ಶುಕ್ರವಾರ, ಜೂನ್ 25, 2021
27 °C

ರಾಜ್ಯದ ಆರ್ಥಿಕ ಸಮೀಕ್ಷೆ ಪ್ರಕಟ: ಕೃಷಿ, ಕೈಗಾರಿಕೆಯಲ್ಲಿ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಅನುಕ್ರಮವಾಗಿ ಶೇಕಡ 3.6 ಹಾಗೂ ಶೇ 2.9ರಷ್ಟು ಹಿನ್ನಡೆ ಅನುಭವಿಸಿವೆ. ಸೇವಾ ವಲಯ ಮಾತ್ರ ಹೆಚ್ಚಿನ ಪ್ರಗತಿ ಸಾಧಿಸಿದ್ದು, ಶೇ 10.6ರಷ್ಟು ಬೆಳವಣಿಗೆ ದಾಖಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಶೇ 6.4ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.ಯೋಜನಾ ಇಲಾಖೆಯು ಮಂಗಳವಾರ ಬಿಡುಗಡೆ ಮಾಡಿರುವ ರಾಜ್ಯದ ಪ್ರಸಕ್ತ ಸಾಲಿನ (2011-12) ಆರ್ಥಿಕ ಸಮೀಕ್ಷೆಯಲ್ಲಿ ಈ ವಿಷಯವನ್ನು ಬಹಿರಂಪಡಿಸಿದೆ. ಈ ಬಾರಿಯ ಮುನ್ಸೂಚನಾ ಅಂದಾಜಿನ ಪ್ರಕಾರ 2004-05ನೇ ಸಾಲಿನ ಸ್ಥಿರ ಬೆಲೆಗಳಲ್ಲಿ ರಾಜ್ಯದ ಜಿಎಸ್‌ಡಿಪಿ ಮೊತ್ತ 2,97,964 ಕೋಟಿ ರೂಪಾಯಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಜಿಎಸ್‌ಡಿಪಿ ಮೊತ್ತ ರೂ 2,79,932 ಕೋಟಿ ಇತ್ತು.ಸಮೀಕ್ಷೆಯ ಪ್ರಕಾರ, 2010-11ರಲ್ಲಿ ರಾಜ್ಯದ ಜಿಎಸ್‌ಡಿಪಿಗೆ ಕೃಷಿ ಮತ್ತು ಅವಲಂಬಿತ ಚಟುವಟಿಕೆಗಳ ಪಾಲು ಶೇ 16.9 ಇತ್ತು. ಕೈಗಾರಿಕಾ ವಲಯದ ಕೊಡುಗೆ ಶೇ 28.6 ಇತ್ತು. ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇ 15.9 ಮತ್ತು ಶೇ 27.7ಕ್ಕೆ ಕುಸಿದಿದೆ. ಆದರೆ, ಸೇವಾ ವಲಯದ ಕೊಡುಗೆ ಶೇ 54.6ರಿಂದ ಶೇ 56.3ಕ್ಕೆ ಏರಿಕೆಯಾಗಿದೆ.ಕಳೆದ ವರ್ಷ ರಾಜ್ಯವು ಆಹಾರ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. 124.21 ಲಕ್ಷ ಟನ್ ಏಕದಳ ಧಾನ್ಯ ಮತ್ತು 15.65 ಲಕ್ಷ ಟನ್ ದ್ವಿದಳ ಧಾನ್ಯ ಸೇರಿದಂತೆ ಒಟ್ಟು 139.86 ಲಕ್ಷ ಟನ್ ಆಹಾರ ಧಾನ್ಯ ಈ ಅವಧಿಯಲ್ಲಿ ಉತ್ಪಾದನೆಯಾಗಿತ್ತು.ಆದರೆ, ರಾಜ್ಯದ ಬಹುತೇಕ ಭಾಗಗಳಲ್ಲಿ ಬರಗಾಲ ಉಂಟಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಹಾನಿಯಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಆಹಾರ ಧಾನ್ಯದ ಉತ್ಪಾದನೆ 124.24 ಲಕ್ಷ ಟನ್‌ಗೆ ಕುಸಿಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಕನಿಷ್ಠ 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯ ಗುರಿ ಇತ್ತು. ಹಾಲು, ಮಾಂಸ ಮತ್ತು ಉಣ್ಣೆ ಉತ್ಪಾದನೆಯಲ್ಲಿ ಪ್ರಗತಿ ಸ್ಥಿರವಾಗಿದೆ.ವರಮಾನದಲ್ಲಿ ಏರಿಕೆ: ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ 2010-11ನೇ ಸಾಲಿನಲ್ಲಿ ಕಾಣಿಸಿಕೊಂಡಿದ್ದ ಚೇತರಿಕೆ ಸ್ಥಿತಿ ಈ ವರ್ಷವೂ ಮುಂದುವರಿದಿದೆ. ಪ್ರಸಕ್ತ ವರ್ಷ ರಾಜಸ್ವ ಸಂಗ್ರಹಣೆಯಲ್ಲಿ ಶೇ 15.27ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯಲ್ಲಿ ಇಳಿಮುಖವಾಗಿದೆ. 2008-09ರಲ್ಲಿ ರಾಜ್ಯದ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ 3.23ರಷ್ಟಿತ್ತು. ಈ ಬಾರಿ ವಿತ್ತೀಯ ಕೊರತೆ ಪ್ರಮಾಣ ಶೇ 2.87ಕ್ಕೆ ಕುಸಿದಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಶೇ 14ರಷ್ಟು ಬೆಳವಣಿಗೆ ದಾಖಲಾಗಿದೆ. 2007-08ರಲ್ಲಿ ಸ್ವಂತ ತೆರಿಗೆ ಸಂಗ್ರಹದ ಮೊತ್ತ 25,987 ಕೋಟಿ ರೂಪಾಯಿ ಇತ್ತು. ಪ್ರಸಕ್ತ ಸಾಲಿನಲ್ಲಿ ಈ ಮೊತ್ತ ರೂ 43,817 ಕೋಟಿಗೆ ಹೆಚ್ಚಳವಾಗಿದೆ.ಅಭಿವೃದ್ಧಿ ವೆಚ್ಚದ ಪಾಲಿನಲ್ಲೂ ಹೆಚ್ಚಳವಾಗಿದೆ. 2010-11ರಲ್ಲಿ ಶೇ 8.95ರಷ್ಟಿದ್ದ ಅಭಿವೃದ್ಧಿ ವೆಚ್ಚ ಈ ವರ್ಷ ಶೇ 13.23ಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ರಾಜ್ಯದ ನಿವ್ವಳ ತಲಾದಾಯವು ಶೇ 14ರಷ್ಟು ಏರಿಕೆಯಾಗಿದೆ. 2010-11ರಲ್ಲಿ ನಿವ್ವಳ ತಲಾದಾಯ ರೂ 60,946 ಇತ್ತು. ಈ ವರ್ಷ ಅದು 69,493 ರೂಪಾಯಿಗೆ ಹೆಚ್ಚಳವಾಗಿದೆ.ಲಕ್ಷ ಕೋಟಿ ಸಾಲ: ಸಂಯುಕ್ತ ವಾರ್ಷಿಕ ಬೆಳವಣಿಗೆ ದರದ ಅವಧಿಯಲ್ಲಿ ರಾಜ್ಯದ ಸಾಲದ ಮೊತ್ತದಲ್ಲಿ ಶೇ 13.1ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ರಾಜ್ಯದ ಒಟ್ಟು ಸಾಲದ ಮೊತ್ತ ರೂ 63,844 ಕೋಟಿಯಿಂದ ರೂ 1,04,445 ಕೋಟಿಗೆ ಏರಿಕೆಯಾಗಿದೆ. ಆದರೂ ರಾಜ್ಯದ ಸಾಲದ ಪ್ರಮಾಣ 13ನೇ ಹಣಕಾಸು ಆಯೋಗ ನಿಗದಿಪಡಿಸಿರುವ ಮಿತಿಯಲ್ಲಿ (ಶೇ 25) ಇದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

