ರಿತೇಶ್-ಜೆನಿಲಿಯಾ ಆರತಕ್ಷತೆಗೆ ತಾರೆಯರ ದಂಡು

7

ರಿತೇಶ್-ಜೆನಿಲಿಯಾ ಆರತಕ್ಷತೆಗೆ ತಾರೆಯರ ದಂಡು

Published:
Updated:

ಮುಂಬೈ (ಪಿಟಿಐ): ಶುಕ್ರವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಬಾಲಿವುಡ್ ತಾರೆಯರಾದ ರಿತೇಶ್ ದೇಶ್‌ಮುಖ್- ಜೆನಿಲಿಯಾ ಡಿಸೋಜಾ ಜೋಡಿ ಶನಿವಾರ ರಾತ್ರಿ ಮುಂಬೈನಲ್ಲಿ ಆಯೋಜಿಸಿದ್ದ ಆರತಕ್ಷತೆ ಸಮಾರಂಭಕ್ಕೆ  ಬಾಲಿವುಡ್‌ನ ತಾರಾ ಬಳಗ ಸಾಕ್ಷಿಯಾಯಿತು.ಮಹಾರಾಷ್ಟ್ರದ ಸಂಪ್ರದಾಯದಂತೆ ಶುಕ್ರವಾರ ನಡೆದ ಅದ್ಧೂರಿ ವಿವಾಹ ಸಮಾರಂಭ ಬಳಿಕ ರಿತೇಶ್-ಜೆನಿಲಿಯಾ ದಂಪತಿ ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ನಿಷ್ಠಾಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡರು.ಆ ಬಳಿಕ ಸಂಜೆ ಮುಂಬೈನ ಹೊರ ವಲಯದಲ್ಲಿರುವ ಗ್ರ್ಯಾಂಡ್‌ಹ್ಯಾಟ್ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಿತು.

 ಆರತಕ್ಷತೆಯಲ್ಲಿ ಜೆನಿಲಿಯಾ ನಸು ಹಳದಿ ವರ್ಣದ ಲೆಹೆಂಗಾ ಧರಿಸಿ ಕಂಗೊಳಿಸಿದರೆ, ರಿತೇಶ್ ದೇಶ್‌ಮುಖ್ ಕಪ್ಪು ಬಣ್ಣ ಕುರ್ತಾ ಧರಿಸಿ ಮಿಂಚಿದರು.ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಮಾವ ಅಮಿತಾಭ್ ಬಚ್ಚನ್ ಮತ್ತು ಅತ್ತೆ ಜಯಾ ಬಚ್ಚನ್ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು. ನವೆಂಬರ್ 16ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಐಶ್ವರ್ಯಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು. ಇವರಲ್ಲದೆ, ಮಾಧುರಿ  ದೀಕ್ಷಿತ್, ಜೂಹಿ ಚಾವ್ಲಾ, ಕರೀನಾ ಕಪೂರ್, ಸೈಫ್‌ಅಲಿ ಖಾನ್, ಅಮೀರ್ ಖಾನ್, ಇಮ್ರಾನ್ ಖಾನ್ ದಂಪತಿ,   ಅನುಷ್ಕಾ ಶರ್ಮಾ, ಅಫ್ತಾಬ್ ಶಿವ್‌ದಸಾನಿ, ಅರ್ಷದ್ ವಾರ್ಸಿ, ಅಮಿಶಾ ಪಟೇಲ್, ಜಿಯಾ ಖಾನ್, ಸುಶ್ಮಿತಾ ಸೇನ್, ರಣ್‌ಬೀರ್ ಕಪೂರ್, ಅಬ್ಬಾಸ್-ಮಸ್ತಾನ್, ಜಾಕ್ವೆಲೀನ್ ಫೆರ್ನಾಂಡಿಸ್, ಜಯೆದ್‌ಖಾನ್, ಹಿಮೇಶ್ ರೆಶಮಿಯಾ, ಝರೀನ್ ಖಾನ್, ಶೇಖರ್ ಸುಮನ್ ಸೇರಿದಂತೆ ಬಾಲಿವುಡ್‌ನ ಹಲವು ನಟ ನಟಿಯರು ನವಜೋಡಿಗೆ ಶುಭ ಹಾರೈಸಿದರು.  ಉದ್ಯಮಿ ಮುಖೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಹಾಗೂ ಇತರ ಹಲವು ಗಣ್ಯರು ಈ  ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry