ಭಾನುವಾರ, ಜೂನ್ 13, 2021
20 °C

ರಾಜ್ಯ ಬಜೆಟ್ 2012-13: ಜನಪರ, ಪ್ರಗತಿ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ನೌಕರರಿಗೆ `ಒಬ್ಬಟ್ಟು~. ಕೃಷಿಕರಿಗೆ ಬಡ್ಡಿರಹಿತ ಸಾಲ. ಮುದ್ರಾಂಕ ಶುಲ್ಕದಲ್ಲಿ ಕಡಿತ. ಡೀಸೆಲ್ ಮತ್ತು ಚಿನ್ನಾಭರಣಗಳ ಮೇಲಿನ ತೆರಿಗೆಯಲ್ಲಿ ಅಲ್ಪ ಇಳಿಕೆ ಮಾಡುವುದರೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿವಿಧ ವರ್ಗಗಳ ಜನರಿಗೆ ಯುಗಾದಿ ಉಡುಗೊರೆ ನೀಡಿದ್ದಾರೆ. 
ರಾಜ್ಯ ಬಜೆಟ್ ಗಾತ್ರ ಮೊದಲ ಬಾರಿಗೆ ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ. ಲಕ್ಷ ಕೋಟಿ ಬಜೆಟ್ ಮಂಡಿಸುವ ಕನಸನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಪದೇ ಪದೇ ಪ್ರಸ್ತಾಪಿಸುತ್ತಲೇ ಇದ್ದರು. ಅವರ ಉತ್ತರಾಧಿಕಾರಿ ಸದಾನಂದ ಗೌಡ ಬುಧವಾರ ಅದನ್ನು ನನಸಾಗಿಸಿದ್ದಾರೆ. ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ಪರಂಪರೆ ಕಳೆದ ವರ್ಷ ಆರಂಭ ಆಗಿತ್ತು. ಅದು ಮುಂದುವರಿದಿದೆ.2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಗಮನ ಸೆಳೆಯುವಂತಹ ಯಾವುದೇ ಹೊಸ ಯೋಜನೆಗಳು ಇಲ್ಲ. ಜನಸಾಮಾನ್ಯರಿಗೆ ಹೊಸದಾಗಿ ತೆರಿಗೆಯ ಹೊರೆ ಬಿದ್ದಿಲ್ಲ. `ಭೂಚೇತನ~ ಸೇರಿದಂತೆ ಜಾರಿಯಲ್ಲಿರುವ ಹಲವು ಯೋಜನೆಗಳ ವ್ಯಾಪ್ತಿ ವಿಸ್ತರಣೆ ಆಗಿದೆ. ಕೆಲವು ಪುನರ್‌ವಿನ್ಯಾಸಗೊಂಡಿವೆ. ನೀರಾವರಿ, ಶಿಕ್ಷಣ, ಕೃಷಿ ಮಾರುಕಟ್ಟೆಗೆ ಒತ್ತು ದೊರೆತಿದೆ. ಇದರ ನಡುವೆ ಎಲ್ಲ ಜಾತಿ, ವರ್ಗ, ಸಮುದಾಯಗಳನ್ನು ಒಳಗೊಳ್ಳುವ ಕರಸತ್ತು ನಡೆದಿದೆ. ಧೂಮಪಾನಿಗಳು ಮತ್ತು ಮದ್ಯಪ್ರಿಯರ ಕಿಸೆಗೆ ಕತ್ತರಿ ಬಿದ್ದಿದೆ. 
ನೌಕರರ ವೇತನ ಪರಿಷ್ಕರಣೆ ಕುರಿತು ಪರಿಶೀಲಿಸಲು ರಚಿಸಿದ್ದ ಅಧಿಕಾರಿ ವೇತನ ಸಮಿತಿಯ ಶಿಫಾರಸುಗಳು ಏಪ್ರಿಲ್ 1ರಿಂದ ಜಾರಿಯಾಗಲಿವೆ. ಇದರಿಂದ ಸಹಜವಾಗಿಯೇ ನೌಕರರ ವೇತನದಲ್ಲಿ ಗಣನೀಯ ಜಿಗಿತ ಆಗಲಿದೆ. ಸರ್ಕಾರಿ ನೌಕರರ ಮೂಲ ವೇತನದಲ್ಲಿ ಮಧ್ಯಂತರ ಪರಿಹಾರ ಸೇರಿದಂತೆ ಶೇ 22.5ರಷ್ಟು ಹೆಚ್ಚಳ ಆಗಲಿದೆ. ದಿನಗೂಲಿ ನೌಕರರ ವೇತನವನ್ನು ತಿಂಗಳಿಗೆ ರೂ 1,000 ಹೆಚ್ಚಿಸಲಾಗಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ವಾರ್ಷಿಕ 4,500 ಕೋಟಿ ರೂ. ಹೊರೆ ಬೀಳಲಿದೆ.ಸಹಕಾರಿ ಸಂಸ್ಥೆಗಳಿಂದ ಪಡೆಯುವ ರೂ ಒಂದು ಲಕ್ಷವರೆಗಿನ ಅಲ್ಪಾವಧಿ ಕೃಷಿ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 1ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಅನುಕೂಲ ಆಗಲಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಶೇ 6ರಿಂದ 5ಕ್ಕೆ ಇಳಿಸಲು ಉದ್ದೇಶಿದ್ದು,  ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುವ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಇದರಿಂದ ಉತ್ತೇಜನ ದೊರೆಯಲಿದೆ.ಬಜೆಟ್ ಗಾತ್ರ ರೂ 1,02,742 ಕೋಟಿ. 2011-12ನೇ ಸಾಲಿಗೆ (ರೂ 85,319 ಕೋಟಿ) ಹೋಲಿಸಿದರೆ ಶೇ 20.42ರಷ್ಟು ಏರಿಕೆ. ರಾಜ್ಯ ಯೋಜನಾ ಗಾತ್ರ ರೂ 42,030 ಕೋಟಿ (ಶೇ 10.4ರಷ್ಟು ಹೆಚ್ಚಳ). ವಿತ್ತೀಯ ಕೊರತೆ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 2.94 ರಷ್ಟು. ರಾಜಸ್ವ ಮಿಗತೆ ರೂ 931 ಕೋಟಿ. ಬಜೆಟ್‌ನ ವೆಚ್ಚ ನಿರ್ವಹಿಸಲು ಜುಲೈ 31ರ ವರೆಗೆ ಅಂದರೆ 4 ತಿಂಗಳ ಲೇಖಾನುದಾನ ಕೋರಲಾಗಿದೆ.  
 `ನಾ ಮೆಚ್ಚಿದ ಬಜೆಟ್~

