ಬುಧವಾರ, ಜನವರಿ 22, 2020
16 °C

ರಾಷ್ಟ್ರೀಯ ಪೈಕಾ ಕ್ರೀಡೆಗೆ ಜಿಲ್ಲೆಯ ಆರು ಕ್ರೀಡಾಳುಗಳು ಆಯ್ಕೆ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಪೈಕಾ ಕ್ರೀಡೆಗೆ ಜಿಲ್ಲೆಯ ಆರು ಕ್ರೀಡಾಳುಗಳು ಆಯ್ಕೆ

ಕೋಲಾರ: ಜಿಲ್ಲೆಯ ಆರು ಕ್ರೀಡಾಪಟುಗಳು ರಾಷ್ಟ್ರ­ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಕೀರ್ತಿ ತರುವ ಸದಾಶಯದೊಡನೆ ಹೊರಟಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಕ್ರೀಡಾಪಟುಗಳು ರಾಷ್ಟ್ರ­ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂಬುದು ವಿಶೇಷ, ಈ ಆರು ಮಂದಿಯೂ ಗ್ರಾಮಾಂತರ ಪ್ರದೇಶದವರೇ ಆಗಿದ್ದಾರೆ ಎಂಬುದು ಗಮನಾರ್ಹ.ಕೊಕ್ಕೊ, ಕಬಡ್ಡಿ, ಈಜು ಮತ್ತು ಅಥ್ಲೆಟಿಕ್ಸ್ ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮೂವರು ಬಾಲಕಿಯರು ಮತ್ತು ಮೂವರು ಬಾಲಕರು ರಾಜ್ಯ­ವನ್ನು ಪ್ರತಿನಿಧಿಸಲಿರುವ ತಂಡಗಳಿಗೆ ಆಯ್ಕೆಯಾಗು­ವಲ್ಲಿ ಅವರ ದಣಿವರಿಯದ ಪರಿಶ್ರಮ  ಮತ್ತು ಪ್ರತಿಭೆ ಪ್ರಧಾನ ಪಾತ್ರ ವಹಿಸಿದೆ.ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಡಿ.15ರಿಂದ 18ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ವಿಭಾಗದಲ್ಲಿ ಸ್ಪರ್ಧಿ­ಸುವ ರಾಜ್ಯದ ತಂಡಗಳಿಗೆ ಮಾಲೂರು ತಾಲ್ಲೂಕಿನ ಪ್ರದೀಪ್, ವಿನೋದಿನಿ, ಕೆಜಿಎಫ್‌ನ  ಶ್ರುತಿ ಆಯ್ಕೆ­ಯಾಗಿ­ದ್ದಾರೆ. ಕೊಕ್ಕೊ ವಿಭಾಗದ ತಂಡದಲ್ಲಿ ಕೋಲಾರ ತಾಲ್ಲೂಕಿನ ಜಗದೀಶ್ ಆಯ್ಕೆಯಾಗಿ­ದ್ದಾರೆ. ಡಿ.19ರಿಂದ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪೈಕಾ ಮಹಿಳಾ ಕ್ರೀಡಾಕೂಟದ ಈಜು ಸ್ಪರ್ಧೆಗೆ ಕೆಜಿಎಫ್‌ನ ಸೌಂದರ್ಯ ಆಯ್ಕೆಯಾಗಿದ್ದಾರೆ.ಜ.7ರಿಂದ 9ರವರೆಗೆ ಆಂಧ್ರಪ್ರದೇಶದಲ್ಲಿ ನಡೆಯ­ಲಿ­ರುವ ಅಥ್ಲೆಟಿಕ್ಸ್ ವಿಭಾಗದ ಸ್ಪರ್ಧೆಗಳಲ್ಲಿ  ಭಾಗವಹಿಸಲು  ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಕೃಷ್ಣ­ಮೂರ್ತಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹಲವು ದಿಕ್ಕುಗಳಿಂದ ಈ ಕ್ರೀಡಾಪಟುಗಳು ಹೊರಹೊಮ್ಮಿ­ದ್ದಾರೆ.ಕಬಡ್ಡಿ ಪ್ರತಿಭೆಗಳು...

