ಶುಕ್ರವಾರ, ಏಪ್ರಿಲ್ 16, 2021
22 °C

ರೂ.23 ಕೋಟಿ ವಾಪಸ್: ಮರು ಹಂಚಿಕೆ

ಕೆ.ನರಸಿಂಹಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಿಂದ (ಸಿಎಂಎಸ್‌ಎಂಟಿಡಿಪಿ) ಕೊಟ್ಟ ಹಣವನ್ನು ಖರ್ಚ ಮಾಡದ ರಾಜ್ಯದ 9 ಜಿಲ್ಲೆಗಳ ನಗರಸಭೆಗಳಿಂದ ಶೇ 40ಕ್ಕಿಂತಲೂ ಹೆಚ್ಚು ಹಣವನ್ನು ವಾಪಸ್ ಪಡೆದು ಇತರೆ ಸ್ಥಳೀಯ ಸಂಸ್ಥೆಗಳಿಗೆ ಮರು ಹಂಚಿಕೆ ಮಾಡಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ.ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗಳು ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 9 ಜಿಲ್ಲೆಗಳಿಂದ ವಾಪಸ್ ಪಡೆಯುವ ಹಣವನ್ನು 13 ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮರು ಹಂಚಿಕೆಯನ್ನೂ ಮಾಡಲಾಗಿದೆ.ಮಂಡ್ಯ, ಉಡುಪಿ, ಗದಗ, ಶಿವಮೊಗ್ಗ, ಬೀದರ್, ಯಾದಗಿರಿ, ಚಾಮರಾಜನಗರ, ಕೊಪ್ಪಳ ಮತ್ತು ಕೋಲಾರ ಅನುದಾನ ಕಳೆದುಕೊಳ್ಳುತ್ತಿರುವ ಜಿಲ್ಲೆಗಳು. ಈ 9 ಜಿಲ್ಲೆಗಳ ನಗರಸಭೆಗಳಿಗೆ 61.18 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 23.11 ಕೋಟಿ ವಾಪಸ್ ಪಡೆಯಲು ಸೂಚಿಸಿ ಆ.10ರಂದು ಇಲಾಖೆಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.23.11 ಕೋಟಿ ಪೈಕಿ 18.61ಕೋಟಿಯನ್ನು ಮರು ಹಂಚಿಕೆ ಮಾಡಲಾಗಿದೆ. ವಿವರ ಹೀಗಿದೆ: ರಬಕವಿ -ಬನಹಟ್ಟಿ-1.66 ಕೋಟಿ, ಬಾದಾಮಿ-1.88 ಕೋಟಿ, ಬೀಳಗಿ-1.60 ಕೋಟಿ, ಗುಳೇದಗುಡ್ಡ 66 ಲಕ್ಷ, ಇಳಕಲ್-1.66 ಕೋಟಿ, ಜಮಖಂಡಿ-1.66 ಕೋಟಿ, ಕೆರೂರು-66 ಲಕ್ಷ, ಮಹಾಲಿಂಗಪುರ 1.06 ಕೋಟಿ, ಬಂಟ್ವಾಳ-1.66 ಕೋಟಿ, ಕಡೂರು-1.66 ಕೋಟಿ, ಬೀರೂರು 66 ಲಕ್ಷ, ತರೀಕೆರೆ-1.66 ಕೋಟಿ, ಚಿಕ್ಕಮಗಳೂರು 2 ಕೋಟಿ.

ಬಳಕೆಯಾಗದ ಮೊತ್ತ: 9 ಜಿಲ್ಲೆಗಳಲ್ಲಿ ಬಳಕೆಯಾಗದ ಮೊತ್ತ ಮತ್ತು ವಾಪಸಾಗುತ್ತಿರುವ ಮೊತ್ತದ ವಿವರ ಕ್ರಮವಾಗಿ ಹೀಗಿದೆ:ಮಂಡ್ಯ-5.37 ಕೋಟಿ ಪೈಕಿ 2 ಕೋಟಿ, ಉಡುಪಿ 6.51 ಕೋಟಿ ಪೈಕಿ 2.5 ಕೋಟಿ, ಗದಗ-7.66 ಕೋಟಿ ಪೈಕಿ 3 ಕೋಟಿ, ಶಿವಮೊಗ್ಗ- 6.73 ಕೋಟಿ ಪೈಕಿ 3 ಕೋಟಿ, ಬೀದರ್-8.64 ಕೋಟಿ ಪೈಕಿ 3.5 ಕೋಟಿ, ಯಾದಗಿರಿ-4.70 ಕೋಟಿ ಪೈಕಿ 1.11 ಕೋಟಿ, ಚಾಮರಾಜನಗರ-6.97 ಕೋಟಿ ಪೈಕಿ 2.5 ಕೋಟಿ, ಕೊಪ್ಪಳ -3.93 ಕೋಟಿ ಪೈಕಿ  50 ಲಕ್ಷ ಮತ್ತು ಕೋಲಾರ 10.64 ಕೋಟಿ ಪೈಕಿ 5 ಕೋಟಿ ವಾಪಸಾಗುತ್ತಿದೆ.ಕೋಲಾರ ಹೆಚ್ಚು

ಆಪರೇಷನ್ ಕಮಲದ ಅಡಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬಂಗಾರಪೇಟೆ ವಿಧಾನ ಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ನಾರಾಯಣಸ್ವಾಮಿ ಮತ್ತೆ ಆಯ್ಕೆಯಾದ ಬಳಿಕ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದೊಂದೇ ಕ್ಷೇತ್ರಕ್ಕೆ ಅಲ್ಲದೆ, ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡವ ಭರವಸೆ ನೀಡಿದ್ದರು. ಅದರಂತೆಯೇ ಕೋಲಾರ ನಗರಭೆಗೆ 10 ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಿತ್ತು.ಆದರೆ ಸದಸ್ಯರ ಆಂತರಿಕ ಕಲಹ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶರ ನಡುವಿನ ರಾಜಕೀಯ ವೈಮನಸ್ಯ, ಇಬ್ಬರ ಬಣಗಳ ಸದಸ್ಯರ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರಿದ ಪ್ರಯುಕ್ತ ನಗರಸಭೆ ಅನುದಾನ ಬಳಸಿಕೊಳ್ಳುವಲ್ಲಿ ಹಿಂದೆ ಬೀಳುವಂತಾಯಿತು.ಅನುದಾನ ಬಳಸದಿರುವ ಬಗ್ಗೆ ನಗರಸಭೆಯ ವಿಶೇಷ ಸಭೆಗಳಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಯೂ, ವಾಗ್ವಾದವೂ ನಡೆದಿವೆ. 9 ಜಿಲ್ಲೆಗಳ ಪೈಕಿ ಅತಿ ಹೆಚ್ಚು ಅನುದಾನ ಪಡೆದರೂ ಅದನ್ನು ಬಳಸದ ಕೋಲಾರ ನಗರಸಭೆಯಿಂದ ಈಗ ಆ ಜಿಲ್ಲೆಗಳಿಗಿಂತಲೂ ಹೆಚ್ಚು ಅನುದಾನ ಸರ್ಕಾರಕ್ಕೆ ವಾಪಸಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.