ಬುಧವಾರ, ಏಪ್ರಿಲ್ 21, 2021
30 °C

`ರಾಜ್ಯದ ಕಾರ್ಮಿಕರು ತುಂಬಾ ದುಬಾರಿ'

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

`ರಾಜ್ಯದ ಕಾರ್ಮಿಕರು ತುಂಬಾ ದುಬಾರಿ'

ಕೃಷಿ ಹೊರತುಪಡಿಸಿದರೆ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ  ನೀಡಿರುವ ಕ್ಷೇತ್ರ ಗಾರ್ಮೆಂಟ್ ಉದ್ಯಮ. ಒಟ್ಟಾರೆ ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಗಾರ್ಮೆಂಟ್ ಕ್ಷೇತ್ರದ ಕೊಡುಗೆ ಶೇ 4ರಷ್ಟಿದೆ. ಷೆಡ್, ಗೊಡೌನ್‌ಗಳಲ್ಲಿ ಕಾರ್ಯನಿರ್ವಹಿಸುವಂತ ಚಿಕ್ಕ ಚಿಕ್ಕ ಘಟಕಗಳನ್ನೂ ಸೇರಿಸಿದರೆ ರಾಜ್ಯದ್ಲ್ಲಲಿರುವ ಒಟ್ಟು ಗಾರ್ಮೆಂಟ್ ಘಟಕಗಳ ಸಂಖ್ಯೆ  4 ಸಾವಿರ ದಾಟಬಹುದು.

ಇದರಲ್ಲಿ 2500ಕ್ಕಿಂತ ಹೆಚ್ಚಿನ ಘಟಕಗಳು ಬೆಂಗಳೂರಿನಲ್ಲೇ ನೆಲೆಗೊಂಡಿವೆ. ಸುಮಾರು 8 ಲಕ್ಷ ಜನರಿಗೆ  ಉದ್ಯೋಗ (ಶೇ 60ರಷ್ಟು ಮಹಿಳೆಯರು) ನೀಡಿರುವ ರಾಜ್ಯದ ಗಾರ್ಮೆಂಟ್ ಕ್ಷೇತ್ರದ ವಾರ್ಷಿಕ ವಹಿವಾಟು ರೂ.5 ರಿಂದ ರೂ.6 ಸಾವಿರ ಕೋಟಿ.

ಸುಮಾರು ರೂ.30 ಸಾವಿರ ಕೋಟಿ ಮೌಲ್ಯದ ಸಿದ್ಧ ಉಡುಪುಗಳು  ಇಲ್ಲಿಂದ ಅಮೆರಿಕ, ಯುರೋಪ್ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಸ್ಥಳೀಯ ಮಾರುಕಟ್ಟೆ ಸ್ಥಿರವಾಗಿದ್ದರೂ, ಒಟ್ಟಾರೆ ಗಾರ್ಮೆಂಟ್ ಕ್ಷೇತ್ರ ರಫ್ತು ವಹಿವಾಟನ್ನೇ ಮುಖ್ಯವಾಗಿ ನೆಚ್ಚಿಕೊಂಡಿದೆ.

ಗಾರ್ಮೆಂಟ್ ಕಾರ್ಮಿಕರಿಗೆ  ಘನತೆಯಿಂದ ಬದುಕುವುದಕ್ಕೆ ಸಾಕಾಗುವಷ್ಟು  ವೇತನ ಲಭಿಸುತ್ತಿಲ್ಲ ಎಂದು ಇತ್ತೀಚೆಗೆ `ರಾಷ್ಟ್ರೀಯ ಜನ ನ್ಯಾಯ ಮಂಡಳಿ' ತೀರ್ಪು ನೀಡಿದೆ.  ಆದರೆ, ಈ ಕುರಿತು ಗಾರ್ಮೆಂಟ್ ಘಟಕಗಳ ಮಾಲೀಕರ ಪ್ರತಿಕ್ರಿಯೆಗಳು ವಿರುದ್ಧವಾಗಿವೆ.`ಬೇರೆ ಯಾವುದೇ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಗಾರ್ಮೆಂಟ್ ಕಾರ್ಮಿಕರಿಗೆ ಅತಿ ಹೆಚ್ಚು ವೇತನವಿದೆ. ಇಲ್ಲಿ ಒಬ್ಬ ಟೈಲರ್‌ಗೆ ಮಾಸಿಕ ರೂ.5 ರಿಂದ ರೂ.6 ಸಾವಿರ ವೇತನ ನೀಡಲಾಗುತ್ತದೆ.  ದುಡಿಮೆ ಅವಧಿ 8 ಗಂಟೆ. ಹೆಚ್ಚುವರಿ ಅವಧಿ ಕೆಲಸ ಮಾಡಿದರೆ ಅದಕ್ಕೆ ಪ್ರತ್ಯೇಕ ಭತ್ಯೆ ಇದೆ.

ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಕರೆ ತರಲು ಮತ್ತು ಮರಳಿ ಬಸ್‌ನಿಲ್ದಾಣಕ್ಕೆ ತಲುಪಿಸಲು ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇಂತಹ ಯಾವುದೇ ಸೌಲಭ್ಯ ಉಳಿದೆಡೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಕಾರ್ಮಿಕರು ತುಂಬಾ `ದುಬಾರಿ' ಆಗಿರುವುದರಿಂದಲೇ ಅನೇಕ ಗಾರ್ಮೆಂಟ್ ಘಟಕಗಳು ಬಾಗಿಲು ಮುಚ್ಚಬೇಕಾಗಿ ಬಂದಿವೆ' ಎನ್ನುತ್ತಾರೆ ಭಾರತೀಯ ಸಿದ್ಧ ಉಡುಪು  ತಯಾರಕರ ಸಂಘಟನೆಯ (ಸಿಎಂಎಐ) ಬೆಂಗಳೂರು ಘಟಕದ ಮುಖ್ಯಸ್ಥ ಪಾಂಡು.

ಇತ್ತೀಚಿನ ವರ್ಷಗಳಲ್ಲಿ ಮೆಟ್ರೋ ನಗರಗಳಲ್ಲಿನ ಜೀವನ ಶೈಲಿ ಮತ್ತು ಜೀವನ ನಿರ್ವಹಣೆ ವೆಚ್ಚ  ಹೆಚ್ಚಿರುವುದರಿಂದ ಗಾರ್ಮೆಂಟ್ ಘಟಕಗಳು ನೀಡುತ್ತಿರುವ ವೇತನ ಕಾರ್ಮಿಕರಿಗೆ ಸಾಲುತ್ತಿಲ್ಲ. ರೂ.6 ಸಾವಿರ ವೇತನ ಪಡೆದು ಬೆಂಗಳೂರಿನಂತ ನಗರಗಳಲ್ಲಿ ಜೀವನ ನಡೆಸುವುದು ಕಷ್ಟ ಎನ್ನುವುದನ್ನು ನಾವೂ ಒಪ್ಪಿಕೊಳ್ಳುತ್ತೇವೆ.

ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಇತ್ಯಾದಿ ಸಂಗತಿಗಳಿಗೆ ನಾವು ಹೇಗೆ ಹೊಣೆಗಾರರಾಗುತ್ತೇವೆ? ಇದನ್ನು ಸರ್ಕಾರ ನಿಯಂತ್ರಿಸಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಕಚ್ಚಾ ಸರಕುಗಳ ಬೆಲೆ ಎರಡು ಪಟ್ಟು ಹೆಚ್ಚಳಗೊಂಡಿದೆ.

ಆದರೆ, ಸಿದ್ಧ ಉಡುಪುಗಳ ರಿಟೇಲ್ ದರದಲ್ಲಿ ಶೇ 20ರಷ್ಟು ಮಾತ್ರ ಹೆಚ್ಚಳವಾಗಿದೆ. ಇದರ ಜತೆಗೆ ಸರ್ಕಾರ ರಫ್ತು ಸಬ್ಸಿಡಿ ಕಡಿತಗೊಳಿಸಿ ಗಾರ್ಮೆಂಟ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ 12ರಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಅವರು.

ಬಾಂಗ್ಲಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಸಿದ್ಧ ಉಡುಪುಗಳ ಅಬಕಾರಿ ತೆರಿಗೆ ಕನಿಷ್ಠ ಮಟ್ಟದಲ್ಲಿದೆ. ಇದರಿಂದ ಭಾರತದ ಅನೇಕ ಗಾರ್ಮೆಂಟ್ ಘಟಕಗಳು ಬಾಂಗ್ಲಾದೇಶದಲ್ಲಿ ಸಿದ್ಧ ಉಡುಪುಗಳನ್ನು ತಯಾರಿಸಿ, ಅದೇ ಸರಕನ್ನು ಭಾರತದ ಮಾರುಕಟ್ಟೆಗೆ ತಂದು ಸುರಿಯುತ್ತವೆ.

ಭಾರತದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಬೇಕಾದರೆ ಎರಡೂ ದೇಶಗಳಲ್ಲಿ ತೆರಿಗೆ ಪಾವತಿಸಬೇಕು. ಇದರ ಜತೆಗೆ ಇತ್ತೀಚೆಗೆ ಕೇಂದ್ರ ಸರ್ಕಾರ ರಫ್ತು ಉತ್ತೇಜನ ಸಬ್ಸಿಡಿಯನ್ನೂ  ಕಡಿತ ಮಾಡಿದೆ. ಈ ಎಲ್ಲ ಕಾರಣಗಳಿಂದ ನಾವು ಅಂತರರಾಷ್ಟ್ರೀಯ ಮಾರುಕಟ್ಟೆ ಜತೆ ಸ್ಪರ್ಧಿಸಲಾಗುತ್ತಿಲ್ಲ.

ದೇಶೀಯ ಮಾರುಕಟ್ಟೆಯನ್ನೇ ನೆಚ್ಚಿಕೊಂಡು ಉದ್ಯಮ ವಿಸ್ತರಿಸಲು ಸಾಧ್ಯವಿಲ್ಲ. ಅನೇಕ ಮಾಲೀಕರು ತಮ್ಮ ಘಟಕಗಳನ್ನು ಸ್ಥಗಿತಗೊಳಿಸಲು ಇದೂ ಒಂದು ಮುಖ್ಯ ಕಾರಣ' ಎನ್ನುತ್ತಾರೆ `ಕರ್ನಾಟಕ ಹೊಸೈರಿ ಅಂಡ್ ಗಾರ್ಮೆಂಟ್ ಅಸೋಷಿಯೇಷನ್'ನ ಮಾಜಿ ಅಧ್ಯಕ್ಷ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಸ್ಥಳೀಯ ಸಂಘಟನೆ ಸಮಿತಿಯ ಸಹ ಅಧ್ಯಕ್ಷ ಪಿ.ಎಚ್. ರಾಜ್‌ಪುರೋಹಿತ್.

ಕೌಶಲದ ಕೊರತೆ : ರಾಜ್ಯದ ಗಾರ್ಮೆಂಟ್ ಕ್ಷೇತ್ರದಲ್ಲಿ ಇನ್ನೂ 2 ಲಕ್ಷದಷ್ಟು ಉದ್ಯೋಗಾವಕಾಶಗಳಿವೆ. ಆದರೆ, ಕೌಶಲ ಹೊಂದಿದ ಕಾರ್ಮಿಕರ ಕೊರತೆ ಕಾಡುತ್ತಿದೆ. ಕೃಷಿಯ ನಂತರ ಆರ್ಥಿಕ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ನೀಡುತ್ತಿರುವ ಗಾರ್ಮೆಂಟ್  ಕ್ಷೇತ್ರವನ್ನು ಸರ್ಕಾರವೇ ನಿರ್ಲಕ್ಷಿಸಿರುವುದಕ್ಕೆ ಇದು ಉತ್ತಮ ಉದಾಹರಣೆ.ಕೃಷಿಗೆ ಲಭಿಸುತ್ತಿರುವ ಅರ್ಧದಷ್ಟು ಉತ್ತೇಜನವೂ ಗಾರ್ಮೆಂಟ್‌ಗೆ ಲಭಿಸುತ್ತಿಲ್ಲ. ರಾಜ್ಯದ ಶೇ 80ರಷ್ಟು ಗಾರ್ವೆುಂಟ್ ಘಟಕಗಳು ಬೆಂಗಳೂರಿನಲ್ಲೇ ನೆಲೆಗೊಂಡಿವೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಮೂಲಸೌಕರ್ಯ ವ್ಯವಸ್ಥೆ ಮತ್ತು ರಫ್ತು ಅವಕಾಶ.ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಶಿವಮೊಗ್ಗ, ತುಮಕೂರಿನಂತಹ ಎರಡು ಮತ್ತು ಮೂರನೆಯ ಹಂತದ ನಗರಗಳಿಗೆ ಉಳಿದ ಉದ್ಯಮಗಳಂತೆ ಗಾರ್ಮೆಂಟ್ ಘಟಕಗಳನ್ನು ವಿಸ್ತರಿಸಬೇಕು. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು.

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ `ಕೌಶಲ ತರಬೇತಿ ಕೇಂದ್ರ' ಪ್ರಾರಂಭಿಸಿದರೆ  ಕಾರ್ಮಿಕರ ಕೊರತೆ ನೀಗುತ್ತದೆ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಬೆಂಗಳೂರಿನಲ್ಲಿ ಲಭಿಸುವಷ್ಟು ವೇತನ ಸ್ಥಳೀಯವಾಗಿಯೇ ಕಾರ್ಮಿಕರಿಗೆ ಲಭಿಸುತ್ತದೆ.