ಮಾಲೂರಿನ ಕುಪ್ಪೂರು ಗ್ರಾಮದ ಕಾಲೇಜು ವಿದ್ಯಾರ್ಥಿ ಪ್ರದೀಪ್ ಕಬಡ್ಡಿಗೆ ಬೇಕಾದ ಮೈಕಟ್ಟನ್ನು ರೂಢಿಸಿಕೊಳ್ಳುವುದರ ಜತೆಗೆ ಎದುರಾಳಿ­ಗಳನ್ನು ಮಣಿ­ಸುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡ ವಿಶಿಷ್ಟ ಕ್ರೀಡಾಪಟು.ದಾಳಿ ಮತ್ತು ಹಿಡಿತಗಳಲ್ಲಿ ನೈಪುಣ್ಯ ಹೊಂದಿರುವ ಈ ಕ್ರೀಡಾಪಟು ಮಾಲೂರು ತಾಲ್ಲೂಕಿನ ಕಬಡ್ಡಿ ತರಬೇತುದಾರರಾದ ಗೋಪಾಲ್ ಅವರ ಮಾರ್ಗ­ದರ್ಶ­ನದಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ.ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಗಮ­ನಾರ್ಹ ಸಾಧನೆ ಮಾಡಿರುವ ವಿನೋದಿನಿ ಮಾಲೂರು ತಾಲ್ಲೂಕಿನ ಯಶವಂತಪುರದ ಪ್ರತಿಭೆ. ಪ್ರಸ್ತುತ ಬೆಂಗಳೂರಿನ ವೈಟ್‌ ಫೀಲ್ಡಿನ ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ­ಯಾಗಿ­ರುವ ಈಕೆ ಡಿ.ಎಂ.ದೊಡ್ಡಿಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಕೆಜಿಎಫ್ ನ  ರಾಬರ್ಟ್ ಸನ್ ಪೇಟೆಯಲ್ಲಿರುವ ಮಹಾವೀರ್ ಜೈನ್ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾದ ಶೃತಿ ಇತ್ತೀಚೆಗೆ ಮಂಗಳೂರಿನಲ್ಲಿ ಕರ್ನಾಟಕ ಕಬಡ್ಡಿ ಅಸೋಸಿಯೇಶನ್ ನಡೆಸಿದ ರಾಜ್ಯಮಟ್ಟದ ಸಬ್ ಜೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದ ತಂಡದಲ್ಲಿ ಗಮನಾರ್ಹ ಆಟವಾಡಿದವರು.ಕಳೆದ ಎರಡು ವರ್ಷದಿಂದ ಜೈನ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ಪ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ,ಕೊಕ್ಕೋ ಪ್ರತಿಭೆ...

ಕೊಕ್ಕೊ ತಂಡಕ್ಕೆ ಆಯ್ಕೆಯಾಗಿರುವ ಜಗದೀಶ್ ಎದುರಾಳಿಯನ್ನು ಬೆನ್ನಟ್ಟುವ ವೇಗದ ಬಗ್ಗೆಯೇ ಸದಾ ಚಿಂತಿಸುವ ಯುವ ಕ್ರೀಡಾಪಟು. ಕೋಲಾರ ತಾಲ್ಲೂಕಿನ ಹರಟಿ ಗ್ರಾಮದ ಈ ಯುವಕ ಕೋಲಾರ ಕೊಕ್ಕೊ ಕ್ಲಬ್ ನ ಪ್ರತಿಭಾವಂತ ಕ್ರೀಡಾಪಟುಗಳಲ್ಲಿ ಒಬ್ಬರು. ದಿನವೂ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಅಭ್ಯಾಸ ನಡೆಸುವ ಈ ಗ್ರಾಮೀಣ ಪ್ರತಿಭೆ ಈಗ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯ ತಂಡದಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.ಅಥ್ಲೆಟಿಕ್ಸ್..

ಅಥ್ಲೆಟಿಕ್ಸ್‌ನಲ್ಲಿ ಆಯ್ಕೆಯಾಗಿರುವ ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದ ಪ್ರತಿಭೆ ಕೃಷ್ಣಮೂರ್ತಿ ಈಗಾಗಲೇ ರಾಜ್ಯಮಟ್ಟದ ಕ್ರೀಡಾಕೂಟ­ಗಳ ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿರುವ ಈತ ಎತ್ತರ ಜಿಗಿತ ಸ್ಪರ್ಧೆಗೆ ಬೇಕಾದ ಎತ್ತರವಿರುವ ಮತ್ತು ವಾಲಿಬಾಲ್ ಆಟದಲ್ಲೂ ಪರಿಶ್ರಮವಿರುವ ಕ್ರೀಡಾಪಟು. ತನ್ನ ಗ್ರಾಮದಲ್ಲೂ ಅಭ್ಯಾಸ ನಡೆಸುವ ಈತ ನಗರದ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲೂ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್.ಶಂಕರಪ್ಪ ಅವರ ಮಾರ್ಗದರ್ಶನದಲ್ಲೂ ನಿಯಮಿತವಾಗಿ ವೈಜ್ಞಾನಿಕ ತರಬೇತಿ ಪಡೆಯುತ್ತಿದ್ದಾರೆ.ಈಜುವೆನು ನಾನು

ಈಜು ಪ್ರತಿಭೆ ಸೌಂದರ್ಯ ಕೆಜಿಎಫ್  ಜನರಿಗೆ ಹೆಚ್ಚು ಪರಿಚಯವಿಲ್ಲದ ಅಪರೂಪದ ಕ್ರೀಡಾಪಟು. ಬ್ಯಾಕ್ ಸ್ಟ್ರೋಕ್, ಬಟರ್ ಫ್ಲೈ, ಫ್ರೀ ಸ್ಟೈಲ್ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ಕೆಲವೇ ಯುವ ಕ್ರೀಡಾಪಟುಗಳಲ್ಲಿ ಈಕೆಯೂ ಒಬ್ಬರು ಎಂಬುದು ವಿಶೇಷ.ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್, ನ್ಯಾಷನಲ್ ಸ್ಕೂಲ್ ಗೇಮ್ಸ್, ಮೈಸೂರು ದಸರಾ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸಿದ್ದ ವಿವಿಧ ಹಂತದ ಪೈಕಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಈ ಕ್ರೀಡಾಪಟುಗಳು ಈಗ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆಯ್ಕೆ­ಯಾಗಿ­ರುವುದು ಅತೀವ ಸಂತಸ ತಂದಿದೆ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ಮತ್ತು ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್.­ಶಂಕರಪ್ಪ.

ಪ್ರತಿಕ್ರಿಯಿಸಿ (+)