ಶನಿವಾರ, ಮೇ 28, 2022
25 °C

ರಾಷ್ಟ್ರಪತಿ ಚುನಾವಣೆ: ಕಾಂಗ್ರೆಸ್ ಕ್ರಮಕ್ಕೆ ಸಿಪಿಐ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪ್ರಣವ್ ಮುಖರ್ಜಿ ಅವರು ತನ್ನ ಅಭ್ಯರ್ಥಿ ಎಂದು ಘೋಷಿಸುವ ಮೊದಲು ಕಾಂಗ್ರೆಸ್, ಇತರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.ರಾಷ್ಟ್ರಪತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಾಂಗ್ರೆಸ್ ಏಕಪಕ್ಷೀಯವಾಗಿ ನಿರ್ಧರಿಸಿದೆ. ನಂತರ ಈ ಕುರಿತು ಒಮ್ಮತ ಮೂಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪ್ರಣವ್ ಬಗ್ಗೆ ಎಡಪಕ್ಷಗಳಿಗೆ ಯಾವುದೇ ತಕರಾರು ಇಲ್ಲ.

 

ಆದರೆ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡುವಾಗ ಕಾಂಗ್ರೆಸ್ ಅನುಸರಿಸಿದ ಮಾರ್ಗ ಸರಿಯಲ್ಲ. ರಾಷ್ಟ್ರಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಎಡಪಕ್ಷಗಳು ತೆಗೆದುಕೊಳ್ಳಬೇಕಾದ ನಿಲುವು ಕುರಿತು ಚರ್ಚಿಸಲು ಇದೇ 21ರಂದು ನವದೆಹಲಿಯಲ್ಲಿ ಸಭೆ ಸೇರಲಾಗುವುದು. ಸಿಪಿಐ, ಸಿಪಿಎಂ, ಆರ್‌ಎಸ್‌ಪಿ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಆಹಾರ ಭದ್ರತಾ ಮಸೂದೆ ದುರ್ಬಲವಾಗಿದೆ. ಸಾರ್ವಜನಿಕರಿಗೆ ಆಹಾರ ಭದ್ರತೆಯನ್ನು ನಿಜವಾದ ಅರ್ಥದಲ್ಲಿ ಒದಗಿಸುವ ಸಾಮರ್ಥ್ಯ ಇದಕ್ಕೆ ಇಲ್ಲ. ಈ ಹಿನ್ನೆಲೆಯಲ್ಲಿ ಬಲಿಷ್ಠ ಮಸೂದೆಯ ಮಂಡನೆಗೆ ಆಗ್ರಹಿಸಿ ಜುಲೈ 1ರಿಂದ 31ರವರೆಗೆ ರಾಷ್ಟ್ರದ ಎಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯಲ್ಲೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.