ಮೆಟ್ರೊ ನಗರಗಳಿಗಿಂತ ಎರಡು ಮತ್ತು ಮೂರನೆಯ ಹಂತದ ನಗರಗಳಲ್ಲಿ ಜೀವನ ನಿರ್ವಹಣೆ ವೆಚ್ಚ ಕಡಿಮೆ. ಇದರಿಂದ ಕಾರ್ಮಿಕರಿಗೆ ತಮಗೆ ಲಭಿಸುವ ವೇತನದ ಬಗ್ಗೆ ಅತೃಪ್ತಿ ಇರುವುದಿಲ್ಲ.  ಇದರಿಂದ ಅಭಿವೃದ್ಧಿ ಯೋಜನೆಗಳು ವಿಕೇಂದ್ರೀಕರಣ ಆಗುತ್ತವೆ. ರಾಜ್ಯದಲ್ಲಿ ಔದ್ಯಮಿಕ ಸಮತೋಲನ ಕಾಯ್ದುಕೊಳ್ಳಲೂ ಸಹಾಯಕವಾಗುತ್ತದೆ.

ಆದರೆ, ದೊಡ್ಡಬಳ್ಳಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಿರುವುದು ಬಿಟ್ಟರೆ ರಾಜ್ಯ ಸರ್ಕಾರ ಗಾರ್ಮೆಂಟ್ ಕ್ಷೇತ್ರ ಅಭಿವೃದ್ಧಿಗೆ ಬೇರೆ ಏನೂ ಕ್ರಮ ಕೈಗೊಂಡಿಲ್ಲ. ಇದರ ಜತೆಗೆ ಮೂಲಸೌಕರ್ಯ ವ್ಯವಸ್ಥೆಯೂ ಅಭಿವೃದ್ಧಿಯಾಗಬೇಕು.

  ಇದನ್ನೆಲ್ಲ ಸರ್ಕಾರ ಮಾಡಬೇಕಾದ ಕೆಲಸ. ಕಳೆದ ಎರಡು ವರ್ಷಗಳಲ್ಲಿ 400ರಿಂದ 500 ಗಾರ್ಮೆಂಟ್ ಘಟಕಗಳು ಸ್ಥಗಿತಗೊಂಡಿವೆ ಎಂದರೆ ಅದಕ್ಕೆ ಮಾಲೀಕರು ಹೊಣೆಗಾರರಲ್ಲ, ಸರ್ಕಾರವೇ ಹೊಣೆ ಎನ್ನುತ್ತಾರೆ ಪಾಂಡು.

ಎಫ್‌ಡಿಐ ಮಾರಕ: ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಿರುವುದು ಸ್ಥಳೀಯ ಗಾರ್ಮೆಂಟ್ ಕ್ಷೇತ್ರವನ್ನೇ ನಿರ್ನಾಮ ಮಾಡಲಿದೆ. ವಾಲ್‌ಮಾರ್ಟ್‌ನಂತಹ ದಿಗ್ಗಜ ಕಂಪೆನಿಗಳು ಭಾರತಕ್ಕೆ ಬಂದರೆ ಇಲ್ಲಿನ ಸ್ಥಳೀಯ ಉದ್ಯಮಕ್ಕೆ ಯಾವುದೇ ಲಾಭವಿಲ್ಲ.

ವಾಲ್‌ಮಾರ್ಟ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಸಿದ್ಧ ಉಡುಪುಗಳನ್ನು ಚೀನಾದಿಂದ ಖರೀದಿಸುತ್ತವೆ. ಅಗ್ಗದ ದರದ ಚೀನಾ ಸರಕುಗಳನ್ನು ಭಾರತದ ಮಾರುಕಟ್ಟೆಗೆ ತಂದು ಸುರಿಯುತ್ತವೆ.

ಪ್ರಪಂಚದಲ್ಲಿಯೇ 6ನೇ ಅತಿ ದೊಡ್ಡ ಗಾರ್ಮೆಂಟ್ ರಫ್ತು ವಹಿವಾಟು ಸಂಸ್ಥೆಯಾದ  ಗೊಕುಲ್‌ದಾಸ್ ಎಕ್ಸ್‌ಪೋರ್ಟ್ಸ್ ಸಮೂಹವನ್ನೇ ಇತ್ತೀಚೆಗೆ ಅಮೆರಿಕಾ ಮೂಲದ ಹೂಡಿಕೆ ಸಂಸ್ಥೆ ಬ್ಲ್ಯಾಕ್‌ಸ್ಟೋನ್ ಖರೀದಿಸಿದೆ.

