ಮಂಗಳವಾರ, ಜೂನ್ 15, 2021
21 °C

ರಸ್ತೆ ದುರಸ್ತಿ ಕಾಮಗಾರಿ ಚುರುಕು

ಪ್ರಜಾವಾಣಿ ವಾರ್ತೆ ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ರಸ್ತೆ ದುರಸ್ತಿ ಕಾಮಗಾರಿ ಚುರುಕು

 ಹುಬ್ಬಳ್ಳಿ: ಅವಳಿ ನಗರದಲ್ಲಿ ಒಳರಸ್ತೆ ದುರಸ್ತಿ ಕಾಮಗಾರಿ ವೇಗ ಪಡೆದುಕೊಂಡಿದೆ. ರಸ್ತೆ ದುರಸ್ತಿ, ಹೊಸ ರಸ್ತೆಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಹುಮ್ಮಸ್ಸಿನಲ್ಲಿ ಪಾಲಿಕೆ ಸದಸ್ಯರು ಓಡಾಡುತ್ತಿದ್ದಾರೆ.ಪಾಲಿಕೆಗೆ ಸರ್ಕಾರದಿಂದ ಎರಡನೇ ಬಾರಿ ಬಂದ 100 ಕೋಟಿ ರೂಪಾಯಿ ಅನುದಾನದಲ್ಲಿ ಅವಳಿ ನಗರದ ಒಳರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ 12 ಹಾಗೂ 13ನೇ ಹಣಕಾಸಿನ ಯೋಜನೆಯಡಿಯಲ್ಲಿ ಮಂಜೂರಾದ ಹಣದಲ್ಲೂ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಸ್ತೆಯಲ್ಲೇ ಕಾಮನನ್ನು ಸುಡುವುದರಿಂದ ರಸ್ತೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಕೆಲ ಪಾಲಿಕೆ ಸದಸ್ಯರು ಹೋಳಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಹಬ್ಬ ಮಗಿದ ಹಿನ್ನೆಲೆಯಲ್ಲಿ ಮಳೆ ಆರಂಭವಾಗುವ ಮುನ್ನ ಕಾಮಗಾರಿಗಳನ್ನು ಮುಗಿಸಲು ಈಗ ಪ್ರಯತ್ನ ನಡೆಯುತ್ತಿದೆ.ಅವಳಿ ನಗರದಲ್ಲಿ ಒಳರಸ್ತೆ ಹಾಗೂ ಮುಖ್ಯರಸ್ತೆ ಸೇರಿದಂತೆ ಈ ವರ್ಷ ಒಟ್ಟು 1,300 ಕಿ.ಮೀ. ರಸ್ತೆ ಅಭಿವೃದ್ಧಿಗೆ ಪಾಲಿಕೆ ಮುಂದಾಗಿದ್ದು, ಪ್ರತಿ ವಾರ್ಡಿಗೆ ಕನಿಷ್ಠ 40ರಿಂದ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಂದೂವರೆ ತಿಂಗಳ ಹಿಂದೆ ಆರಂಭವಾದ ಕಾಮಗಾರಿ ಮುಗಿಸಲು ಯಾವುದೇ ಕಾಲಮಿತಿ ಹಾಕಿಲ್ಲವಾದರೂ ಏಪ್ರಿಲ್ ತಿಂಗಳಾಂತ್ಯದಲ್ಲಿ ಮುಗಿಸಲು ಶ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾಮಗಾರಿಯ ಗುತ್ತಿಗೆಗೆ ಪ್ಯಾಕೇಜ್ ಪದ್ಧತಿ ಅಳವಡಿಸಿರುವುದು ಕೆಲ ಪಾಲಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.`ಪ್ಯಾಕೇಜ್ ಪದ್ಧತಿಯಿಂದಾಗಿ ಗುಣಮಟ್ಟದ ಕಾಮಗಾರಿಗೆ ಧಕ್ಕೆಯಾಗುವ ಸಾಧ್ಯತೆ ಇದೆ~ ಎಂದು ಪಾಲಿಕೆ ಸದಸ್ಯ ಸತೀಶ ಹಾನಗಲ್ ಹೇಳಿದರು.`ಒಳ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕರಿಂದ ಸಾಕಷ್ಟು ಒತ್ತಾಯ ಬಂದಿದೆ. ನನ್ನ ವಾರ್ಡಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇಕಡಾ 60ರಷ್ಟು ರಸ್ತೆಗೆ ಸಂಬಂಧಿಸಿದ್ದು. ಪ್ಯಾಕೇಜ್ ಪದ್ಧತಿಯಿಂದ ಯಾವುದೇ ತೊಂದರೆಯಾಗಿಲ್ಲ. ಎಲ್ಲ ಗುತ್ತಿಗೆದಾರರಿಗೆ ಅವಕಾಶ ನೀಡಲು ಇದು ನೆರವಾಗಲಿದೆ~ ಎಂದು ಪಾಲಿಕೆ ಸದಸ್ಯ ಡಿ.ಕೆ. ಚೌಹಾಣ ತಿಳಿಸಿದರು.  `52ನೇ ವಾರ್ಡಿನಲ್ಲಿ ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಹೊಸ ಬಡಾವಣೆಗಳಲ್ಲಿ ಶೇಕಡಾ 80ರಷ್ಟು ಅಭಿವೃದ್ಧಿಯಾದ ನಂತರವಷ್ಟೇ ರಸ್ತೆ ಕಾಮಗಾರಿಯನ್ನು ಆರಂಭಿಸಬೇಕಾಗುತ್ತದೆ. ಇಂಥ ಸಮಸ್ಯೆಗಳು ಇದ್ದರೂ ಕಾಮಗಾರಿಯನ್ನು ಏಪ್ರಿಲ್ ತಿಂಗಳೊಳಗೆ ಮುಗಿಸುವುದಕ್ಕಾಗಿ ಶ್ರಮಿಸಲಾಗುತ್ತಿದೆ~ ಎಂದು ಪಾಲಿಕೆ ಸದಸ್ಯ ಸುಧೀರ ಸರಾಫ ಹೇಳಿದರು.

`ಕಳಪೆ ಕಾಮಗಾರಿ ಕಂಡರೆ ಗಮನಕ್ಕೆ ತನ್ನಿ~

`ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವುದಕ್ಕಾಗಿ ಪ್ಯಾಕೇಜ್ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಮಗಾರಿಯನ್ನು ಖುದ್ದು ನಾನೇ ಪರಿಶೀಲಿಸುತ್ತಿದ್ದೇನೆ. ಕಳಪೆ ಕಾಮಗಾರಿ ಕಂಡು ಬಂದರೆ ಸಾರ್ವಜನಿಕರು ಪಾಲಿಕೆ ಕಂಟ್ರೋಲ್ ಕೊಠಡಿಗೆ (2213888)ಗೆ ಕರೆ ಮಾಡಿ ದೂರು ಸಲ್ಲಿಸಬಹುದು~ ಎಂದು ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.`ಪ್ರತಿ ರಸ್ತೆಯ ಕಾಮಗಾರಿ ಮುಗಿದ ನಂತರ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಫಲಕವನ್ನು ಅಳವಡಿಸಲಾಗುವುದು. ಇದಕ್ಕೆ ಸಂಬಂಧಿಸಿದ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.