 

ಕಳೆದ ವರ್ಷಕ್ಕೆ ಹೋಲಿಸಿದರೆ ಬಂಡವಾಳ ಜಮೆಯಲ್ಲಿ ಶೇ 21.38ರಷ್ಟು ವೃದ್ಧಿಯಾಗಿದೆ. ರಾಜಸ್ವ ಜಮೆಯಲ್ಲಿ ಶೇ 14.76ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಒಟ್ಟಾರೆ ಜಮೆಯಲ್ಲಿ ಶೇ 16.03ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿನ ವಾಸ್ತವಿಕ ವೆಚ್ಚದ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 15.94ರಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.ವಿದೇಶಿ ನೇರ ಬಂಡವಾಳ ಹರಿವಿನಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ದೇಶಕ್ಕೆ ಬರುತ್ತಿರುವ ವಿದೇಶಿ ನೇರ ಬಂಡವಾಳದಲ್ಲಿ ಶೇ 6ರಷ್ಟು ಕರ್ನಾಟಕಕ್ಕೆ ಬರುತ್ತಿದೆ. ಬ್ಯಾಂಕಿಂಗ್ ಜಾಲದ ಮೂಲಕ ಸರಾಸರಿ ಠೇವಣಿ ಸಂಗ್ರಹ ಮತ್ತು ಸಾಲ ನೀಡಿಕೆಯಲ್ಲಿ ಕರ್ನಾಟಕವು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.