ಬೃಹತ್ ಕಂಪೆನಿಗಳ ಪರಿಸ್ಥಿತಿ ಹೀಗಾದರೆ, ಸಣ್ಣ ಪುಟ್ಟ ಘಟಕಗಳ ಸ್ಥಿತಿ ಏನು ಎನ್ನುತ್ತಾರೆ ಬೆಂಗಳೂರಿನ ಬ್ರಾಂಡೆಡ್ ಸಿದ್ಧ ಉಡುಪು ತಯಾರಿಕಾ ಘಟಕವೊಂದರ ವ್ಯವಸ್ಥಾಪಕ ಮನೋಜ್ ಕುಮಾರ್.

ಭಾರತದ ಸ್ಥಳೀಯ ಮಾರುಕಟ್ಟೆ ಸ್ಥಿರವಾಗಿರುವುದರಿಂದ  ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿನ ಗಾರ್ಮೆಂಟ್ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಆಸಕ್ತಿ ತೋರಿಸಿವೆ.

ಸರ್ಕಾರ ಇಂತಹ ಕಂಪೆನಿಗಳಿಗೆ ರತ್ನಗಂಬಳಿಯ ಸ್ವಾಗತ ನೀಡದೆ ಸ್ಥಳೀಯ ಉದ್ಯಮದ ಹಿತ ಕಾಯಬೇಕು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಜತೆ ಸ್ಪರ್ಧಿಸಲು ಅಗತ್ಯ ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ವಾಸವಿ  ಎಕ್ಸ್‌ಪೋರ್ಟ್ಸ್‌ನ ಸಿದ್ಧಾರ್ಥ.

`ನಾಲ್ಕು ವರ್ಷದ ಹಿಂದಿನ ಅಲೆ ಈಗಿಲ್ಲ'

`ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಇದ್ದಂತಹ ಗಾರ್ಮೆಂಟ್ ಅಲೆ ಈಗ ಇಲ್ಲ.  2002ರಿಂದ 2008ರ ನಡುವೆ ಶೇ 40ರಷ್ಟು ಘಟಕಗಳು ಸ್ಥಗಿತಗೊಂಡಿವೆ. ಬೆಂಗಳೂರು ಹೊರತುಪಡಿಸಿದರೆ, ಬಳ್ಳಾರಿ, ಬೆಳಗಾವಿ, ಬೀದರ್‌ನಲ್ಲಿ ಒಂದಿಷ್ಟು ಘಟಕಗಳಿವೆ.

ಗೊಕುಲ್‌ದಾಸ್, ಮಧುರಾ ಕೋಟ್ಸ್, ಪ್ರೊಲಾನ್, ಲೀಲಾ ಫ್ಯಾಷನ್, ಕಾಂಟಿನೆಂಟಲ್‌ನಂತ ಮುಂಚೂಣಿ ಕಂಪೆನಿಗಳೇ  ಬಿಕ್ಕಟ್ಟು ಎದುರಿಸುತ್ತಿವೆ. ಕಾರ್ಮಿಕರು ದುಬಾರಿ ಆಗಿರುವುದರಿಂದ ರಾಜ್ಯದ ಅನೇಕ ಘಟಕಗಳು ಗುಜರಾತ್‌ಗೆ ಸ್ಥಳಾಂತರಗೊಳ್ಳುತ್ತಿವೆ. ಇನ್ನೂ ಅನೇಕ ಕಂಪೆನಿಗಳು ನೆರೆಯ ಬಾಂಗ್ಲಾದೇಶದಲ್ಲಿ ಘಟಕ ಪ್ರಾರಂಭಿಸುತ್ತಿವೆ.

ಬಾಂಗ್ಲಾದೇಶದಲ್ಲಿ ಭಾರತಕ್ಕಿಂತ ಶೇ 30ರಷ್ಟು ಕಡಿಮೆ ವೇತನಕ್ಕೆ ಕಾರ್ಮಿಕರು ಲಭಿಸುತ್ತಾರೆ. ಅಲ್ಲಿ ಕೆಲಸದ ಅವಧಿ 12 ಗಂಟೆ.  ಮುಖ್ಯವಾಗಿ ಅಲ್ಲಿನ ಕಾರ್ಮಿಕ ನೀತಿಗಳು ಭಾರತದಷ್ಟು ಉದ್ಯಮ ವಿರೋಧಿಯಾಗಿಲ್ಲ'

`ಕರ್ನಾಟಕ ಹೊಸೈರಿ ಅಂಡ್ ಗಾರ್ಮೆಂಟ್ ಅಸೋಷಿಯೇಷನ್'ನ ಮಾಜಿ ಅಧ್ಯಕ್ಷ ಪಿ.ಎಚ್. ರಾಜ್‌ಪುರೋಹಿತ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.