ಶನಿವಾರ, ಜನವರಿ 25, 2020
15 °C

ರಾಜ್ಯಮಟ್ಟದ ಕೃಷಿ ಮೇಳಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ನಗರದಲ್ಲಿ ಜ.19ರಿಂದ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಮೇಳವು ಉತ್ತರ ಕರ್ನಾಟಕದ ರೈತರಿಗೆ ಪ್ರೇರಣೆ ಹಾಗೂ ಧ್ವನಿಯಾಗಿ ಕೆಲಸ ಮಾಡಲಿದೆ~ ಎಂದು `ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ನಡೆಯುವ 32ನೇ ಕೃಷಿ ಮೇಳ ಇದಾಗಿದ್ದು, ಹಿಂದೆ ನಡೆದ ಕೃಷಿ ಮೇಳಗಲ್ಲಿ ಹಲವು ವಿಶೇಷತೆಗಳನ್ನು ಹೊಂದಿದಂತೆ ಈ ಮೇಳವೂ ಹಲವು ವಿಶೇಷತೆಗಳನ್ನು ಹೊಂದಲಿದೆ ಎಂದರು.ಕೃಷಿ ಮೇಳಕ್ಕಾಗಿ ನಗರವನ್ನು ಮದುವಣಗಿತ್ತಿ ಯಂತೆ ಸಿಂಗರಿಸಲಾಗುವುದು. ಉದ್ಘಾಟನಾ ದಿನದಂದು ಮುರುಘ ರಾಜೇಂದ್ರ ಮಠದ ಆವರಣದಿಂದ ಭವ್ಯ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಕಲಾ ತಂಡ, ಸ್ಥಬ್ಧ ಚಿತ್ರ ಹಾಗೂ 532 ಪೂರ್ಣ ಕುಂಭ ಹೊತ್ತ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಮೂರು ದಿನಗಳ ಮೇಳದಲ್ಲಿ ಕೃಷಿಗೆ ಅನುಕೂಲ ವಾಗುವ ಪರ್ಯಾಯ ಇಂಧನ ಬಳಕೆಗಳಲ್ಲಿ ರೈತರ ಸಹಭಾಗಿತ್ವ, ಕೃಷಿ ಮತ್ತು ಯುವ ಜನತೆ, ಆರೋಗ್ಯ ಮತ್ತು ಭದ್ರತೆ, ಹೈನುಗಾರಿಕೆ ಹಾಗೂ ಮಾರುಕಟ್ಟೆ ಸವಾಲು ಗಳು, ಖುಷ್ಕಿ ಬೇಸಾಯದಲ್ಲಿ ವಾಣಿಜ್ಯ ಮತ್ತು ಅಲ್ಪಾವಧಿ ಬೆಳೆಗಳಿಗೆ ಇರುವ ಅವಕಾಶಗಳು, ಸರ್ಕಾರಿ ಇಲಾಖೆಗಳು ಮತ್ತು ರೈತಪರ ಯೋಜನೆ ಗಳು, ನೆಲ-ಜಲ ನೈರ್ಮಲ್ಯದಲ್ಲಿ ಮಹಿಳೆಯರ ಪಾತ್ರ, ಕೃಷಿ ಯಾಂತ್ರೀಕರಣ ಮತ್ತು ಪ್ರಾತ್ಯಕ್ಷಿಕೆಗಳು, ಶ್ರೀಪದ್ಧತಿ ಹಾಗೂ ಪರಿಸರ ಸ್ನೇಹಿ ಕೃಷಿ ಸೇರಿದಂತೆ ಒಟ್ಟು 13 ಗೋಷ್ಠಿಗಳು ನಡೆಯಲಿವೆ ಎಂದರು.ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಮಳಿಗೆ ಗಳನ್ನು ತೆರೆಯಲಾಗುತ್ತದೆ. ಕೃಷಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜಾನು ವಾರು ಮತ್ತು ಶ್ವಾನ ಪ್ರದರ್ಶನ ನಡೆಯಲಿದ್ದು, 200 ಕ್ಕೂ ಹೆಚ್ಚು ವಿವಿಧ ಜಾತಿಯ ಜಾನುವಾರು ಹಾಗೂ 100 ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಲಿವೆ. ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಧಾರವಾಡ ಕೃಷಿ ವಿಶ್ವ ವಿದ್ಯಾಲ ಯದಿಂದ 10 ಜನ ತಜ್ಞ ತಂಡ ಬರಲಿದೆ  ಎಂದರು.ಉದ್ಘಾಟನೆ: ಜ. 19 ರಂದು ನಡೆಯಲಿರುವ ಉದ್ಘಾಟನೆ ಸಮಾರಂಭದಲ್ಲಿ ಕೇಂದ್ರ ಸಚಿವ ಜೈರಾಮ್ ರಮೇಶ ಪಾಲ್ಗೊಂಡು ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ, ಸುಧಾ ಮೂರ್ತಿ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ.ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ, ಗ್ರಾಮೀಣ ಅಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಸೇರಿದಂತೆ ನಾಡಿನ ಹಲವು ಗಣ್ಯರು ಪಾಲ್ಗೊಳ್ಳಿದ್ದಾರೆ. ಮೇಳದ ಮೂರು ದಿನಗಳ ಕಾಲ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕೃಷಿ ಮೇಳದಲ್ಲಿ ಪ್ರತಿ ದಿನ 1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಹಾಗೂ ಎರಡು ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಜಿಲ್ಲಾಡಳಿತ ಹೆಚ್ಚಿನ ಸಹಕಾರ ನೀಡುತ್ತಿದೆ. ಕಾರ್ಯಕ್ರಮಕ್ಕಾಗಿ ನಗರದ ಜಿ.ಎಚ್ ಕಾಲೇಜು ಮೈದಾನದಲ್ಲಿ 240 ಚದರ ಅಡಿ ಪೆಂಡಾಲ್ ಹಾಕಲಾಗುತ್ತಿದೆ. ಮೇಳಕ್ಕೆ ಆಗಮಿಸುವವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ನ್ಯಾಯವಾದಿ ಕೆ.ಸಿ. ಪಾವಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಸವಿತಾ ಡಿಸೋಜ, ಧಾರವಾಡ ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಸದಸ್ಯ ನಾಗೇಂದ್ರ ಕಟಕೋಳ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತಿಕ್ರಿಯಿಸಿ (+)