ಶನಿವಾರ, ಮೇ 21, 2022
20 °C
ಕುಷ್ಟಗಿ ಎಪಿಎಂಸಿ ಖಾಲಿ ನಿವೇಶನ ಹಂಚಿಕೆ ಪ್ರಕ್ರಿಯೆ

ರಾಜಕೀಯ `ಕೃಪೆ' ಅನರ್ಹರ ಸಂಚು

ಪ್ರಜಾವಾಣಿ ವಾರ್ತೆ/ -ನಾರಾಯಣರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಅಧಿಕೃತ ಪರವಾನಿಗೆ ಪಡೆದು ವ್ಯವಹಾರ ನಡೆಸುತ್ತಿದ್ದರೂ ಸ್ವಂತ ನಿವೇಶನ ಅಥವಾ ಗೋದಾಮು ಹೊಂದಿರದ ವರ್ತಕರಿಗೆ ಸಮಿತಿಗೆ ಸೇರಿದ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಲು ಸಮಿತಿ ನಿರ್ಧರಿಸಿದೆ. ಆದರೆ, ಸ್ವಂತ ನಿವೇಶನ, ಗೋದಾಮು ಹೊಂದಿರುವವರೂ ಬೇನಾಮಿ ವರ್ತಕರ ಹೆಸರಿನಲ್ಲಿ ಮತ್ತೆ ನಿವೇಶನಗಳನ್ನು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆಗೆ ಚಾಲನೆ ದೊರೆತಿದೆ. ಹತ್ತಾರು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಬಾಡಿಗೆ ಗೋದಾಮುಗಳಲ್ಲಿ ವ್ಯವಹಾರ ನಡೆಸುತ್ತ ಬಂದಿರುವ ಅರ್ಹ ವರ್ತಕರನ್ನೇ ಮೂಲೆಗುಂಪಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಿತಿಯ ಕೆಲ ಸದಸ್ಯರು, ಕೆಲವು ರಾಜಕಾರಣಿಗಳು ನಿವೇಶನ ಹಂಚಿಕೆಯಲ್ಲಿ ಕೈಚಳಕ ತೋರುತ್ತಿರುವ ಬಗ್ಗೆ ಕೆಲವು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿವೇಶನ ಪಡೆಯಲು ಬಯಸುವ ಪೇಟೆ ಕಾರ್ಯಕರ್ತರು ಜುಲೈ 1ರ ಒಳಗಾಗಾಗಿ ಅರ್ಜಿ ಸಲ್ಲಿಸುವಂತೆ ಹೇಳಿದ್ದ ಸಮಿತಿ ಕೊನೆ ದಿನವನ್ನು ಜು.10ಕ್ಕೆ ಮುಂದೂಡಿದೆ. `ಇದರಲ್ಲಿ ಯಾವುದೇ ಸದುದ್ದೇಶವಿಲ್ಲ ಎಂಬ ದೂರು ವರ್ತಕರದ್ದಾಗಿದೆ. ಹೆಸರು ನೋಂದಾಯಿಸಿಕೊಂಡಿರುವ 111  ವರ್ತಕರ ಪೈಕಿ 77 ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಬಹುತೇಕರಿಗೆ ಅರ್ಜಿ ಸಲ್ಲಿಸುವುದಕ್ಕೆ ಅನುಕೂಲವಾಗಲಿ ಎಂಬುದಕ್ಕೆ ಮುಂದೂಡಲಾಗಿದೆ' ಎಂದು ಸಮಿತಿ ಕಾರ್ಯದರ್ಶಿ ಎ.ಬಿ.ಪಾಟೀಲ ಸ್ಪಷ್ಟಪಡಿಸಿದರು.ಹಂಚಿಕೆ ಹೀಗೆ: ಮುಖ್ಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ನಿವೇಶನ ಅಥವಾ ಗೋದಾಮುಗಳನ್ನು ಸ್ವಂತ ಅಥವಾ ಅವುಗಳನ್ನು ಹೊಂದಿರುವರೊಂದಿಗೆ ಪಾಲುದಾರರಾಗಿರದ ಮತ್ತು ಹೆಚ್ಚು ಮಾರುಕಟ್ಟೆ ಶುಲ್ಕ ಪಾವತಿಸುವವರು ನಿವೇಶನಕ್ಕೆ ಅರ್ಹರಾಗಿರುತ್ತಾರೆ. ಅಲ್ಲದೇ ಇಂಥವರ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಸಮಿತಿಯ ಮುಂದಿಟ್ಟು ನಂತರ ಅನುಮೋದನೆಗಾಗಿ ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ಕಳಿಸಲಾಗುತ್ತದೆ.  