ಮಂಗಳವಾರ, ಮೇ 11, 2021
27 °C

ರಾಜ್ಯದ ಅಧಿಕಾರದಲ್ಲಿ ಕೇಂದ್ರದ ಹಸ್ತಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಮತೀಯ ಹಿಂಸಾಚಾರ ತಡೆ ಮಸೂದೆ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯದ ಸಂವಿಧಾನಿಕ ಅಧಿಕಾರವನ್ನು ಕಿತ್ತುಕೊಳ್ಳಲು ಮುಂದಾಗುತ್ತಿದೆ” ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ ಜೇಟ್ಲಿ ಆರೋಪಿಸಿದರು.ನಗರದ ಗಾಂಧಿಭವನದಲ್ಲಿ ಅಧಿವಕ್ತಾ ಪರಿಷತ್ ಭಾನುವಾರ ಏರ್ಪಡಿಸಿದ್ದ `ಮತೀಯ ಹಿಂಸಾಚಾರ ತಡೆ ಮಸೂದೆ-2011~ ಕುರಿತ ಜನಜಾಗೃತಿ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.“ಈ ಮಸೂದೆ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಹೀಗಾಗಿ ಈ ಮಸೂದೆ ಕುರಿತು ಚರ್ಚಿಸಲು ಪ್ರಧಾನಿ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಆಡಳಿತದ ಯಾವೊಬ್ಬ ಮುಖ್ಯಮಂತ್ರಿಯೂ ಮಸೂದೆ ಪರವಾಗಿ ಮಾತನಾಡಲಿಲ್ಲ. ಈ ಮಸೂದೆ ಬಗ್ಗೆ ಎಲ್ಲ ರಾಜ್ಯಗಳ ವಿರೋಧ ಇರುವುದು ಸಭೆಯಲ್ಲಿ ಎದ್ದು ಕಾಣುತ್ತಿತ್ತು” ಎಂದು ಜೇಟ್ಲಿ ಹೇಳಿದರು.“ಈ ಮಸೂದೆ ನಾವು ಹುಟ್ಟಿದ ಧರ್ಮವನ್ನು ಆಧರಿಸಿ ಅಪರಾಧ ನಿರ್ಧರಿಸುತ್ತದೆ. ಸಂಘಟನೆಯ ಕಾರ್ಯಕರ್ತ ತಪ್ಪು ಮಾಡಿದರೆ, ಸಂಘಟನೆಯ ಮುಖ್ಯಸ್ಥನನ್ನು ಶಿಕ್ಷಿಸಬೇಕು ಎನ್ನುತ್ತದೆ. ಅಪರಾಧವನ್ನು ಭಾಷೆ-ಧರ್ಮದ ಮೇಲೆ ವಿಂಗಡಿಸಲಾಗಿದೆ. ಅಲ್ಪಸಂಖ್ಯಾತ-ಬಹುಸಂಖ್ಯಾತರೆಂದು ವಿಂಗಡಿಸುವ ಮೂಲಕ ಸಂವಿಧಾನದಲ್ಲಿ ಉಲ್ಲೇಖಿಸಿರುವ `ಸಮಾನತೆ~ಗೆ ಧಕ್ಕೆ ತರಲಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು.ದುರ್ಬಲ ಪ್ರಧಾನಿ: “ರಾಷ್ಟ್ರೀಯ ಸಲಹಾ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಏಕಪಕ್ಷೀಯವಾಗಿ ಸಿದ್ಧಪಡಿಸಿದ ಈ ಮಸೂದೆಯನ್ನು ಜಾರಿಗೊಳಿಸುವಂತೆ ಪ್ರಧಾನಿಯ ಮುಂದಿಟ್ಟಿದ್ದಾರೆ. ಯಾವುದೇ ಸ್ವಂತ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದ ಪ್ರಧಾನಿ ಮನಮೋಹನ್ ಸಿಂಗ್ ಮಸೂದೆ ಜಾರಿಗಾಗಿ ಹೆಣಗಾಡುತ್ತಿದ್ದಾರೆ” ಎಂದು ದೂರಿದರು.“ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿಯ ರಾಜನೀತಿಕ ಹಾಗೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಪ್ರಧಾನಿ ಅವರನ್ನು ದುರ್ಬಲರನ್ನಾಗಿಸಿತು. ಹಾಗಾಗಿ ದೇಶದ ಅರ್ಥವ್ಯವಸ್ಥೆ ಇಷ್ಟೊಂದು ಪ್ರಮಾಣದಲ್ಲಿ ಹದಗೆಟ್ಟಿದ್ದರೂ ಪ್ರಧಾನಿ ಸ್ವತಃ ಆರ್ಥಿಕ ತಜ್ಞರಾದರೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ” ಎಂದು ವಿಶ್ಲೇಷಿಸಿದರು.“ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದಾಗ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಿಲ್ಲ. ಬೋಫರ್ಸ್ ಹಗರಣ, 2ಜಿ ತರಂಗ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ ನಡೆದಿರುವುದೇ ಇಂದಿನ ಆರ್ಥಿಕ ವ್ಯವಸ್ಥೆ ಹದಗೆಡಲು ಮುಖ್ಯ ಕಾರಣ. `ವೋಟಿಗಾಗಿ ನೋಟು~ ಹಗರಣ ನಡೆದಾಗ ಪ್ರಧಾನಿ ಒಂದು ಕ್ಷಣವೂ ತಡಮಾಡದೇ ರಾಜೀನಾಮೆ ನೀಡಬೇಕಿತ್ತು. ಆದರೆ, ಅಂದು ಪಿ.ವಿ. ನರಸಿಂಹರಾವ್, ಇಂದು ಮನಮೋಹನ್ ಸಿಂಗ್ ಸಂಸದರಿಗೆ ಹಣ ನೀಡಿಯೇ ಅಧಿಕಾರ ಉಳಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.“ಕಾಂಗ್ರೆಸ್ ಕುಟುಂಬ ರಾಜಕಾರಣ ಶುರುಮಾಡಿದೆ. ಅಧಿಕಾರಕ್ಕೆ ಬರಲು ಆ ಕುಟುಂಬದವನೆಂಬ ಒಂದು `ಅರ್ಹತೆ~ ಇದ್ದರೆ ಸಾಕು. ರಾಜಕೀಯ ಪಕ್ಷದ ನೇತೃತ್ವವನ್ನು ದಕ್ಷತೆ ಮತ್ತು ಅಪಾರ ಅನುಭವ ಇರುವವರೇ ವಹಿಸಬೇಕು. ಅದು ಆಗುವವರೆಗೂ ರಾಜನೀತಿಗೆ ಅರ್ಥ ಬರುವುದಿಲ್ಲ” ಎಂದು ಜೇಟ್ಲಿ ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಅಧಿವಕ್ತಾ ಪರಿಷತ್‌ನ ಕರ್ನಾಟಕ ಘಟಕದ ಅಧ್ಯಕ್ಷ ಎಲ್.ಎನ್. ಹೆಗಡೆ, ಪರಿಷತ್‌ನ ಚಟುವಟಿಕೆಗಳನ್ನು ವಿವರಿಸಿದರು. ಸ್ನೇಹಾ ದೇಶಭಕ್ತಿಗೀತೆ ಹಾಡಿದರು. ವಕೀಲ ಎಂ.ಬಿ. ಜಿರಲಿ ಸ್ವಾಗತಿಸಿದರು. ಪರಿಷತ್‌ನ ಬೆಳಗಾವಿ ಘಟಕದ ಅಧ್ಯಕ್ಷ ಬಿ.ಎನ್. ಕೂಗುನವರ ಹಾಗೂ ಕಾರ್ಯದರ್ಶಿ ಎಸ್.ಎಸ್. ಹಾಲಭಾವಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.