ಭಾನುವಾರ, ಮೇ 16, 2021
26 °C

ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೂರದ ದೊಡ್ಡಬಳ್ಳಾಪುರದಿಂದ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅಗಮಿಸಿದ್ದ ಅಂಧ ಕಲಾವಿದ ಒಬ್ಬರು ದುರಂತ ಅಂತ್ಯ ಕಂಡ ಘಟನೆ ಭಾನುವಾರ ಇಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ಗೋಪಿ (25)  ಸಾವಿಗೀಡಾದ ಕಲಾವಿದ. ಭಾನುವಾರ ರಾತ್ರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿದ್ದ ವ್ಯಕ್ತಿಯನ್ನು ಜವರಾಯ ತನ್ನತ್ತ ಸೆಳೆದುಕೊಂಡಿದ್ದಾನೆ.ಆದದ್ದೇನು?: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಅಂಗವಿಕಲರ ಸೇವಾ ಸಮಿತಿ ವತಿಯಿಂದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಶನಿವಾರ ಆಯೋಜಿಸಲಾಗಿತ್ತು. ಭಾನುವಾರ ಫೈನಲ್ ಇತ್ತು. ಸಂಜೆ ಬಹುಮಾನ ವಿತರಣೆ, ಮನರಂಜನಾ ಕಾರ್ಯಕ್ರಮ ನಿಗದಿಯಾಗಿತ್ತು.ಕಾರ್ಯಕ್ರಮ ನೀಡಲು ಸಮಿತಿಯ ಕಾರ್ಯದರ್ಶಿ ಸಂತೋಷ್, ದೊಡ್ಡಬಳ್ಳಾಪುರದಿಂದ ಸ್ನೇಹಿತ ಗೋಪಿ ಮತ್ತಿತರರನ್ನು ಒಳಗೊಂಡ ತಂಡವನ್ನು ಇಲ್ಲಿಗೆ ಆಹ್ವಾನಿಸಿದ್ದರು. ಈ ತಂಡದಲ್ಲಿದ್ದ ಗೋಪಿ ಅಂಧರು. ಕೆಲವರು ಭಾಗಶಃ ಅಂಧರಾಗಿದ್ದರು.ತಂಡಕ್ಕೆ ಲೋಕಿಕೆರೆ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಅಂಗವಿಕಲರ ಸೇವಾ ಸಮಿತಿ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಬೆಳಿಗ್ಗೆ ಅಲ್ಲಿ ಸ್ನಾನಕ್ಕೆ ವ್ಯವಸ್ಥೆ ಇದ್ದರೂ ಸಹ, ಸ್ನೇಹಿತರನ್ನು ಅಲ್ಲಿಗೆ ಸಮೀಪದಲ್ಲಿರುವ ನಾಲೆಯಲ್ಲಿ ಈಜಲು ಗೋಪಿ ಕರೆದಿದ್ದಾರೆ. ಸ್ನೇಹಿತರು, ಬೇಡ ಎಂದರೂ ಹೋಗಲು ಮುಂದಾಗಿದ್ದಾರೆ.ಗೋಪಿ ಒತ್ತಾಯಕ್ಕೆ ಮಣಿದ ಕೆಲ ಸ್ನೇಹಿತರು ಅವರ ಜತೆ ಹೋಗಿದ್ದಾರೆ. ಒಂದಷ್ಟು ವೇಳೆ ನಾಲೆಯಲ್ಲಿ ಈಜಿ ಸ್ನಾನ ಮಾಡಿದ್ದಾರೆ. ಇನ್ನೇನು ಬಟ್ಟೆ ಬದಲಾಯಿಸಿ ಹೋಗಬೇಕು ಎನ್ನುವಷ್ಟರಲ್ಲಿ ಮತ್ತೊಮ್ಮೆ ಈಜಿಕೊಂಡು ಬರುತ್ತೇನೆ ಎಂದು ನೀರಿಗೆ ಬಿದ್ದ ಗೋಪಿ, ಮುಳುಗಿ ಸಾವಿಗೀಡಾಗಿದ್ದಾರೆ. ಗೋಪಿಗೆ ಸರಿಯಾಗಿ ಈಜಲು ಬರುವುದಿಲ್ಲ ಎಂಬುದು ನಂತರವಷ್ಟೇ ಗೊತ್ತಾಗಿದೆ.ಕೆಲ ಸಾರ್ವಜನಿಕರ ಸಹಕಾರದೊಂದಿಗೆ, ಗೋಪಿ ಮೃತದೇಹವನ್ನು ನೀರಿನಿಂದ ಮೇಲೆತ್ತಿ, ನಂತರ ಆಸ್ಪತ್ರೆಗೆ ತರಲಾಯಿತು. ಈ ಸಂದರ್ಭ ಸ್ನೇಹಿತರ ಆಕ್ರಂದನ ಮುಗಿಲುಮುಟ್ಟಿತ್ತು.ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶವವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ.ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರು ಬಂದ ನಂತರ ಮೃತದೇಹ ದೊಡ್ಡಬಳ್ಳಾಪುರಕ್ಕೆ ಸಾಗಿಸಲಾಗುವುದು. `ನಮ್ಮಂತಹ ಅಶಕ್ತರಿಗೆ ದೇವರು ಏಕಿಷ್ಟು ಕಷ್ಟ ಕೊಡುತ್ತಾನೆ~ ಎಂದು ಅಂಧರೂ ಆಗಿರುವ ಸ್ವಾಮಿ ವಿವೇಕಾನಂದ ಅಂಗವಿಕಲರ ಸೇವಾ ಸಮಿತಿ ಕಾರ್ಯದರ್ಶಿ ಸಂತೋಷ್ ಪ್ರಶ್ನಿಸಿದರು.`ನಾವು, ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಸುತ್ತಿದ್ದೆವು. ಹುಬ್ಬಳ್ಳಿ-ದಾವಣಗೆರೆ ವಿರುದ್ಧದ ಪಂದ್ಯ ನಡೆಯಬೇಕಿತ್ತು. ದಾವಣಗೆರೆ ಟಾಸ್ ಗೆದ್ದಿತ್ತು. ಇನ್ನೇನು ಪಂದ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ದುರಂತದ ಸುದ್ದಿ ಬಂತು. ಹೀಗಾಗಿ, ಟೂರ್ನಿ ರದ್ದುಪಡಿಸಲಾಯಿತು.ಗೋಪಿ ಮತ್ತು ಸ್ನೇಹಿತರು ಸಂಜೆ ಸಂಗೀತ ಕಾರ್ಯಕ್ರಮ ನೀಡುವವರಿದ್ದರು. ಕೀಬೋರ್ಡ್ ಸೇರಿದಂತೆ ಎಲ್ಲ ವಾದ್ಯಗಳನ್ನು ನುಡಿಸುತ್ತಿದ್ದ ಗೋಪಿ, ಗಾಯಕರೂ ಆಗಿದ್ದರು. ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.  ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ತೋರಬೇಕು ಎಂದುಕೊಂಡಿದ್ದ. ಸ್ನೇಹಿತನನ್ನು ಕಳೆದುಕೊಂಡು ಜೀವನ ಬೇಸರವಾಗಿದೆ. ಏ. 28ರಂದು ಮತ್ತೊಂದು ಕಾರ್ಯಕ್ರಮಆಯೋಜಿಸುವ ಉದ್ದೇಶವಿತ್ತು. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ~ ಎಂದು ಸಂತೋಷ್ ಕಣ್ಣೀರಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.