ಗುರುವಾರ , ಏಪ್ರಿಲ್ 22, 2021
28 °C

ರಾಜಕೀಯ ಪಕ್ಷ ಸ್ಥಾಪನೆಯತ್ತ ಅಣ್ಣಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಇದುವರೆಗೆ ಬೀದಿಗಳಲ್ಲಿ ಪ್ರತಿಭಟನೆಗಿಳಿದಿದ್ದ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡ ಚುನಾವಣೆಯಲ್ಲಿ ಸ್ಪರ್ಧಿಸುವ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿತು. ಜಂತರ್ ಮಂತರ್‌ನಲ್ಲಿ ಶುಕ್ರವಾರ ಸಂಜೆ ನಡೆದ ಬಹಿರಂಗ ಸಭೆಯಲ್ಲಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿ `ಜನರ ಅಭ್ಯರ್ಥಿ~ಗಳನ್ನು ಕಣಕ್ಕಿಳಿಸುವ ಘೋಷಣೆ ಮಾಡಿತು.ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಇನ್ನೂ ಗುಟ್ಟು ಬಿಡದ ಅಣ್ಣಾ ತಂಡ, ರಾಜಕೀಯ ಶಕ್ತಿ ಹುಟ್ಟುಹಾಕುವ ಮೂಲಕ ಪರ್ಯಾಯ ರಾಜಕಾರಣ ಮಾಡುವುದಾಗಿ ಪ್ರಕಟಿಸಿತು.ಜನ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅವರೇ ಚುನಾವಣೆ ಹಣ ಖರ್ಚು ಮಾಡಲಿದ್ದಾರೆ ಎಂದು ಪ್ರಕಟಿಸಿತು. ನಾವು ಈ ಸರ್ಕಾರ ಕಿತ್ತೊಗೆಯುತ್ತೇವೆ. ದೀರ್ಘ ಕಾಲದಿಂದ ಈ ಸರ್ಕಾರದ ವಿರುದ್ಧ ಹೋರಾಡುತ್ತಾ ಬಂದಿದ್ದೇವೆ. ನಮ್ಮದು ರಾಜಕೀಯ ಪಕ್ಷವಲ್ಲ; ರಾಜಕೀಯ ಚಳವಳಿ ಎಂದು ಅಣ್ಣಾ ತಂಡ ಹೇಳಿದೆ.`ಅಧಿಕಾರ ಹಿಡಿಯುವುದು ನಮ್ಮ ಉದ್ದೇಶವಲ್ಲ. ರಾಜಕೀಯ ವ್ಯವಸ್ಥೆ ಬದಲಾವಣೆ ಮುಖ್ಯ ಗುರಿ. ಪ್ರಜಾಸತ್ತಾತ್ಮಕ ವಿಧಾನ- ಅಧಿಕಾರ ವಿಕೇಂದ್ರಿಕರಣದಿಂದ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ಹೊಣೆಗಾರಿಕೆಯಿಂದ ವರ್ತಿಸುವಂತೆ ಮಾಡುವುದು ಪರ್ಯಾಯ ರಾಜಕಾರಣದ ಹಿಂದಿನ ಸಂಕಲ್ಪ~ ಎಂದು ಅಣ್ಣಾ ತಂಡ ಹೇಳಿಕೊಂಡಿದೆ.ಒಂಬತ್ತು ದಿನಗಳಿಂದ ಜಂತರ್- ಮಂತರ್‌ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವ ಮೊದಲು ತಮ್ಮ ಮುಂದಿನ ರಾಜಕೀಯ ನಡೆ ಏನೆಂಬುದನ್ನು ಚಳವಳಿಗಾರರು ಸ್ಪಷ್ಟಪಡಿಸಿದ್ದಾರೆ.ಅಣ್ಣಾ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವಿ.ಕೆ ಸಿಂಗ್, ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವ ಆಡಳಿತ ಕೊನೆಯಾಗುವ ಕಾಲ ಹತ್ತಿರ ಬಂದಿದೆ ಎಂದು ಅಭಿಪ್ರಾಯಪಟ್ಟರು.ಸಾರ್ವಜನಿಕ ಸಭೆಯ ಬಳಿಕ ಅಣ್ಣಾ ಅವರಿಗೆ ಹಣ್ಣಿನ ರಸ ಕುಡಿಸುವ ಮೂಲಕ ಒಂಬತ್ತು ದಿನಗಳ ಹೋರಾಟವನ್ನು ಅಂತ್ಯಗೊಳಿಸಿದರು.ತಂಡದಲ್ಲಿ ಒಡಕು

ರಾಜಕೀಯ ಪಕ್ಷ ಸ್ಥಾಪನೆ ಕುರಿತು ಅಣ್ಣಾ ತಂಡದಲ್ಲೇ ಒಡಕು ಕಾಣಿಸಿಕೊಂಡಿದೆ. ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸೇರಿದಂತೆ ಕೆಲವರು ಅಪಸ್ವರ ತೆಗೆದಿದ್ದಾರೆ.ಸವಾಲು ಸ್ವೀಕಾರ

ಕಾಂಗ್ರೆಸ್ ಒಳಗೊಂಡಂತೆ ಕೆಲವು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕಿದವು. ಈ ಸವಾಲನ್ನು ನಾವು ಸ್ವೀಕಾರ ಮಾಡಿದ್ದೇವೆ   -ಅಣ್ಣಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.