ಶನಿವಾರ, ಏಪ್ರಿಲ್ 1, 2023
23 °C

ರಾಷ್ಟ್ರಭಕ್ತರಿಗೆ ಭಯೋತ್ಪಾದಕರ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಭಕ್ತರಿಗೆ ಭಯೋತ್ಪಾದಕರ ಪಟ್ಟ

ಎಬಿವಿಪಿ 56ನೇ ರಾಷ್ಟ್ರೀಯ ಅಧಿವೇಶನದಲ್ಲಿ ರಾಜ್ಯಸಭಾ ಸದಸ್ಯ ನ್ಯಾ. ಎಂ.ರಾಮಾ ಜೋಯಿಸ್ ವಿಷಾದ

ಬೆಂಗಳೂರು:
‘ಕೇಂದ್ರ ಸರ್ಕಾರ ಪ್ರಕಟಿಸಿರುವ ಪಠ್ಯಪುಸ್ತಕಗಳಲ್ಲಿ ಭಗತ್‌ಸಿಂಗ್, ಸುಖದೇವ್, ರಾಜ್‌ಗುರು ಮತ್ತಿತರರನ್ನು ಭಯೋತ್ಪಾದಕರು ಎಂದು ಚಿತ್ರಿಸಿದೆ. ರಾಷ್ಟ್ರಭಕ್ತರನ್ನು ಭಯೋತ್ಪಾದಕರೆಂದೂ, ಭಯೋತ್ಪಾದಕರನ್ನು ರಾಷ್ಟ್ರಭಕ್ತರೆಂದೂ ಬಿಂಬಿಸುವ ಹುನ್ನಾರಗಳು ನಡೆಯುತ್ತಿವೆ’ ಎಂದು ರಾಜ್ಯಸಭಾ ಸದಸ್ಯ, ನ್ಯಾಯಮೂರ್ತಿ ಎಂ.ರಾಮಾಜೋಯಿಸ್ ವಿಷಾದಿಸಿದರು.ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಸಂಘಟನೆಯ 56ನೇ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸಿದ್ದ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಶಿಕ್ಷಿತರಾಗುತ್ತಿದ್ದೇವೆ ನಿಜ. ಆದರೆ ಎಂಥ ಶಿಕ್ಷಣ ಎನ್ನುವುದು ಪ್ರಶ್ನಾರ್ಹವಾಗಿದೆ. ಯುವಕರಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಇಲ್ಲವೇ ಇಲ್ಲ’ ಎಂದರು. ‘ಭಾರತ ಜಗತ್ತಿನ ಅತ್ಯುನ್ನತ ತತ್ವಶಾಸ್ತ್ರವನ್ನು ಹೊಂದಿದ ರಾಷ್ಟ್ರ. ಶ್ಲೋಕಗಳು, ಉಪನಿಷತ್ತುಗಳು ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ   ಬಗ್ಗೆ ತಿಳಿಸಿವೆ. ಸ್ವಾಮಿ ವಿವೇಕಾನಂದರ ಮಾದರಿಯ ಶಿಕ್ಷಣ ನಮಗೆ ಅಗತ್ಯವಿದೆ. ನಮಗೆ ಕರ್ಮ ಮುಖ್ಯವಾದ ಶಿಕ್ಷಣ ಮುಖ್ಯವಾಗಬೇಕೇ ಹೊರತು, ಹಕ್ಕು ಆಧಾರಿತ ಶಿಕ್ಷಣ ಮುಖ್ಯವಾಗಬಾರದು’ ಎಂದು ಅವರು ವಿಶ್ಲೇಷಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, ‘ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ವಿಶ್ವವಿದ್ಯಾಲಯಗಳು, ಕಾಲೇಜುಗಳು ವಿಫಲವಾಗಿವೆ. ಈ ಅಭಿಪ್ರಾಯ ರಾಷ್ಟ್ರೀಯ ಮೌಲ್ಯೀಕರಣ ಹಾಗೂ ಮಾನ್ಯತಾ ಪರಿಷತ್ತು (ನ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಪದವಿ ಪಡೆದವರಿಗೆ ಉದ್ಯೋಗ ಸೃಷ್ಟಿಯಾಗದಿರುವುದು ಆತಂಕಕಾರಿ ಬೆಳವಣಿಗೆ. ಸಮಗ್ರ ವ್ಯಕ್ತಿತ್ವ ವಿಕಸನ ಶಿಕ್ಷಣದ ಮೂಲ ಉದ್ದೇಶ. ಆದರೆ ಅದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ದೊರೆಯುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ವಿಶ್ವದ ಅತ್ಯುತ್ತಮ ವಿವಿಗಳ ಪಟ್ಟಿಯಲ್ಲಿ ಭಾರತ ಸ್ಥಾನವನ್ನೇ ಪಡೆದಿಲ್ಲ. ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಇರುವ ಗುಣಮಟ್ಟದ ಶಿಕ್ಷಣವೂ ಇಲ್ಲಿಲ್ಲ’ ಎಂದು ನುಡಿದರು.ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ.ಮಿಲಿಂದ್ ಮರಾಠೆ ಮಾತನಾಡಿ, ‘ಪರಿಷತ್ ಶಿಕ್ಷಣದ ವ್ಯಾಪಾರೀಕರಣ, ಭ್ರಷ್ಟಾಚಾರ, ರಾಷ್ಟ್ರೀಯ ಸುರಕ್ಷೆಗೆ ಸಂಬಂಧಪಟ್ಟ ವಿಷಯಗಳನ್ನೆತ್ತಿಕೊಂಡು ತಾತ್ವಿಕ ನೆಲೆಯಲ್ಲಿ ಹೋರಾಟ ಬೆಳೆಸಲಿದೆ. ಶಿಕ್ಷಣದ ಖಾಸಗೀಕರಣ ಹಾಗೂ ಖಾಸಗಿಯವರ ಸಹಭಾಗಿತ್ವವನ್ನು ಸ್ವಾಗತಿಸುತ್ತೇವೆ. ಆದರೆ ಅದು ವ್ಯಾಪಾರೀಕರಣದ ಸ್ವರೂಪ ಪಡೆದುಕೊಳ್ಳುತ್ತಿದು ಅದನ್ನು ವಿರೋಧಿಸುತ್ತೇವೆ’ ಎಂದರು.‘ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ. ಸರ್ಕಾರವೇ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಎಂಜಿನಿಯರಿಂಗ್ ಸೀಟಿಗೆ ರೂ. 40,000 ಶುಲ್ಕವಿದೆ. ಹೀಗಿದ್ದಾಗ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಲೇಖಕ ಸುಭಾಷ್ ಶರ್ಮಾ ಅವರ ‘ಭಾರತ ಸಮೃದ್ಧಿ ಕಾ ಮಾರ್ಗ’ ಮತ್ತು ‘ಭವಿಷ್ಯಕಾ ದಿಶಾ ಸೂತ್ರ’ ಎಂಬ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಡಾ.ಎಂ.ಜಯದೇವ್, ಸಂಚಾಲಕ ಡಿ.ಎಂ.ಕಿರಣ್, ಎಬಿವಿಪಿ ರಾಜ್ಯ ಅಧ್ಯಕ್ಷ ಡಾ.ಶ್ರೀನಿವಾಸ ಬಳ್ಳಿ, ಕಾರ್ಯದರ್ಶಿ ವಿನಯ್ ಬಿದರೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.