ಸೋಮವಾರ, ಏಪ್ರಿಲ್ 19, 2021
32 °C

ರಾಜ್ಯಪಾಲರ ಮುಖಾಂತರ 371ನೇ ಕಲಂ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ತನ್ನ ಮೂಲಕ 371ನೇ ಕಲಂ ಜಾರಿಗೊಳಿಸಲು ರಾಜ್ಯ ಸರ್ಕಾರ ಈಚೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು ಇದರಿಂದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗುವ ಸಾಧ್ಯತೆ ಇದ್ದು ರಾಜ್ಯಪಾಲರ ಮುಖಾಂತರ ಅದನ್ನು ಜಾರಿಗೊಳಿಸಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕೋರ್‌ಕಮಿಟಿ ಸದಸ್ಯ ಕೆ.ವಿರೂಪಾಕ್ಷಪ್ಪ ಆಗ್ರಹಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎಚ್‌ಕೆಡಿಬಿ ಆಡಳಿತದ ವೈಖರಿ ಹಾಗೂ ನಂಜುಂಡಪ್ಪ ವರದಿಯ ಅನುಷ್ಠಾನದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಅವಲೋಕಿಸಿದರೆ 371ನೇ ಕಲಂ ಜಾರಿಯಾದರೂ ಈ ಭಾಗಕ್ಕೆ ತಾಲ್ಲೂಕು, ಜಿಲ್ಲಾ ಹಾಗೂ ಇಲಾಖೆವಾರು ಹಣ ವಿತರಣೆಯಲ್ಲಿ ರಾಜ್ಯ ಸರ್ಕಾರ ಅನ್ಯಾಯವೆಸಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ವಿರೋಧಿಸಿ ಬಿಎಸ್‌ಆರ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿಎಸ್‌ಆರ್‌ನಿಂದ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು ಹೇಳಿದರು.ನೇಮಕಾತಿ ತಡೆ: ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ 371ನೇ ಕಲಂ ಜಾರಿಗೊಳಿಸುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ರಾಜ್ಯ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಾರದು. ಶಿಕ್ಷಣ ಇಲಾಖೆಯ 4 ಸಾವಿರ ಶಿಕ್ಷಕರ ನೇಮಕಾತಿ, ಪಶು ಇಲಾಖೆ, ಶುಶ್ರೂಷಕರ ನೇಮಕ ಮತ್ತಿತರ ಸರ್ಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿಗಳನ್ನು ಕರೆಯಬಾರದು. ಕಲಂ ಜಾರಿ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.ಸರ್ಕಾರಿ ಜಾಗ ಮಾರಾಟ ಕೈಬಿಡಿ: ನಗರದ ಟಿಎಪಿಸಿಎಂಎಸ್ ಆಡಳಿತ ಮಂಡಳಿ ತನ್ನ ಸುಪರ್ದಿಗೆ ಒಳಪಟ್ಟಿರುವ 1.24ಎಕರೆ ಜಾಗವನ್ನು ಟೆಂಡರ್ ಮೂಲಕ ಮಾರಾಟ ಮಾಡಲು ನಿರ್ಧರಿಸಿದ್ದು ಕೂಡಲೇ ಇದನ್ನು ಕೈಬಿಡಬೇಕು. ಪ್ರಗತಿಪರ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಆಡಳಿತ ಮಂಡಳಿ ಮುಂದೂಡಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಶಾಶ್ವತವಾಗಿ ರದ್ದುಪಡಿಸಬೇಕು.ಸುಕಾಲಪೇಟೆ ಪ್ರೌಢಶಾಲೆಗೆ ಆ ಜಾಗವನ್ನು ಉಚಿತವಾಗಿ ನೀಡಬೇಕು. ಇಲ್ಲವಾದಲ್ಲಿ ಯಾವುದಾದರೂ ಸಹಕಾರಿ ಸಂಸ್ಥೆಗೆ ನೀಡಿದರೂ ತೊಂದರೆಯಿಲ್ಲ. ಆದರೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ವಾಣಿಜ್ಯಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬಾರದು. ಒಂದು ವೇಳೆ ಪ್ರಕ್ರಿಯೆ ಮುಂದುವರೆಸಿದಲ್ಲಿ ಆಡಳಿತ ಮಂಡಳಿ ವಿರುದ್ದ ಹೋರಾಟಕ್ಕಿಳಿಯುವುದಾಗಿ ಅವರು ಎಚ್ಚರಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರ ಗುರುಪಾದಸ್ವಾಮಿ ಕಲಮಂಗಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.