`ಪ್ರಗತಿಪರ ಮತ್ತು ತೆರಿಗೆರಹಿತ ಬಜೆಟ್. ಶೇಕಡ 90ರಷ್ಟು ಉತ್ತಮವಾಗಿದೆ. ಈ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ~.

`ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ನಾನು ಮಂಡಿಸಲಿಲ್ಲ ಎಂಬ ಬೇಸರ ಇಲ್ಲ. ತಂದೆ ಮಂಡಿಸಿದರೇನು, ಮಗ ಮಂಡಿಸಿದರೇನು. ಅವರೂ ನಮ್ಮ ಪಕ್ಷದವರೇ~ 
- ಬಿ.ಎಸ್.ಯಡಿಯೂರಪ್ಪ

 ಮಾಜಿ ಮುಖ್ಯಮಂತ್ರಿ

ಬೀಡಿ ಮೇಲೆ ಶೇ 5ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 15ರಿಂದ ಶೇ 17ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಮದ್ಯ ದರದಲ್ಲೂ ಹೆಚ್ಚಳ ಆಗಲಿದೆ. ಬಂಗಾರ ಮತ್ತಿತರ ಬೆಲೆಬಾಳುವ ಲೋಹಗಳ ಆಭರಣಗಳು ಹಾಗೂ ಅಮೂಲ್ಯ ಹರಳುಗಳ ಮೇಲಿನ ತೆರಿಗೆಯನ್ನು ಶೇ 2ರಿಂದ 1ಕ್ಕೆ ಇಳಿಸಿರುವುದು ಆಭರಣಪ್ರಿಯ ಮಹಿಳೆಯರಿಗೆ ಖುಷಿಯ ವಿಚಾರ.ಮಠಮಾನ್ಯಗಳಿಗೆ, ಸಂಘ-ಸಂಸ್ಥೆಗಳಿಗೆ ಉದಾರವಾಗಿ ಅನುದಾನ ಒದಗಿಸುವ ಪರಿಪಾಠವನ್ನು ಸದಾನಂದ ಗೌಡ ಅವರೂ ಮುಂದುವರಿಸಿದ್ದಾರೆ. ಆದರೆ ತಕ್ಕಡಿ ಈ ಸಲ ಹಿಂದುಳಿದ ವರ್ಗಗಳ ಕಡೆ ವಾಲಿಕೊಂಡಂತೆ ಭಾಸವಾಗುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒಟ್ಟು 1,000 ಕೋಟಿ ಅನುದಾನವನ್ನು ಒದಗಿಸಿದ್ದಾರೆ. `ಹಿಂದುಳಿದ ವರ್ಗಗಳಿಗೆ ಇಷ್ಟೊಂದು ಅನುದಾನವನ್ನು ದೇವರಾಜ ಅರಸು ನಂತರ ಯಾರೂ ನೀಡಿರಲಿಲ್ಲ. ಯಾರನ್ನು ಮುಟ್ಟಬೇಕೋ ಅವರನ್ನು ತಲುಪುವ ಪ್ರಯತ್ನ ಮಾಡಿದ ಸಮಾಧಾನ ಇದೆ~ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಹೇಳಿದರು.ವಿಧಾನಮಂಡಲ ಅಧಿವೇಶನದಲ್ಲಿ ಮೊದಲ ದಿನ ಭಾಗವಹಿಸದೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಯಡಿಯೂರಪ್ಪ ಮತ್ತು ಅವರ ಬಣದ ಶಾಸಕರು ಬಜೆಟ್ ಮಂಡನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.