ಭಾನುವಾರ, ಜೂನ್ 13, 2021
25 °C

ರಾಮಮನೋಹರ ಲೋಹಿಯಾ ಅವರ 102ನೇ ಜನ್ಮದಿನದ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರುವ ಬಗ್ಗೆಯೇ ಅನುಮಾನಗಳು ಮೂಡುತ್ತವೆ~ ಎಂದು ಸಾಮಾಜಿಕ ಕಾರ್ಯಕರ್ತೆ ನಂದನಾ ರೆಡ್ಡಿ ಕಳವಳ ವ್ಯಕ್ತ ಪಡಿಸಿದರು.ನಗರದಲ್ಲಿ ಬುಧವಾರ ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್ ಆಯೋಜಿಸಿದ್ದ ಲೋಹಿಯಾ ಅವರ 102 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ರಾಜ್ಯದ ರಾಜಕೀಯ ವ್ಯವಸ್ಥೆಯು ದಿನದಿಂದ ದಿನಕ್ಕೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಕೇವಲ ಎದುರು ಪಕ್ಷಗಳ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಂಡಿವೆ. ನೈತಿಕತೆಯೇ ಇಲ್ಲದ ರಾಜಕೀಯದಿಂದ ಜನರು ಏನನ್ನೂ ನಿರೀಕ್ಷಿಸದ ಸಂದರ್ಭ ಎದುರಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, `ಪ್ರಸ್ತುತ ದಿನಗಳಲ್ಲಿ ರಾಜ್ಯದ ಮಠಗಳು ಜಾತಿ ರಾಜಕಾರಣದಲ್ಲಿ ಮುಳುಗಿ ಹೋಗಿವೆ. ನಡೆದಾಡುವ ದೇವರು ಎನಿಸಿಕೊಂಡಿದ್ದ ಮಠಾಧೀಶರೂ ರಾಜಕೀಯದಲ್ಲಿ ತೊಡಗಿರುವುದು ದುರಂತ. ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಗಳೇ ನಡೆಯದೆ ಮಸೂದೆಗಳು ಅಂಗೀಕಾರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ದುಃಸ್ಥಿತಿಯಲ್ಲಿ ಲೋಹಿಯಾ ಅವರ ಚಿಂತನೆಗಳು ಆಶಾವಾದ ಮೂಡಿಸುವಂತಿವೆ~ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ನಟರಾಜ್ ಲೋಹಿಯಾ ವಿಚಾರಗಳ ಕುರಿತು ಮಾತನಾಡಿದರು. ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್‌ನ ಅಧ್ಯಕ್ಷ ಎಂ.ಎಸ್.ರಂಗನಾಥ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.