ಬುಧವಾರ, ಮಾರ್ಚ್ 3, 2021
23 °C
ಮೆಟ್ರೊ ರೀಚ್‌–4 ಬಿ ಮಾರ್ಗದ ಪುಟ್ಟೇನಹಳ್ಳಿ– ಅಂಜನಾಪುರ ಕಾಮಗಾರಿ

ರಸ್ತೆ ವಿಸ್ತರಣೆ, ಪಿಲ್ಲರ್‌ ಅಳವಡಿಕೆ ಪ್ರಗತಿಯಲ್ಲಿ

ಪಿ. ವಿ. ಪ್ರವೀಣ್‌ಕುಮಾರ್‌ Updated:

ಅಕ್ಷರ ಗಾತ್ರ : | |

ರಸ್ತೆ ವಿಸ್ತರಣೆ, ಪಿಲ್ಲರ್‌ ಅಳವಡಿಕೆ ಪ್ರಗತಿಯಲ್ಲಿ

ಬೆಂಗಳೂರು: ಉತ್ತರ–ದಕ್ಷಿಣ ಕಾರಿಡಾರ್‌ ಅನ್ನು ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲಿ ಪುಟ್ಟೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ  ರೀಚ್‌–4ಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.ಈ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯು ರೀಚ್‌–4 ಮಾರ್ಗದುದ್ದಕ್ಕೂ ರಸ್ತೆ ವಿಸ್ತರಣೆ ಕಾರ್ಯದಲ್ಲಿ ತೊಡಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸುವ, ಅಗೆತ, ಪಿಲ್ಲರ್‌ ಅಳಡಿಸಲು ಗುಂಡಿ ಕೊರೆಯುವ ಹಾಗೂ ಒಳಚರಂಡಿ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ‘ಈ ಮಾರ್ಗದಲ್ಲಿ ಒಟ್ಟು 1,722  ಪಿಲ್ಲರ್‌ಗಳು ಬರಲಿದ್ದು, ಈ ಪೈಕಿ 227 ಪಿಲ್ಲರ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. 222  ಪಿಲ್ಲರ್‌ಗಳಿಗೆ ಪಿಲ್ಲರ್‌ ಕ್ಯಾಪ್‌  ಕಾಂಕ್ರೀಟೀಕರಣ ಮಾಡಬೇಕಾಗಿದ್ದು, ಈ ಪೈಕಿ ಆರು ಪಿಲ್ಲರ್‌ಕ್ಯಾಪ್‌ಗಳ ಕಾಂಕ್ರೀಟೀಕರಣ ಮುಗಿದಿದೆ’ ಎಂದು ಬಿಎಂಆರ್‌ಸಿಎಲ್‌ ವಕ್ತಾರ ವಸಂತ ರಾವ್‌ ತಿಳಿಸಿದರು.‘ಈ ಮಾರ್ಗದಲ್ಲಿ ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾಪಾರ್ಕ್‌, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಿಲ್ದಾಣಗಳ ಬಳಿ ಒಳಚರಂಡಿ ಕೆಲಸ, ಸರ್ವೀಸ್‌ ರಸ್ತೆ ಹಾಗೂ ಪಂಚಾಂಗ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. 

ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾ ಪಾರ್ಕ್‌ ಹಾಗೂ ವಜ್ರಹಳ್ಳಿ ನಿಲ್ದಾಣಗಳ ಬಳಿ ಪಿಲ್ಲರ್‌ಗಳನ್ನು ಅಳವಡಿಸುವುದಕ್ಕೆ ಗುಂಡಿ ತೆಗೆಯುವ  ಕಾರ್ಯ ಹಾಗೂ ಇಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ’  ಎಂದು ಅವರು ತಿಳಿಸಿದರು. ಕೊಳವೆ ಸ್ಥಳಾಂತರ: ‘ಎಲ್ಲಿ ನೀರು ಪೂರೈಕೆ ಕೊಳವೆಗಳನ್ನು ಹಾಗೂ ಒಳಚರಂಡಿ ಕೊಳವೆಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂಬುದನ್ನು ಗುರುತಿಸಿದ್ದೇವೆ. ಸ್ಥಳಾಂತರದ ಕುರಿತು ಬಿಬಿಎಂಪಿ ಹಾಗೂ ಜಲಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ.

