ಭಾನುವಾರ, ಮೇ 16, 2021
26 °C

ರಸ್ತೆ ವಿವಾದ- ಪ್ರಮಾಣ ಪತ್ರಕ್ಕೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಕ್ಷಣಾ ಇಲಾಖೆಗೆ ಸೇರಿರುವ ಜಾಗವನ್ನು ಬಿಬಿಎಂಪಿಯ ಜಾಗ ಎಂದು ಹೇಳುತ್ತ 2006ರಿಂದಲೂ ಹೈಕೋರ್ಟ್ ಹಾದಿ ತಪ್ಪಿಸುತ್ತಿರುವ ಪಾಲಿಕೆ ಅಧಿಕಾರಿಗಳು ಯಾರು ಎಂಬ ಬಗ್ಗೆ ಇದುವರೆಗೆ ಮಾಹಿತಿ ನೀಡದ ಆಯುಕ್ತ ಸಿದ್ದಯ್ಯನವರು ಕೋರ್ಟ್ ನಿಂದ ಸೋಮವಾರ ತೀವ್ರ ತರಾಟೆಗೆ ಒಳಗಾದರು.ಸೋಮವಾರ ಇವರು ಖುದ್ದು ಹಾಜರು ಇರಬೇಕು ಎಂದು ಕಳೆದ ಬಾರಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿತ್ತು. ಆದರೆ ಜ್ವರದ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಕೀಲರು ತಿಳಿಸಿದರು.ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, `ಅದು ಯಾವ ರೀತಿಯ ಜ್ವರ ಎನ್ನುವುದು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆ ವೇಳೆ ಜ್ವರದ ಕುರಿತಾದ ವೈದ್ಯಕೀಯ ದಾಖಲೆಯನ್ನು ಹಾಜರು ಪಡಿಸಿ~ ಎಂದು ಪಾಲಿಕೆ ಪರ ವಕೀಲರಿಗೆ ತಿಳಿಸಿದರು.ಮೋದಿ ಗಾರ್ಡನ್ ಲೇಔಟ್‌ನಿಂದ ಕಾವಲ್‌ಬೈರಸಂದ್ರಕ್ಕೆ ತಲುಪಬೇಕಿರುವ ರಸ್ತೆ ವಿವಾದ ಇದಾಗಿದೆ. ರಕ್ಷಣಾ ಇಲಾಖೆಗೆ ಸೇರಿದ್ದ ಜಾಗವಾಗಿದ್ದರಿಂದ ಅದು ರಸ್ತೆಯನ್ನು ಮುಚ್ಚಿತ್ತು. ಆದರೆ ಇದು ತಮಗೆ ಸೇರಿದ್ದ ರಸ್ತೆ ಎಂಬುದು ಪಾಲಿಕೆ ವಾದವಾಗಿತ್ತು. ಪರ್ಯಾಯ ರಸ್ತೆ ಕಲ್ಪಿಸಲು ಪಾಲಿಕೆಗೆ  ಆದೇಶಿಸಿದ್ದರೂ ಅದನ್ನು ಪಾಲನೆ ಮಾಡಿಲ್ಲ ಎಂದು ದೂರಿ ಎ.ಆರ್.ಸುರೇಶ್ ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ಆದರೆ ಕಳೆದ ವಿಚಾರಣೆ ವೇಳೆ ಇದು ಇಲಾಖೆಯ ಜಾಗ ಎಂದು ಪಾಲಿಕೆ ಒಪ್ಪಿಕೊಂಡಿತು. ಜಾಗದ ಕುರಿತು ವರ್ಷಾನುಗಟ್ಟಲೆ ಕೋರ್ಟ್ ಅನ್ನು ತಪ್ಪು ದಾರಿಗೆ ಎಳೆದ ಪಾಲಿಕೆಯ ಅಧಿಕಾರಿಗಳ ಕುರಿತು ಮಾಹಿತಿ ನೀಡುವಂತೆ ಆಯುಕ್ತರಿಗೆ ಪೀಠ ಆಗ ನಿರ್ದೇಶಿಸಿತ್ತು. ಈ ಸಂಬಂಧ ಸಿದ್ದಯ್ಯ ಅವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಸೋಮವಾರ ಹಾಜರು ಪಡಿಸಲಾಯಿತು. ಆದರೆ ಇದರಲ್ಲಿ ಯಾವುದೇ ಮಾಹಿತಿ ಇಲ್ಲದೇ ಇರುವುದು ನ್ಯಾಯಮೂರ್ತಿಗಳ ಕೋಪಕ್ಕೆ ಗುರಿಯಾಯಿತು.`ನೀವು ಒಳ್ಳೆಯ ಅಧಿಕಾರಿಯೇ ಆಗಿರಬಹುದು. ಇದು ನಮ್ಮ ಮೇಲೆ  ಪ್ರಭಾವ ಬೀರುವುದಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿಯೂ ಕೋರ್ಟ್ ಆದೇಶ ಪಾಲನೆ ಮಾಡುತ್ತಿಲ್ಲ ಎಂದರೆ ಏನರ್ಥ, 2006ರ ಅಧಿಕಾರಿಗಳ ಹೆಸರೂ ನಮಗೆ ಬೇಕು~ ಎಂದ ಪೀಠ, ಈ ಸಂಬಂಧ ಮಾಹಿತಿ ನೀಡಲು ನಾಲ್ಕು ವಾರಗಳ ಗಡುವು ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.