ಅನರ್ಹರ ಅರ್ಜಿ: ಆದರೆ ಈಗಾಗಲೇ ಅರ್ಜಿ ಸಲ್ಲಿಸಿದವರ ಪೈಕಿ ಬಹುತೇಕರು ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಲೈಸನ್ಸ್ ಮೇಲೆ ನಿವೇಶನ ಪಡೆದು ಸ್ವಂತ ಗೋದಾಮಿನಲ್ಲಿ ವ್ಯವಹರಿಸುತ್ತಿರುವವರೂ ಅರ್ಜಿ ಸಲ್ಲಿಸಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ ಮುಖ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸದಿದ್ದರೂ ಲೈಸನ್ಸ್ ಪಡೆದು, ಬೇರೆಯವರು ನಡೆಸುವ ವ್ಯವಹಾರವನ್ನೇ ತಮ್ಮದು ಎಂದು  ದಾಖಲೆ ಸೃಷ್ಟಿಸಿ ಮಾರುಕಟ್ಟೆ ಶುಲ್ಕ ಭರಿಸುತ್ತಿರುವವರೂ ನಿವೇಶನಕ್ಕೆ ಅರ್ಜಿ ಹಾಕಿರುವುದು ತಿಳಿದಿದೆ.`ನಿಯಮಾನುಸಾರ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವ ವಿಷಯದಲ್ಲಿ ಸಮಿತಿ ಅಧಿಕಾರಿಗಳು ಸ್ವತಂತ್ರರಾಗಿ ಕಾರ್ಯನಿರ್ವಹಿಸಿದರೇ, ರಾಜಕಾರಣಿಗಳು ಹಸ್ತಕ್ಷೇಪ ಮಾಡದಿದ್ದರೆ ಅರ್ಹರಿಗೆ ನ್ಯಾಯ ದೊರೆಯುತ್ತದೆ' ಎಂದು ಹಿರಿಯ ದಲ್ಲಾಳಿ ವರ್ತಕ ದುರುಗಪ್ಪ ಟೆಂಗುಂಟಿ ಹೇಳುತ್ತಾರೆ.ಕಾರ್ಯದರ್ಶಿ ಹೇಳಿಕೆ: `ನಾವು ಒತ್ತಡಕ್ಕೂ ಮಣಿಯುವುದಿಲ್ಲ. ನಿಯಮಬಾಹಿರವಾಗಿ ಸಮಿತಿಯವರು ಹೇಳಿದರೂ ಒಪ್ಪಲು ಸಾಧ್ಯವಾಗುವುದಿಲ್ಲ. ನಿಯಮಾನುಸಾರ ನಡೆದುಕೊಳ್ಳುತ್ತೇವೆ. ಮಾರುಕಟ್ಟೆಯಲ್ಲಿನ ವರ್ತಕರಲ್ಲದವರನ್ನು ಪತ್ತೆಹಚ್ಚಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು' ಎಂದು ಸಮಿತಿ ಕಾರ್ಯದರ್ಶಿ ಎ.ಬಿ.ಪಾಟೀಲ ಹೇಳುತ್ತಾರೆ.ಅಕ್ರಮ: `ನಿವೇಶನದ ಅರ್ಹರ ಪಟ್ಟಿಯಲ್ಲಿ ಸೇರಿಸುವುದಾಗಿ ಹೇಳಿ ಒಳ ಒಪ್ಪಂದ ಮಾಡಿಕೊಂಡಿರುವ ಸಮಿತಿಯ ಕೆಲ ಸಿಬ್ಬಂದಿ ವರ್ತಕರಿಂದ ಸಾವಿರಾರು ರೂಪಾಯಿ ಹಣ ಪಡೆಯುವ ಮೂಲಕ ಅಕ್ರಮದಲ್ಲಿ ನಿರತರಾಗಿದ್ದಾರೆ. ರಾತ್ರಿಯೂ ಸಹ ಖಾತಾ ತಪಾಸಣೆ ಕೆಲಸವನ್ನು ನಡೆಸುತ್ತಿದ್ದು, ಅದಕ್ಕಾಗಿಯೇ ಅರ್ಜಿ ಸಲ್ಲಿಸುವ ಕೊನೆ ದಿನ ಮುಂದೂಡಲಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ವರ್ತಕರು ಆರೋಪಿಸಿದರು.`ಸಮಿತಿ ಸಿಬ್ಬಂದಿ ಹಣ ಕೇಳುವುದು ಅಥವಾ ಪಡೆದಿರುವುದನ್ನು ಗಮನಕ್ಕೆ ತಂದರೆ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕಾರ್ಯದರ್ಶಿ ಎ.ಬಿ.ಪಾಟೀಲ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.