ಶುಕ್ರವಾರ, ಮೇ 14, 2021
32 °C

ರಾಜ್ಯದ 200 ಜನರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

strong>ಬೆಂಗಳೂರು: ಉತ್ತರಾಖಂಡ ಪ್ರವಾಹದಿಂದ ತೊಂದರೆಗೆ ಒಳಗಾದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೂ 50 ಲಕ್ಷ   ಬಿಡುಗಡೆ ಮಾಡಿದ್ದಾರೆ. ಇದಲ್ಲದೆ ಉತ್ತರಾಖಂಡ ಸರ್ಕಾರಕ್ಕೆ ರೂ 5 ಕೋಟಿಗಳ ನೆರವು ನೀಡುವುದಾಗಿ ಘೋಷಿಸಿದ್ದಾರೆ.ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಕ್ಷೇತ್ರಗಳಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಲ್ಲಿ ರಾಜ್ಯದ ಸುಮಾರು 1,200 ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈ ಪೈಕಿ ಕೇದಾರನಾಥದಲ್ಲಿ 760, ಬದರಿನಾಥದಲ್ಲಿ 340 ಹಾಗೂ ಇತರೆ ಪ್ರದೇಶಗಳಲ್ಲಿ 167 ಯಾತ್ರಿಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಸಂಜೆ ವೇಳೆಗೆ 200ಕ್ಕೂ ಹೆಚ್ಚು ಸದಸ್ಯರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ ಎಂದು ಸರ್ಕಾರ ಹೇಳಿದೆ.

 

ವಿಪತ್ತು ನಿರ್ವಹಣಾ ಕೇಂದ್ರ

ಡೆಹ್ರಾಡೂನ್‌ನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಅದರ ಉಸ್ತುವಾರಿಯನ್ನು ಹಿರಿಯ ಅಧಿಕಾರಿಗಳಾದ ನವೀನ್‌ರಾಜ್ ಸಿಂಗ್, (ಮೊ.094484 56789) ಹೇಮಂತ್ ನಿಂಬಾಳ್ಕರ (ಮೊ. 094481 10100), ಕರಿಗೌಡ  (098862 31479) ಅವರಿಗೆ ವಹಿಸಲಾಗಿದೆ. ಈ ಅಧಿಕಾರಿಗಳು ಉತ್ತರಾಖಂಡ ಹಾಗೂ ಅಲ್ಲಿನ ಜಿಲ್ಲಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಸಂತ್ರಸ್ತರ ಸಲುವಾಗಿ ರಾಜ್ಯ ಸರ್ಕಾರ ಹೃಷಿಕೇಶದಲ್ಲಿ ಶಿಬಿರ ತೆರೆದಿದೆ. ಅಲ್ಲಿ ಉಚಿತ ಊಟ, ಔಷಧಿ ನೀಡುವುದರ ಜತೆಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ವೈದ್ಯರ ತಂಡವೊಂದನ್ನು ಕಳುಹಿಸಲಾಗಿದೆ. ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ದೆಹಲಿಗೆ ಕರೆತರುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.ದೆಹಲಿಯ ಆರ್.ಕೆ. ಪುರದಲ್ಲಿರುವ ರಾಘವೇಂದ್ರ ಮಠ, ವಸಂತಕುಂಜ್‌ನಲ್ಲಿರುವ ಶಂಕರಮಠ ಮತ್ತು ಪೇಜಾವರ ಮಠಗಳಲ್ಲಿ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ದೆಹಲಿಯಿಂದ ಎಲ್ಲಾ ಯಾತ್ರಾರ್ಥಿಗಳನ್ನು ರೈಲಿನ ಮೂಲಕ ಉಚಿತವಾಗಿ ಕರ್ನಾಟಕಕ್ಕೆ ಕರೆತರಲಾಗುವುದು. ಇದರ ಉಸ್ತುವಾರಿ ನೋಡಿಕೊಳ್ಳಲು ವಾರ್ತಾ ಸಚಿವ ಸಂತೋಷ್ ಲಾಡ್ ಅವರನ್ನು ಉತ್ತರಾಖಂಡಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. ಅವರು ಶುಕ್ರವಾರ ಬೆಳಿಗ್ಗೆ ತೆರಳಲಿದ್ದಾರೆ.

