ರೂ 50 ಲಕ್ಷದ ಅಕ್ರಮ ಕ್ರಿಮಿನಾಶಕ ವಶ

7

ರೂ 50 ಲಕ್ಷದ ಅಕ್ರಮ ಕ್ರಿಮಿನಾಶಕ ವಶ

Published:
Updated:
ರೂ 50 ಲಕ್ಷದ ಅಕ್ರಮ ಕ್ರಿಮಿನಾಶಕ ವಶ

ವಿಜಾಪುರ:  ದ್ರಾಕ್ಷಿ, ತೊಗರಿ, ತರಕಾರಿ, ಹತ್ತಿ ಮತ್ತಿತರ ಬೆಳೆಗಳಿಗೆ ಬಳಸುವ ಕ್ರಿಮಿನಾಶಕ ಹಾಗೂ ಪೌಷ್ಟಿಕಾಂಶಗಳನ್ನು ತಯಾರಿಸಿ, ಹೆಸರಾಂತ ಕಂಪೆನಿಗಳ ಹೆಸರಿನಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ.

ಇಲ್ಲಿಯ ಮಹಾಲಬಾಗಾಯತ್ ಕೈಗಾರಿಕಾ ಪ್ರದೇಶದಲ್ಲಿ ನಕಲಿ ಕ್ರಿಮಿನಾಶಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಕ್ರಿಮಿನಾಶಕ ವಶಪಡಿಸಿಕೊಂಡಿದ್ದಾರೆ.

ಒಂದು ಲೀಟರ್‌ಗೆ 1,000 ದಿಂದ 5,000 ರೂಪಾಯಿವರೆಗೆ ಬೆಲೆ ಇರುವ ಕಳಪೆ ಕ್ರಿಮಿನಾಶಕ, ಪೌಷ್ಟಿಕಾಂಶಗಳನ್ನು ತಯಾರಿಸಿ ಅದಕ್ಕೆ ಪ್ರಸಿದ್ಧ ಕಂಪೆನಿಗಳ ಲೇಬಲ್ ಅಂಟಿಸಿ ವಿಜಾಪುರ, ಬೀದರ್, ಗುಲ್ಬರ್ಗ ಜಿಲ್ಲೆಗಳು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವ ದೊಡ್ಡ ಜಾಲವೇ ಇದಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

`ಸಂಗಮೇಶ್ವರ ಕೊಲ್ಹಾರ ಎಂಬಾತ ಇಲ್ಲಿ ನಕಲಿ ಕ್ರಿಮಿನಾಶಕ ತಯಾರಿಸಿ, ದೇಶ-ವಿದೇಶದ ವಿವಿಧ ಪ್ರಸಿದ್ಧ ಕಂಪೆನಿಗಳ ಲೇಬಲ್ ಅಂಟಿಸಿ ರೈತರಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿ ಪರಾರಿಯಾಗಿದ್ದು, ನಕಲಿ ಮಾಲು ವಶಪಡಿಸಿಕೊಳ್ಳಲಾಗಿದೆ~ ಎಂದು ದಾಳಿಯ ನೇತೃತ್ವ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಡಾ.ಸಿ. ಭೈರಪ್ಪ ಹೇಳಿದರು.

`ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬಳಸುವ `ಪ್ರೋಟಿನ್~, `ರಾಕ್~, `ಬಾಕ್ಸರ್~, `ಸಮರ್ಥ~, `ಗ್ರೀನ್~, `ರೇಂಜರ್~, `ಸಿಕ್ಸರ್~ ಮತ್ತಿತರ ಹಾಗೂ ಆಸ್ಟ್ರೇಲಿಯಾ ದೇಶದ ಪ್ರಸಿದ್ಧ ಉತ್ಪನ್ನ `ನ್ಯೂಟನ್~ ಕಂಪೆನಿಯ ಲೇಬಲ್ ಬಳಸಿ ನಕಲಿ ಕ್ರಿಮಿನಾಶಕ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ~ ಎಂದು ಮಾಹಿತಿ ನೀಡಿದರು.

`ನಕಲಿ ಕ್ರಿಮಿನಾಶಕ ತಯಾರಿಸಲು ಇಲ್ಲಿ ಸಂಗ್ರಹಿಸಿರುವ ರಾಸಾಯನಿಕ ಯಾವುದು ಎಂಬುದರ ವಿಶ್ಲೇಷಣೆಗೆ ಧಾರವಾಡ ಮತ್ತು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಜಿಲ್ಲೆಯ ಇತರ ಅಂಗಡಿಗಳ ಮೂಲಕ ಈತ ಈ ನಕಲಿ ಉತ್ಪನ್ನ ಮಾರಾಟ ಮಾಡಿರುವ ಶಂಕೆ ಇದ್ದು, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಮಾಡುವ ಎಲ್ಲ ಅಂಗಡಿಗಳನ್ನು ತಪಾಸಣೆ ನಡೆಸಲಾಗುವುದು~ ಎಂದರು.

`ಈ ವ್ಯಕ್ತಿ ಕ್ರಿಮಿನಾಶಕ ತಯಾರಿಕೆ-ದಾಸ್ತಾನು-ಮಾರಾಟಕ್ಕೆ ಯಾವುದೇ ಪರವಾನಿಗೆ ಪಡೆದುಕೊಂಡಿಲ್ಲ. ಎಷ್ಟು ದಿನಗಳಿಂದ ಈ ದಂಧೆ ನಡೆಯುತ್ತಿತ್ತು ಎನ್ನುವುದು ಗೊತ್ತಾಗಿಲ್ಲ~ ಎಂದು ಭೈರಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry