ಸೋಮವಾರ, ಮೇ 23, 2022
20 °C

ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಅಂತರರಾಷ್ಟ್ರೀಯ ಸ್ವರ್ಣಚಕ್ರ ಪ್ರಶಸ್ತಿ ಪುರಸ್ಕತ ಹಾಸ್ಯನಟ ವೈಜಿನಾಥ ಬಿರಾದಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದರು.ಅಂತರರಾಷ್ಟ್ರೀಯ `ಸ್ವರ್ಣಚಕ್ರ~ ಪ್ರಸ್ತಿ ದೊರೆತ ಹಿನ್ನೆಲೆಯಲ್ಲಿ ವೈಜಿನಾಥ ಬಿರಾದಾರ್ ಅವರಿಗೆ ಅವರ ಹುಟ್ಟೂರು ಭಾಲ್ಕಿ ತಾಲ್ಲೂಕಿನ ತೇಗಂಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಒಗ್ಗಟ್ಟಿನಿಂದ ಈ ವಿಷಯ ಪ್ರಸ್ತಾಪಿಸುವುದಾಗಿ ಭರವಸೆ ಅವರು ನೀಡಿದರು.ವೈಜಿನಾಥ ಬಿರಾದಾರ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಬೀದರ್ ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಿರಾದಾರ್ ಕರ್ನಾಟಕದ ಮನೆ ಮಾತಾಗಿದ್ದಾರೆ. ಇಂಥ ಕಲಾವಿದನನ್ನು ಗುರುತಿಸಿ ಗೌರವಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾದ ಬಿರಾದಾರ್‌ನಂತ ಕಲಾವಿದನಿಗೆ ರಾಜ್ಯ ಸರ್ಕಾರ ಗುರುತಿಸದಿರುವುದು ವಿಷಾದದ ಸಂಗತಿಯಾಗಿದೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಸ್ಯ ನಟ ವೈಜಿನಾಥ ಬಿರಾದಾರ ಭಾವ ಪರವಶರಾದರು. ಪ್ರಶಸ್ತಿ ಬಂದಿದ್ದಕ್ಕಾಗಿ ರಾಜ್ಯದಲ್ಲೆಡೆ ಸನ್ಮಾನ ಸಮಾರಂಭ ನಡೆಯುತ್ತಿವೆ. ಆದರೆ, ಹುಟ್ಟೂರು ಸನ್ಮಾನ ಅತೀವ ಖುಷಿ ತಂದಿದೆ ಎಂದು ಹೇಳಿದರು.ರಂಗಭೂಮಿಯಿಂದ ಚಿತ್ರರಂಗಕ್ಕೆ ಕಾಲಿಟ್ಟ ತಮ್ಮನ್ನು ರಾಜ್ಯದ ಜನ ಗುರುತಿಸಿ ಪ್ರೊತ್ಸಾಹಿಸಿದ್ದಾರೆ. ಇದೀಗ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.ಪ್ರಸ್ತುತ ಪ್ರಶಸ್ತಿಗಳು ಅರ್ಹರಿಗೆ ಸಿಗುತ್ತಿಲ್ಲ. ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಅಲ್ಲದೇ ಕಲಾವಿದರಿಗೆ ನೆವಾಗುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಆಗಬೇಕಾಗಿದೆ ಎಂದು ವಿವರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸಾವಿತ್ರಿಬಾಯಿ ಉಮಾಕಾಂತ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟರಾವ್ ಬಿರಾದಾರ, ಬಿ.ಎಸ್.ಎಸ್.ಕೆ. ನಿರ್ದೇಶಕ ಅಶೋಕ ತಮಾಸಂಗೆ, ಪಿ.ಎಲ್.ಸಿ. ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ ಗಾದಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಪ್ರಭಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೀರಣ್ಣ ಕಾರಭಾರಿ ಮತ್ತಿತರರು ಉಪಸ್ಥಿತರಿದ್ದರು. ಶಿವಕುಮಾರ ಪಾಟೀಲ್ ತೇಗಂಪುರ ಸ್ವಾಗತಿಸಿದರು. ಗಣಪತಿ ಬಿರಾದಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.