ಹೆಲಿಕಾಪ್ಟರ್‌ಗಳ ಮುಖಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗಿದೆ.  ಈ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಹಾಗೂ ಭಾರತೀಯ ಸೇನಾಪಡೆ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ.ಬದರಿನಾಥ ಹಾಗೂ ಕೇದಾರನಾಥದಲ್ಲಿರುವ ರಾಜ್ಯದ ಯಾತ್ರಾರ್ಥಿಗಳಿಗೆ ಊಟ ಹಾಗೂ ಔಷಧಿಯ ಅವಶ್ಯಕತೆ ಇದೆ ಎಂಬುದು ಅಲ್ಲಿನ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಗೊತ್ತಾಗಿದೆ. ಇದಕ್ಕಾಗಿ ಅಲ್ಲಿನ ಸರ್ಕಾರದೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.40 ಜನ ವಾಪಸ್: ಉತ್ತರಾಖಂಡದಿಂದ ದೆಹಲಿಗೆ ಬಂದ 40 ಮಂದಿ ಯಾತ್ರಾರ್ಥಿಗಳನ್ನು ರೈಲಿನ ಮೂಲಕ ಬೆಂಗಳೂರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಅನುಕೂಲ ಆಗುವ ಹಾಗೆ ರೈಲ್ವೆ ಟಿಕೆಟ್‌ಗಳ ವ್ಯವಸ್ಥೆಯನ್ನು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಡುತ್ತಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲೂ ಯಾತ್ರಾರ್ಥಿಗಳಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ.ತಪ್ಪಾದ ದೂರವಾಣಿ ಸಂಖ್ಯೆ: ಸಂತ್ರಸ್ತರ ಬಗ್ಗೆ ಮಾಹಿತಿ ಪಡೆಯಲು ಉತ್ತರಾಖಂಡ ಸರ್ಕಾರ ನೀಡಿದ್ದ ದೂರವಾಣಿ ಸಂಖ್ಯೆಗಳು ತಪ್ಪಾದ ಕಾರಣ ರಾಜ್ಯದ ಜನ ಪರದಾಡಿದ ಪ್ರಸಂಗ ಗುರುವಾರ ನಡೆಯಿತು. ಈ ವಿಷಯ ಗೊತ್ತಾದ ಬಳಿಕ ದೂರವಾಣಿ ಸಂಖ್ಯೆಗಳನ್ನು ಬದಲಿಸಲಾಯಿತು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.`ರಾಜ್ಯ ಸರ್ಕಾರದ ಸಹಾಯವಾಣಿಗೆ ಈವರೆಗೂ ರಾಜ್ಯದ 300ಕ್ಕೂ ಹೆಚ್ಚು ಸಂತ್ರಸ್ತರು ದೂರವಾಣಿ ಕರೆ ಮಾಡಿ ತಾವಿರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸಹ ಕರೆಗಳು ಬರುತ್ತಿವೆ, ನಾವು ಮೊದಲಿಗೆ ಆಹಾರ ಮತ್ತು ಕುಡಿಯುವ ನೀರನ್ನು ತಲುಪಿಸುವುದಕ್ಕೆ ಅದ್ಯತೆ ನೀಡಿದ್ದೇವೆ.ಗೌರಿಕುಂಡದಲ್ಲಿ 4 ಸಾವಿರಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ 150ಕ್ಕೂ ಹೆಚ್ಚು ಮಂದಿ ಕನ್ನಡಿಗರು ಎಂದು ತಿಳಿದುಬಂದಿದೆ. ಇವರು ನಾಲ್ಕು ದಿನಗಳಿಂದ ನೀರು-ಅಹಾರವಿಲ್ಲದೆ ಬಸವಳಿದಿದ್ದರು. ತಕ್ಷಣವೇ ಆಹಾರವನ್ನು ತಲುಪಿಸಲಾಗಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ಪಾಟಾ ಎಂಬ ಸುರಕ್ಷಿತ ಸ್ಥಳಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು ನವೀನ್‌ರಾಜ್ ಸಿಂಗ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.