ಗುರುವಾರ , ಜೂನ್ 24, 2021
23 °C

ರಾಷ್ಟ್ರೀಯ ಹಾಕಿ ಪಟುಗಳಿಗೆ ತವರೂರ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹಾಕಿ ಪಟುಗಳಿಗೆ ತವರೂರ ಸನ್ಮಾನ

ಗೋಣಿಕೊಪ್ಪಲು: ಒಲಿಪಿಂಕ್‌ಗೆ ಭಾರತೀಯ ಹಾಕಿ ತಂಡ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡಗಿನ ಹಾಕಿ ಪಟುಗಳಾದ ಸಣ್ಣುವಂಡ ಉತ್ತಪ್ಪ, ಎಸ್.ವಿ. ಸುನಿಲ್ ಹಾಗೂ ವಿ.ಆರ್. ರಘುನಾಥ್ ಅವರಿಗೆ ಪಟ್ಟಣದಲ್ಲಿ ಸೋಮವಾರ ಹೃದಯಸ್ಪರ್ಶಿ ಸನ್ಮಾನ ನೀಡಲಾಯಿತು. ಭಾರತೀಯ ಹಾಕಿ ತಂಡದ ಅತಿ ಕಿರಿಯ ಆಟಗಾರನಾದ ಸಣ್ಣುವಂಡ ಉತ್ತಪ್ಪ ಅವರ ತವರೂರಾದ ಮಾಯಮುಡಿಯ (ಗೋಣಿಕೊಪ್ಪಲಿನಿಂದ 5ಕಿ.ಮೀ. ದೂರ) ಸಣ್ಣುವಂಡ ಕುಟುಂಬಸ್ಥರು ಹಮ್ಮೆಯ ಪುತ್ರನಿಗೆ ಜಯಕಾರ ಹಾಕಿದರು. ಉತ್ತಪ್ಪ ಅವರೊಂದಿಗೆ ಇದ್ದ ಕೊಡಗಿನ ಇತರ ಆಟಗಾರರಾದ ಸುನೀಲ್ ಹಾಗೂ ರಘುನಾಥ್ ಅವರಿಗೂ ಜಯಘೋಷಗಳ ಸುರಿಮಳೆಗರೆಯಲಾಯಿತು.ಇಲ್ಲಿನ ಆರ್‌ಎಂಸಿ ಆವರಣದಿಂದ ತೆರೆದ ವಾಹನದಲ್ಲಿ ಆರಂಭಗೊಂಡ ಕ್ರೀಡಾಪಟುಗಳ ಮೆರವಣಿಗೆ ಪಟ್ಟಣದ ಮುಖ್ಯರಸ್ತೆ, ಉಮಾಮಹೇಶ್ವರಿ ದೇವಸ್ಥಾನದ ವರೆಗೆ ಮಂಗಳವಾದ್ಯಗಳೊಂದಿಗೆ ಸಾಗಿತು. ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಜನತೆ ಕ್ರೀಡಾಪಟುಗಳನ್ನು ನೋಡಿ ಆನಂದಿಸಿದರು. ಕೆಲವರು ಹಸ್ತಲಾಘವ ನೀಡಿ ಶುಭ ಕೋರಿದರು.ಪಟ್ಟಣದ ಬಸ್ ನಿಲ್ದಾಣದ ಬಳಿಗೆ ಮೆರವಣಿಗೆ ಬಂದಾಗ ಅಭಿಮಾನಿಗಳು ಪಟಾಕಿ ಸಿಡಿಸಿ, ವಾದ್ಯದ ತಾಳಕ್ಕೆ ತಕ್ಕಂತೆ  ಹೆಜ್ಜೆ ಹಾಕಿದರು. ಕೆಲವರು ಹಾರ ಹಾಕಿ ಕೊಡಗಿನ ಕುವರರನ್ನು ಅಭಿನಂದಿಸಿದರು. ಬಳಿಕ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕೊಡಗು ಹಾಕಿ ಸಂಸ್ಥೆ ಕಾರ್ಯದರ್ಶಿ ಪಾರ್ಥ ಚಂಗಪ್ಪ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಕೊಡವ ಇಗ್ಗುತಪ್ಪ ಸಂಘ, ಸಣ್ಣುವಂಡ ಕುಟುಂಬಸ್ಥರು, ಪ್ರೆಸ್ ಕ್ಲಬ್, ಮುಳಿಯ ಜ್ಯುವೆಲರ್ಸ್‌, ಜಯಲಕ್ಷ್ಮಿ ಜ್ಯುವೆಲರ್ಸ್‌ ಮುಂತಾದ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿದರು. ಇಗುತ್ತಪ್ಪ ಕೊಡವ ಸಂಘದ ಅಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ಸಣ್ಣುವಂಡ ತಿಮ್ಮಯ್ಯ, ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಅಧ್ಯಕ್ಷ ದತ್ತಾತ್ರಿ, ಉದ್ಯಮಿ ಎಂ.ಜಿ. ಮೋಹನ್ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.