತೋಡುವುದರ ಬಗ್ಗೆ ಮತ್ತು ರಸ್ತೆ ನಿರ್ಮಾಣದ ಬಗ್ಗೆ ಕೆಲವು ಸ್ಥಳೀಯರ ವಿರೋಧದ ಕಾರಣ ರಸ್ತೆ ದುರಸ್ತಿ ಕಾರ್ಯ ಮಾಡಲು ಆಗಲಿಲ್ಲ ಎಂದು ಸ್ಥಳೀಯ ಪಂಚಾಯಿತಿ ಸದಸ್ಯರು ಹೇಳಿಕೊಂಡರು.ಶೀಘ್ರ ದುರಸ್ತಿ: ಸ್ಥಳಕ್ಕೆ ಭೇಟಿ ನೀಡಿದ್ದ ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಶೆಟ್ಟಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಈ ರಸ್ತೆಯನ್ನು ವಾರದೊಳಗೆ ತಾತ್ಕಾಲಿವಾಗಿ ದುರಸ್ತಿ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಜ್ಯೋತಿ ಪೂಜಾರಿ, ಕೃಷ್ಣರಾಜ್, ರಮೇಶ್ ಕರ್ಕೇರಾ ಇದ್ದರು.ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಇದ್ದರೂ ಈ ಮಳೆಗಾಲದಲ್ಲಿ ಕೆಸರು ಹೆಚ್ಚಾಗಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಇನ್ನಾದರೂ ಪಂಚಾಯಿತಿ ರಾಜಕೀಯವನ್ನು ದೂರವಿರಿಸಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಪಿಳ್ಕಳದ ರಾಯಲ್ ಫ್ರೆಂಡ್ಸ್, ಸ್ತ್ರೀ ಶಕ್ತಿ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಯುವ ಫ್ರೆಂಡ್ಸ್ ಮತ್ತು ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.