ಸೋಮವಾರ, ಜೂನ್ 21, 2021
29 °C

ರಾಜಕೀಯ ಲಾಭಕ್ಕೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಹಾದುಹೋಗುವ ಪಶ್ಚಿಮ ಘಟ್ಟಗಳ ೫೬,೮೨೫ ಚದರ ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ ಕೇರಳ ರಾಜ್ಯದಲ್ಲಿ ೩,೧೧೫ ಚದರ ಕಿ.ಮೀ. ಪ್ರದೇಶವನ್ನು ಇದರ ವ್ಯಾಪ್ತಿಯಿಂದ ಹೊರಗಿರಿಸುವ ಮೂಲಕ ಆ ರಾಜ್ಯದಲ್ಲಿ ರಾಜಕೀಯ ಲಾಭ ಗಳಿಸುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.ಆರಂಭದಲ್ಲಿ ಘಟ್ಟದ ಸೂಕ್ಷ್ಮ ಜೀವವೈವಿಧ್ಯವನ್ನು ಅಧ್ಯಯನ ಮಾಡಲು ನೇಮಿಸಿದ್ದ ಡಾ.ಮಾಧವ ಗಾಡ್ಗೀಳ್‌ ಸಮಿತಿಯು ೧.೬೦ ಲಕ್ಷ ಚದರ ಕಿ.ಮೀ. ಪ್ರದೇಶವನ್ನು ನಿಯಂತ್ರಿತ ಅಭಿವೃದ್ಧಿ ಪ್ರದೇಶ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತ­ವಾ­ದಾಗ ಗಾಡ್ಗೀಳ್ ಸಮಿತಿಯ ವರದಿ ಪರಿಶೀಲನೆಗೆ ಡಾ.ಕೆ.ಕಸ್ತೂರಿರಂಗನ್‌ ಸಮಿತಿಯನ್ನು ಕೇಂದ್ರವು ರಚಿಸಿತ್ತು. ಈ ಸಮಿತಿಯು 60 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಮಾನ್ಯ ಮಾಡಲು ಸಲಹೆ ನೀಡಿತ್ತು.ರಾಷ್ಟ್ರೀಯ ಪರಿಸರ ನ್ಯಾಯಮಂಡಲಿಯು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ನಂತರ ಕಸ್ತೂರಿರಂಗನ್‌ ಸಮಿತಿ ಶಿಫಾರಸಿಗೆ ಒಪ್ಪಿಗೆ ದೊರಕಿತು. ಆದರೆ ಕೇರಳದಲ್ಲಿ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿ ೧೨೩ ಗ್ರಾಮ­ಗಳು ಹಾಗೂ ಕೃಷಿ ಭೂಮಿಯನ್ನು ವರದಿಯ ವ್ಯಾಪ್ತಿಯಿಂದ ಕೈ­ಬಿಡು­ವಂತೆ ನಡೆದ ಪ್ರತಿಭಟನೆ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರದ ಒತ್ತಡಕ್ಕೆ ಕೇಂದ್ರ ಮಣಿದಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿ­ಸು­ತ್ತದೆ. ಇದರ  ಹಿಂದೆ ರಾಜಕೀಯ ಲಾಭ ಗಳಿಸುವ ಉದ್ದೇಶವೂ ಇದ್ದಂತಿದೆ.

ಅಂತಿಮ ಅಧಿಸೂಚನೆಗೆ ೬೦ ದಿನ ಸಮಯವಿದ್ದು, ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ ಆರು ರಾಜ್ಯಗಳು ಈ ಸಮಯದಲ್ಲಿ ಆಕ್ಷೇಪಗಳನ್ನು ಸಲ್ಲಿ­ಸಲು ಅವಕಾಶವಿದೆ. ಕೇರಳ ಮಾದರಿಯಲ್ಲೇ ಕೊಡಗು ಜಿಲ್ಲೆಯ ಹಲವು ಕಡೆಯೂ  ಕಸ್ತೂರಿರಂಗನ್‌ ಸಮಿತಿ ನೀಡಿರುವ ವರದಿಯ ವಿರುದ್ಧ ಪ್ರತಿ­ಭಟನೆ ನಡೆದಿತ್ತು. ಘಟ್ಟದ ಕೆಲ ಪ್ರದೇಶವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡುವುದಾಗಿ ‘ಯುನೆಸ್ಕೊ’ ಹೇಳಿದಾಗಲೂ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿತ್ತು.ವಾಸ್ತವವಾಗಿ ಪರಿಸರಕ್ಕೆ ಹಾನಿ ತರುವ ಗಣಿ­ಗಾರಿಕೆ, ಕಲ್ಲು ಗಣಿಗಾರಿಕೆ, ಉಷ್ಣ ವಿದ್ಯುತ್‌ ಘಟಕ ಸೂಕ್ಷ್ಮ ಪ್ರದೇಶದಲ್ಲಿ ತಲೆ­ಯೆತ್ತಲು ಸಾಧ್ಯವಿಲ್ಲ. ೨೦ ಸಾವಿರ ಚದರ ಮೀಟರ್‌ಗಿಂತ ದೊಡ್ಡ ಕಟ್ಟಡ ಅಥವಾ ಟೌನ್‌ಶಿಪ್‌ ನಿರ್ಮಾಣ ಸಾಧ್ಯವಿಲ್ಲ. ಉಳಿದಂತೆ ಅರಣ್ಯ ಸಂರ­ಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲೇ ಅಭಿವೃದ್ಧಿ ಚಟುವಟಿಕೆ ನಡೆಸಬಹುದು. ಎಲ್ಲಾ ಯೋಜನೆಗಳಿಗೂ ಗ್ರಾಮ ಸಭೆಗಳ ಅನುಮತಿ ಅಗತ್ಯ.ಈಗಿರುವ ಜನವಸತಿ ಪ್ರದೇಶ, ಗದ್ದೆ, ತೋಟಕ್ಕೆ ಯಾವುದೇ ಧಕ್ಕೆ ಮಾಡಬಾರದು ಎನ್ನುವ ಸಮಿತಿ ಶಿಫಾರಸನ್ನು ಕೇಂದ್ರ ಈಗಾಗಲೇ ಒಪ್ಪಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ, ಪ್ರತಿಭಟನೆ ಮಾಡುವ ಜನರಿಗೆ ಮನದಟ್ಟು ಮಾಡಬೇಕಿತ್ತು. ಅದನ್ನು ಬಿಟ್ಟು ಕೇರಳದ ಒತ್ತಡಕ್ಕೆ ಮಣಿದಿರುವುದು  ಸರಿಯಲ್ಲ.  ಇದು, ಪಶ್ಚಿಮ ಘಟ್ಟ ವ್ಯಾಪ್ತಿಯ ಉಳಿದ ರಾಜ್ಯಗಳಿಗೆ ತಪ್ಪು ಸಂದೇಶ ರವಾನಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.