ಈ ಕೊಳವೆಗಳ ಸ್ಥಳಾಂತರಕ್ಕೆ ಸಂಬಂಧಿಸಿ ಬಿಎಂಆರ್‌ಸಿಎಲ್‌ ಸಂಪೂರ್ಣ ಮೊತ್ತವನ್ನು ಬಿಬಿಎಂಪಿ ಹಾಗೂ  ಜಲಮಂಡಳಿಗೆ ಪಾವತಿಸಿದೆ. ಎರಡು ರೈಲು ನಿಲ್ದಾಣಗಳು ನಿರ್ಮಾಣವಾಗುವ ಕಡೆ ಜಲಮಂಡಳಿಯವರು ಈಗಾಗಲೇ ಬದಲಿ ಕೊಳವೆ ಮಾರ್ಗಗಳನ್ನು ಅಳವಡಿಸಿದ್ದಾರೆ’ ಎಂದರು.‘ವಿದ್ಯುತ್‌ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯ ಗುತ್ತಿಗೆಯನ್ನು ಎರಡು ಏಜೆನ್ಸಿಗಳಿಗೆ ನೀಡಲಾಗಿದೆ. ವಿದ್ಯುತ್‌ ಪರಿವರ್ತಕಗಳನ್ನು ಸ್ಥಳಾಂತರಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ವಾಹನ ಸಂಚಾರ ತಡೆದು ಡಾಂಬರೀಕರಣ– ಸ್ಥಳೀಯರ ಅಸಮಾಧಾನ

ದೊಡ್ಡಕಲ್ಲಸಂದ್ರ ಬಳಿ ಮೆಟ್ರೊ ಕಾಮಗಾರಿ ಸಲುವಾಗಿ ಸರ್ವೀಸ್‌ ರಸ್ತೆಯನ್ನು ನಿರ್ಮಿಸಲಾಗಿದೆ.  ಇದರ ಡಾಂಬರೀಕರಣ ಕಾರ್ಯ ಇತ್ತೀಚೆಗೆ ನಡೆಯಿತು.  ಹಗಲು ಹೊತ್ತಿನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಡಾಂಬರೀಕರಣ ನಡೆಸಿದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

‘ರಾತ್ರಿ ಹೊತ್ತು ವಾಹನ ಸಂಚಾರ ವಿರಳ ಇರುವಾಗ ಕಾಮಗಾರಿ ನಡೆಸಿದರೆ ಸಾರ್ವಜನಿಕರು ಅನನುಕೂಲ ಎದುರಿಸುವುದನ್ನು ತಪ್ಪಿಸಬಹುದು’ ಎಂದು ಸ್ಥಳೀಯರೊಬ್ಬರು  ಅಭಿಪ್ರಾಯಪಟ್ಟರು.

ಎರಡು ಮರಗಳ ಮರುನಾಟಿ

‘ನೈಸ್‌ ರಸ್ತೆವರೆಗೆ ಕಾಮಗಾರಿ ಮುಂದುವರಿಸಲು ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿನ ಎರಡು ಮರಗಳನ್ನು ಕಿತ್ತು ಬೇರೆ ಕಡೆ ಮರುನಾಟಿ ಮಾಡಲಾಗಿದೆ’ ಎಂದು ವಸಂತ ರಾವ್‌ ತಿಳಿಸಿದರು.

‘ನೈಸ್‌ ರಸ್ತೆಯ ಆಚೆಗೆ 44 ಮರಗಳ  ಪೈಕಿ 34 ಮರಗಳನ್ನು ಈಗಾಗಲೇ ಕಡಿಯಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.